ಚಿಂತಾಮಣಿ: ನಗರಸಭೆಯ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ನಗರಸಭೆಯ ಆಡಳಿತ ಮಂಡಳಿ ಅಥವಾ ಶಾಸಕರು ಯಾರ ಹಿಡಿತದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ನಗರಸಭೆ ಆಡಳಿತ ಹದಗೆಡುತ್ತಿದೆ ಎಂದು ನಗರಸಭೆಯ ಸದಸ್ಯ ಮಹ್ಮದ್ ಶಫೀಕ್ ಅಸಮಾಧಾನ ವ್ಯಕ್ತಪಡಿಸಿದರು.
ನಗರಸಭೆ ಕಚೇರಿ ಮುಂದೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಚೇರಿಯಲ್ಲಿ ಕಡತಗಳೇ ನಾಪತ್ತೆಯಾಗುತ್ತಿವೆ. ಅಧಿಕಾರಿಗಳಿಗೆ ಯಾರ ಭಯವೂ ಇಲ್ಲ. ಜನವರಿಯಲ್ಲಿ ಇ–ಸ್ವತ್ತಿಗಾಗಿ ನೀಡಿರುವ ಅರ್ಜಿಯನ್ನು ಪ್ರದರ್ಶಿಸಿ, ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಅಧಿಕಾರಿಗಳನ್ನು ಕೇಳಿದರೆ ಕಡತ ಕಳೆದು ಹೋಗಿದೆ ಎನ್ನುತ್ತಿದ್ದಾರೆ. ಇಂತಹ ನೂರಾರು ಉದಾಹರಣೆಗಳಿವೆ
ಎಂದು ದೂರಿದರು.
ಸಾರ್ವಜನಿಕರು ಖಾತೆ ಬದಲಾವಣೆಗೆ ಅಲೆದು ಶಾಪ ಹಾಕುತ್ತಾರೆ. ಒಳಚರಂಡಿ ಮಂಡಳಿಯ ಮ್ಯಾನ್ ಹೋಲ್ ಶಿಥಿಲಗೊಂಡರೆ ದುರಸ್ಥಿಗೆ, ರಸ್ತೆಯ ದೀಪ ಕೆಟ್ಟರೆ ಸರಿಪಡಿಸಲು ವಾರಗಟ್ಟಲೆ ಕಾಯಬೇಕು. ಅಧ್ಯಕ್ಷರು ಕೇವಲ ಸಭೆಗಳನ್ನು ನಡೆಸಿದರೆ ಪ್ರಯೋಜನವಿಲ್ಲ
ಎಂದರು.
ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ವಾರ್ಡ್‌ಗಳಲ್ಲಿ ಕೆಲಸ ಮಾಡಬೇಕಾದ ಕೆಲವು ನಗರಸಭೆ ಸದಸ್ಯರು ಕಡತ ಹಿಡಿದು ಕಚೇರಿಯಲ್ಲಿ ತಿರುಗಾಡುತ್ತಾರೆ. ಸಿ.ಸಿ.ಟಿವಿ ಕ್ಯಮೆರಾಗಳನ್ನು ಪರಿಶೀಲಿಸಿದರೆ ಕಚೇರಿಯಲ್ಲಿ ನಡೆಯುತ್ತಿರುವ ವ್ಯವಹಾರಗಳು ಬಯಲಾಗುತ್ತವೆ
ಎಂದರು.
ಗೋಪಸಂದ್ರ ಕೆರೆಯಲ್ಲಿ ಯುಜಿಡಿ ನೀರು ಹರಿಯುತ್ತಿದೆ. ಅಧ್ಯಕ್ಷ ಮತ್ತು ಪೌರಾಯುಕ್ತರನ್ನು ಕರೆದುಕೊಂಡು ಹೋಗಿ ಪರಿಸ್ಥಿತಿ ತೋರಿಸಲಾಗಿದೆ. ಕೆರೆಯ ಪಕ್ಕದ ರಸ್ತೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಸಂಚರಿಸುತ್ತಾರೆ. ಕೆರೆ ಸಂಪೂರ್ಣವಾಗಿ ಹಾಳಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಸಂಬಂಧಪಟ್ಟವರು ಸೂಕ್ತ ಕ್ರಮಕೈಗೊಳ್ಳದಿದ್ದರೆ ನಗರಸಭೆ ಕಚೇರಿ ಮತ್ತು ಶಾಸಕರ ಕಚೇರಿ ಮುಂದೆ ಧರಣಿ ನಡೆಸುವುದಾಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.