ADVERTISEMENT

ಭಾಷೆಯ ಅರಿವಿಗೊಂದು ‘ಲಿಪಿ ಮನೆ’: ಎಚ್‌.ಎನ್.ಪ್ರಾಧಿಕಾರದ ಮಹತ್ವದ ಯೋಜನೆ

ಡಿ.ಎಂ.ಕುರ್ಕೆ ಪ್ರಶಾಂತ
Published 13 ಜೂನ್ 2025, 6:07 IST
Last Updated 13 ಜೂನ್ 2025, 6:07 IST
<div class="paragraphs"><p>‘ಲಿಪಿ ಮನೆ’ಯ ಮಾದರಿ</p></div>

‘ಲಿಪಿ ಮನೆ’ಯ ಮಾದರಿ

   

ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲ್ಲೂಕಿನ ಹೊಸೂರು ಹೋಬಳಿಯ ಹೊಸಕೋಟೆ ಕ್ರಾಸ್‌ನ ಎಚ್‌.ನರಸಿಂಹಯ್ಯ ವಿಜ್ಞಾನ ಕೇಂದ್ರವು ಇಲ್ಲಿಯವರೆಗೆ ಸೌರಮಂಡಲ, ಮಾನವನ ಉಗಮ, ವಿಕಾಸ, ಧ್ವನಿ ತರಂಗಗಳು ಹೀಗೆ ವಿವಿಧ ವಿಜ್ಞಾನ ವಿಷಯಗಳು ಮತ್ತು ವಿಕಾಸದ ಬಗ್ಗೆ ಅರಿವು ಮೂಡಿಸುವ ಕೇಂದ್ರವಾಗಿತ್ತು. 

ಈಗ ಮತ್ತೊಂದು ಹೆಜ್ಜೆಯಾಗಿ ಭಾಷೆಯ ವಿಚಾರದಲ್ಲಿ ಅರಿವು ಮೂಡಿಸುವ ಕೇಂದ್ರವಾಗುವತ್ತಲೂ ಹೆಜ್ಜೆ ಇಟ್ಟಿದೆ. ಅಂದುಕೊಂಡಂತೆ ಎಲ್ಲವೂ ಸುಸೂತ್ರವಾಗಿ ನಡೆದರೆ ಮುಂದಿನ ಏಳೆಂಟು ತಿಂಗಳಲ್ಲಿ ವಿಜ್ಞಾನ ಕೇಂದ್ರವು ಭಾಷೆಯ ಅಧ್ಯಯನ ಕೇಂದ್ರವಾಗಿಯೂ ರಾಜ್ಯದಲ್ಲಿ ಗುರುತಾಗಲಿದೆ. 

ADVERTISEMENT

‘ಲಿಪಿ ಮನೆ’ ನಿರ್ಮಾಣಕ್ಕೆ ಚಾಲನೆ: ಗೌರಿಬಿದನೂರಿನಲ್ಲಿ ಬುಧವಾರ ‘ಲಿಪಿ ಮನೆ’ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದಾರೆ. 

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಡಾ.ಎಚ್‌.ನರಸಿಂಹಯ್ಯ ವಿಜ್ಞಾನ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ‘ಲಿಪಿ ಮನೆ’ ಸ್ಥಾಪನೆ ಮಾಡುತ್ತಿದೆ. ಯೋಜನೆಯ ಒಟ್ಟು ಅಂದಾಜು ಮೊತ್ತ ₹8 ಕೋಟಿಯಾಗಿದೆ. ಈಗ ₹2.5 ಕೋಟಿಯ ಮೊದಲ ಹಂತದ ಕಾಮಗಾರಿಗೆ ಮುಖ್ಯಮಂತ್ರಿ ಶಂಕುಸ್ಥಾಪನೆ ನೆರವೇರಿಸುವರು.

ಮನೆಯ ಉದ್ದೇಶ: ಭಾರತೀಯ ಲಿಪಿಗಳ ಇತಿಹಾಸ, ವಿನ್ಯಾಸ ಮತ್ತು ವ್ಯಾಕರಣವನ್ನು ಸಾರ್ವಜನಿಕರ ಅರಿವಿಗೆ ತರುವ ಕೇಂದ್ರವಾಗಿ ಇದು ಕಾರ್ಯ ನಿರ್ವಹಿಸಲಿದೆ. 

ಇಲ್ಲಿ ಎಲ್ಲ ಭಾರತೀಯ ಲಿಪಿಗಳನ್ನು ಪರಿಚಯಿಸಲಾಗುತ್ತದೆ. ಆದರೆ ಕನ್ನಡ ಲಿಪಿಯ ವಿಚಾರವಾಗಿ ವಿಶೇಷ ಮಹತ್ವ ನೀಡಲಾಗುತ್ತದೆ. ಮಕ್ಕಳು, ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ‘ಲಿಪಿ ಮನೆ’ ಕಲಿಕೆಯ ಹೊಸ ಪ್ರೇರಣೆ ಆಗುತ್ತದೆ. ‘ಲಿಪಿ ಮನೆ’ ಮುಂದಿನ ಪೀಳಿಗೆಗೆ ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಮಹತ್ವದ ಯೋಜನೆಯಾಗಿದೆ.

‘ಲಿಪಿ ಮನೆ’ ಕೇವಲ ಮ್ಯೂಸಿಯಂ ಅಲ್ಲ. ಇದು ಕಲಿಯುವ ಕೇಂದ್ರ, ಕಲಿಕೆಗೆ ಉತ್ಸಾಹ ಉಂಟು ಮಾಡುವ ಜ್ಞಾನ ಕೇಂದ್ರ. ಲಿಪಿ ಕಲಿಕೆ, ಶೈಲಿ, ಸುಂದರ ಲಿಖಿತ ರೂಪಗಳು, ಸಾಂಸ್ಕೃತಿಕ ವ್ಯಾಖ್ಯಾನವನ್ನು ಒಟ್ಟಿಗೆ ತರುವ ಪ್ರಯತ್ನವಾಗಿದೆ. ಲಿಪಿ ಮನೆ ಕರ್ನಾಟಕದ ಹೆಮ್ಮೆಯಾಗಿ ರೂಪುಗೊಳ್ಳಲಿದೆ ಎನ್ನುವ ವಿಶ್ವಾಸವನ್ನು ಎಚ್‌.ನರಸಿಂಹಯ್ಯ ಅಭಿವೃದ್ಧಿ ಪ್ರಾಧಿಕಾರ ಮತ್ತು ಭಾಷಾ ವಿದ್ವಾಂಸರು, ಸಂಶೋಧಕರು ಹೊಂದಿದ್ದಾರೆ. 

ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಅವರು ಎಚ್‌.ನರಸಿಂಹಯ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಂತರ ಪ್ರಾಧಿಕಾರದಿಂದ ಜಾರಿಯಾಗುತ್ತಿರುವ ಮೊದಲ ಮಹತ್ವದ ಯೋಜನೆ ಇದಾಗಿದೆ. ಶಿವಶಂಕರ ರೆಡ್ಡಿ ‘ಲಿಪಿ ಮನೆ’ ನಿರ್ಮಾಣಕ್ಕೆ ಹೆಚ್ಚು ಆಸ್ಥೆ ವಹಿಸಿದ್ದಾರೆ.

‘ನಾನು ಶಾಸಕನಾಗಿದ್ದಾಗ ಎಚ್‌.ನರಸಿಂಹಯ್ಯ ವಿಜ್ಞಾನ ಕೇಂದ್ರ ಮಂಜೂರು ಮಾಡಿಸಿದೆ. ಈ ಹಿಂದೆ ವಿಜ್ಞಾನ ಕೇಂದ್ರ ಅಭಿವೃದ್ಧಿಗೆ ₹10 ಕೋಟಿ ನೀಡಿದ್ದರು. ಆಗಲೇ ಈ ಯೋಜನೆಯ ಬಗ್ಗೆ ಆಲೋಚಿಸಿದ್ದೆವು. ವಿಜ್ಞಾನ ಕೇಂದ್ರದ ಕಾಂಪೌಂಡ್ ನಿರ್ಮಾಣ ಮತ್ತಿತರ ಕಾರ್ಯಕ್ಕೆ ₹3 ಕೋಟಿ ವೆಚ್ಚವಾಯಿತು. ಈಗ ಲಿಪಿ ಮನೆ ಕಾಮಗಾರಿಗೆ ಚಾಲನೆ ದೊರೆತಿದೆ’ ಎಂದು ಡಾ.ಎಚ್‌.ನರಸಿಂಹಯ್ಯ ವಿಜ್ಞಾನ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎಚ್.ಶಿವಶಂಕರ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಎಚ್.ನರಸಿಂಹಯ್ಯ ಅವರ ಜನ್ಮದಿನದ ವೇಳೆ ಶಂಕುಸ್ಥಾಪನೆ ನೆರವೇರಿಸಬೇಕು ಎಂದುಕೊಂಡಿದ್ದೆ. ಆದರೆ ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿಯೇ ಶಂಕುಸ್ಥಾಪನೆ ನೆರವೇರಿಸಿದ್ದೇವೆ ಎಂದರು.

ಇತಿಹಾಸ ತಜ್ಞ ದೇವರ ಕೊಂಡಾರೆಡ್ಡಿ ಅವರ ಜೊತೆ ಲಿಪಿ ಮನೆಯ ಬಗ್ಗೆ ಚರ್ಚಿಸಿದೆವು. ಅವರ ಸಲಹೆಗಳೂ ಇಲ್ಲಿ ಪ್ರಮುಖವಾಗಿವೆ. ಲಿಪಿ ಯಾವ ರೀತಿಯಲ್ಲಿ ವಿಕಾಸ ಮತ್ತು ಬೆಳವಣಿಗೆ ಆಯಿತು. ಭಾಷೆಯ ಬೆಳವಣಿಗೆಯ ಸಮಗ್ರ ಮಾಹಿತಿ ನೀಡುವ ಕೇಂದ್ರವಾಗಿ ‘ಲಿಪಿ ಮನೆ’ ರೂಪು ಪಡೆಯಲಿದೆ ಎಂದರು.

ಕನ್ನಡದ ಜೊತೆಗೆ ಬೇರೆ ಬೇರೆ ಭಾಷೆಯ ಲಿಪಿಗಳು, ವ್ಯಾಕರಣ ಹೀಗೆ ಭಾಷೆಯ ವಿಚಾರಕ್ಕೆ ಸಂಬಂಧಿಸಿದಂತೆ ಲಿಪಿಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಕೇಂದ್ರವಷ್ಟೇ ಅಲ್ಲ ಅಧ್ಯಯನ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ಲಿಪಿ ಮನೆ ಕಾಮಗಾರಿ ಜೂ.13ರಿಂದ ಆರಂಭವಾಗುತ್ತದೆ. ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಯೋಜನೆ ಇದೆ.
ಎನ್.ಎಚ್.ಶಿವಶಂಕರ ರೆಡ್ಡಿ ಎಚ್‌.ನರಸಿಂಹಯ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.