ADVERTISEMENT

ಆತ್ಮಾನಂದದಿಂದ ಅಮೃತತ್ವ ಸಿದ್ಧಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 2:06 IST
Last Updated 18 ಜನವರಿ 2021, 2:06 IST
ಚಿಂತಾಮಣಿ ತಾಲ್ಲೂಕಿನ ಕೈವಾರದ ಶ್ರೀಯೋಗಿನಾರೇಯಣ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯಡತೊರೆ ಶ್ರೀಯೋಗನಂದೀಶ್ವರ ಸರಸ್ವತಿ ಮಠದ ಪೀಠಾಧ್ಯಕ್ಷ ಶಂಕರ ಭಾರತಿ ಸ್ವಾಮೀಜಿ ಪ್ರವಚನ ನೀಡಿದರು
ಚಿಂತಾಮಣಿ ತಾಲ್ಲೂಕಿನ ಕೈವಾರದ ಶ್ರೀಯೋಗಿನಾರೇಯಣ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯಡತೊರೆ ಶ್ರೀಯೋಗನಂದೀಶ್ವರ ಸರಸ್ವತಿ ಮಠದ ಪೀಠಾಧ್ಯಕ್ಷ ಶಂಕರ ಭಾರತಿ ಸ್ವಾಮೀಜಿ ಪ್ರವಚನ ನೀಡಿದರು   

ಚಿಂತಾಮಣಿ: ಹಣ, ಅಧಿಕಾರ, ಐಶ್ವರ್ಯದಿಂದ ಅಮೃತತ್ವ ಸಿಗುವುದಿಲ್ಲ. ಆತ್ಮಾನಂದದಿಂದ ಮಾತ್ರ ಅಮೃತತ್ವ ಪಡೆಯಬಹುದು ಎಂದು ಯಡತೊರೆ ಶ್ರೀಯೋಗನಂದೀಶ್ವರ ಸರಸ್ವತಿ ಮಠದ ಪೀಠಾಧ್ಯಕ್ಷ ಶಂಕರ ಭಾರತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕೈವಾರದ ಶ್ರೀಯೋಗಿನಾರೇಯಣ ಮಠದಲ್ಲಿ ಆಯೋಜಿಸಲಾಗಿದ್ದ‘ಇಂದಿನ ಸಮಾಜಕ್ಕೆ ಆತ್ಮಚಿಂತನೆಯ ಅವಶ್ಯಕತೆ’ ಎಂಬ ಚಿಂತನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಾಪಂಚಿಕವಾದ ವ್ಯಾಮೋಹದಲ್ಲಿ, ನಮ್ಮೊಳಗೆ ಸದಾಕಾಲ ಪರಂಜ್ಯೋತಿ ಸ್ವರೂಪನಾಗಿ ಬೆಳಗುತ್ತಿರುವ ಆತ್ಮವನ್ನು ಗುರುತಿಸುವಲ್ಲಿ ವಿಫಲರಾಗುತ್ತಿದ್ದೇವೆ. ನಮ್ಮೊಳಗಿರುವ ಆನಂದ ಮರೆತು ಬಾಹ್ಯದಲ್ಲಿ ಆನಂದ ಹುಡುಕುವ ಪ್ರಯತ್ನ ಮಾಡುತ್ತಿದ್ದೇವೆ. ಬಾಹ್ಯದಲ್ಲಿ ಆನಂದ ಹುಡುಕುತ್ತಾ ಜೀವನವನ್ನು ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದರು.

ADVERTISEMENT

ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಮ್ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಗುರು ಮಹತ್ವದ ಪಾತ್ರವಹಿಸುತ್ತಾರೆ. ಶಿಷ್ಯನು ಅನುಭವಿಯಾದ ಗುರುವಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಬೇಕು. ಗುರು ನೀಡಿದ ಉಪದೇಶವನ್ನು ಹೃದಯದಲ್ಲಿ ನಂಬಿ ಸ್ವೀಕರಿಸಬೇಕು. ಸ್ಪರ್ಶಮಣಿಗೆ ತಾಕಿದ ಕಬ್ಬಿಣವು ಬಂಗಾರವಾಗುವಂತೆ, ಗುರುವಿನ ಉಪದೇಶದಿಂದ ಶಿಷ್ಯನ ಅಜ್ಞಾನವು ದೂರವಾಗುತ್ತದೆ. ನಮಗೆ ಜ್ಞಾನ ಬರಬೇಕಾದರೆ ಗುರುವಿನ ಚಿಂತನೆ ಸದಾಕಾಲ ಮಾಡಬೇಕು ಎಂದರು.

ಆರಂಭದಲ್ಲಿ ಶ್ರೀಯೋಗಿ ನಾರೇಯಣ ತಾತಯ್ಯನವರ ಮಠದ ಮೂಲ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ತಾತಯ್ಯನವರ ಉತ್ಸವ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಸಭಾಂಗಣಕ್ಕೆ ಕರೆತರಲಾಯಿತು. ಸ್ವಾಮಿಗಳಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಯಡತೊರೆ ಶ್ರೀಯೋಗನಂದೀಶ್ವರ ಸರಸ್ವತಿ ಮಠದ ಉತ್ತಾರಾಧಿಕಾರಿಯಾಗಿ ನಿಯುಕ್ತರಾಗಿರುವ ಶ್ರೀಭಾಸ್ಕರ ಶರ್ಮ ಅವರನ್ನು ಸನ್ಮಾನಿಸಲಾಯಿತು.

ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್ ಅವರು ಪ್ರಾರ್ಥನೆ ನೆರವೇರಿಸಿದರು. ಅಧ್ಯಾತ್ಮ ಚಿಂತಕ ಡಾ.ಬಾಬುಕೃಷ್ಣಮೂರ್ತಿ, ಯಡತೊರೆ ಮಠದ ಸದಸ್ಯ ನಾಗಾನಂದ್, ಜೆ. ವಿಭಾಕರರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.