ADVERTISEMENT

ಚಿಕ್ಕಬಳ್ಳಾಪುರ | ಸಮುದಾಯ ಆರೋಗ್ಯ ರಕ್ಷಣೆಗೆ ಆರೋಗ್ಯ ಪಡೆ ಕಟ್ಟಿದ ವೈದ್ಯ

ಕೋವಿಡ್‌ನಿಂದ ಸಮುದಾಯ ಆರೋಗ್ಯ ರಕ್ಷಣೆಗೆ ತಂಡಗಳ ರಚನೆ, ಮೊದಲ ಹಂತದಲ್ಲಿ 130 ಹಳ್ಳಿಗಳಲ್ಲಿ ಸೇವೆ

ಈರಪ್ಪ ಹಳಕಟ್ಟಿ
Published 28 ಜುಲೈ 2020, 19:30 IST
Last Updated 28 ಜುಲೈ 2020, 19:30 IST
ಹಳ್ಳಿಯೊಂದರಲ್ಲಿ ಹಿರಿಯ ನಾಗರಿಕರೊಬ್ಬರ ಆರೋಗ್ಯ ತಪಾಸಣೆ ನಡೆಸುತ್ತಿರುವ ಗ್ರಾಮ ಆರೋಗ್ಯ ಯುವ ಪಡೆ ಸದಸ್ಯರು
ಹಳ್ಳಿಯೊಂದರಲ್ಲಿ ಹಿರಿಯ ನಾಗರಿಕರೊಬ್ಬರ ಆರೋಗ್ಯ ತಪಾಸಣೆ ನಡೆಸುತ್ತಿರುವ ಗ್ರಾಮ ಆರೋಗ್ಯ ಯುವ ಪಡೆ ಸದಸ್ಯರು   

ಚಿಕ್ಕಬಳ್ಳಾಪುರ: ಕೋವಿಡ್‌ನಂತಹ ವಿಪತ್ತಿನ ಕಾಲದಲ್ಲೂ ವೈದ್ಯರು ವೃತ್ತಿಧರ್ಮ ಮರೆತು ಸುಲಿಗೆಯಲ್ಲಿ ನಿರತರಾಗಿದ್ದಾರೆ ಎಂಬ ಆರೋಪಗಳು ಅಲ್ಲಲ್ಲಿ ಕೇಳಿಬರುತ್ತಿರುವೆ. ಇದಕ್ಕೆ ಅಪವಾದ ಎಂಬಂತೆ ಜಿಲ್ಲೆಯ ಖಾಸಗಿ ವೈದ್ಯರೊಬ್ಬರು ಗ್ರಾಮೀಣ ಜನರ ಆರೋಗ್ಯದ ಮೇಲೆ ನಿಗಾ ಇಡಲು ‘ಗ್ರಾಮ ಆರೋಗ್ಯ ಯುವ ಪಡೆ’ಗಳನ್ನು ರಚನೆ ಮಾಡುವ ಮೂಲಕ ವೃತ್ತಿ ಘನತೆ ಮೆರೆಯುತ್ತಿದ್ದಾರೆ.

ಬಾಗೇಪಲ್ಲಿಯ ಪೀಪಲ್ಸ್‌ ಆಸ್ಪತ್ರೆಯ ಸಂಸ್ಥಾಪಕ ಡಾ.ಅನಿಲ್ ಕುಮಾರ್ ಆವುಲಪ್ಪ ಅವರೇ ಇಂತಹದೊಂದು ವಿನೂತನವಾದ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡ ವೈದ್ಯ. ನೆರೆಯ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಹಿಂದುಳಿದ ತಾಲ್ಲೂಕುಗಳಾದ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕುಗಳು ಇವರ ಕಾರ್ಯಕ್ಷೇತ್ರ.

ಅನೇಕ ವರ್ಷಗಳಿಂದ ತಮ್ಮ ಸಮಾಜಮುಖಿ ಸೇವೆಯ ಮೂಲಕ ಕಾರ್ಮಿಕರ ವಲಯದಲ್ಲಿ ’ಬಡ ಜನರ ವೈದ್ಯ‘ರಾಗಿ ಗುರುತಿಸಿಕೊಂಡಿರುವ ಡಾ.ಅನಿಲ್‌ ಕುಮಾರ್ ಅವರು ಇದೀಗ ಸಮುದಾಯದಲ್ಲಿ ಸೋಂಕು ಹರಡುವುದು ತಡೆಯುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.

ADVERTISEMENT

ಅದಕ್ಕಾಗಿ ಅವರು ಮೊದಲ ಹಂತದಲ್ಲಿ ಬಾಗೇಪಲ್ಲಿ ತಾಲ್ಲೂಕಿನ 119 ಮತ್ತು ಗುಡಿಬಂಡೆ ತಾಲ್ಲೂಕಿನ 11 ಹೀಗೆ ಒಟ್ಟು 130 ಹಳ್ಳಿಗಳಲ್ಲಿ ಸ್ಥಳೀಯ ವಿದ್ಯಾವಂತ ಯುವಕರ ಸಹಕಾರದಲ್ಲಿ ‘ಗ್ರಾಮ ಆರೋಗ್ಯ ಯುವ ಪಡೆ’ಗಳನ್ನು ರಚನೆ ಮಾಡಿದ್ದಾರೆ.

ಪ್ರತಿ ಆರೋಗ್ಯ ಪಡೆಗೆ ₹4,000 ಮೌಲ್ಯದ ತಲಾ ಒಂದು ನಾಡಿ ಮಿಡಿತ ಪರೀಕ್ಷೆ ಸಾಧನ (ಪಲ್ಸ್‌ ರೀಡಿಂಗ್ ಡಿವೈಸ್), ದೇಹದ ಉಷ್ಣಾಂಶ ಪರೀಕ್ಷೆ ಸಾಧನ (ಥರ್ಮಲ್ ಸ್ಕ್ಯಾನರ್) ವಿತರಿಸಿ, ಅವುಗಳ ಬಳಕೆಯ ಬಗ್ಗೆ ತರಬೇತಿ ನೀಡಿದ್ದಾರೆ. ಪ್ರತಿ ತಂಡಕ್ಕೊಂದು ಆರೋಗ್ಯ ರಿಜಿಸ್ಟರ್‌ ಪುಸ್ತಕ ನೀಡುವ ಜತೆಗೆ ದೈನಂದಿನ ಪರೀಕ್ಷೆಗಳ ಮಾಹಿತಿ ವಿನಿಮಯಕ್ಕಾಗಿ ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ರಚಿಸಿದ್ದಾರೆ.

ಆರೋಗ್ಯ ಪಡೆಯ ಸದಸ್ಯರು ಹಳ್ಳಿಗಳಲ್ಲಿ ಮನೆ ಮನೆಗೆ ಹೋಗಿ ಜನರ ಆರೋಗ್ಯ ತಪಾಸಣೆ ಮಾಡುವ ಕೋವಿಡ್‌ ಕುರಿತಂತೆ ಸಮುದಾಯದಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಜತೆಗೆ 60 ವರ್ಷ ದಾಟಿದವರು ಮತ್ತು ಪ್ರಾಣಾಪಾಯಕ್ಕೆ ಒಳಗಾಗುವ ಸಾಧ್ಯತೆ ಉಳ್ಳವರನ್ನು ಪತ್ತೆ ಮಾಡಿ ಅವರಿಗೆ ಕಡ್ಡಾಯವಾಗಿ ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳುವಳಿಕೆ ಮೂಡಿಸುತ್ತಿದ್ದಾರೆ.

60 ವರ್ಷ ದಾಟಿದವರು ಮತ್ತು ಪ್ರಾಣಾಪಾಯದ ಅಂಚಿನಲ್ಲಿ ಇರುವವರಿಗೆ ನಿತ್ಯ ಪರೀಕ್ಷೆ ಮಾಡುವ ತಂಡಗಳು, ಪ್ರತಿ ವಾರಕ್ಕೊಮ್ಮೆ ಮಧುಮೇಹ, ರಕ್ತದೊತ್ತಡ ಪರೀಕ್ಷೆ ನಡೆಸಲಿವೆ. ಈ ಎಲ್ಲ ಮಾಹಿತಿಗಳನ್ನು ಆರೋಗ್ಯ ರಿಜಿಸ್ಟರ್‌ನಲ್ಲಿ ದಾಖಲಿಸಲಿವೆ.

ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ವಿನಿಮಯವಾಗುವ ಆರೋಗ್ಯ ವರದಿಗಳನ್ನು ಆಧರಿಸಿ ಅನಿಲ್‌ಕುಮಾರ್ ಅಗತ್ಯವಿದ್ದವರಿಗೆ ಚಿಕಿತ್ಸೆ ಒದಗಿಸುತ್ತಾರೆ. ಕೆಮ್ಮು, ನೆಗಡಿ, ಜ್ವರದಿಂದ ಬಳಲುವವರಿಗೆ ಔಷಧಿ, ಮಾತ್ರೆಗಳನ್ನು ಪೂರೈಸುತ್ತಾರೆ.

ವೈದ್ಯಕೀಯ ಕುಟುಂಬದ ಹಿನ್ನೆಲೆ ಹೊಂದಿರುವ ಅನಿಲ್‌ಕುಮಾರ್‌ ಅವರು ಸಿಪಿಎಂ ಬಾಗೇಪಲ್ಲಿ ಶಾಖೆಯ ಕಾರ್ಯದರ್ಶಿ ಕೂಡ ಆಗಿ, ಮೊದಲಿನಿಂದಲೂ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದವರು. ಹೀಗಾಗಿ, ಇವರ ಸೇವಾ ಕಾರ್ಯಗಳಿಗೆ ಕುಟುಂಬದವರು, ಸ್ನೇಹಿತರು, ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.