ADVERTISEMENT

ಸೇವೆಗಾಗಿ ವೈಭೋಗ ತ್ಯಜಿಸಿದ ಯೋಗಿ: ವೆಂಕಟಾಚಲಪತಿ ಅಭಿಮತ

ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಜನವರಿ 2020, 15:07 IST
Last Updated 19 ಜನವರಿ 2020, 15:07 IST
ಕಾರ್ಯಕ್ರಮದಲ್ಲಿ ಮಹಾಯೋಗಿ ವೇಮನ ಅವರ ಭಾವಚಿತ್ರಕ್ಕೆ ಅಧಿಕಾರಿಗಳು ಪುಷ್ಪನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಹಾಯೋಗಿ ವೇಮನ ಅವರ ಭಾವಚಿತ್ರಕ್ಕೆ ಅಧಿಕಾರಿಗಳು ಪುಷ್ಪನಮನ ಸಲ್ಲಿಸಿದರು.   

ಚಿಕ್ಕಬಳ್ಳಾಪುರ: ‘ರಾಜ ಕುಟುಂಬಕ್ಕೆ ಸೇರಿದ ಮಹಾಯೋಗಿ ವೇಮನ ಅವರು ವೈಭೋಗವನ್ನೇ ತ್ಯಾಗ ಮಾಡಿ ಅಸ್ಪೃಶ್ಯತೆ, ಜಾತಿ ಪದ್ಧತಿ, ಅಸಮಾನತೆ ವಿರೋಧ ಹೋರಾಟದಲ್ಲಿ ಮನುಕುಲದ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡರು. ಅವರ ತ್ಯಾಗ ಸದಾ ಸ್ಮರಣೀಯವಾದದ್ದು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟಾಚಲಪತಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಾಜ ಸುಧಾರಣೆ ಕನಸು ಕಂಡು ಸದಾ ಜಾತ್ಯತೀತ ತತ್ವ, ಮಾನವೀಯ ಮೌಲ್ಯ ಪ್ರತಿಪಾದಿಸುತ್ತಿದ್ದ ವೇಮನ ಅವರು ಸುಂದರ ಹಾಗೂ ಆದರ್ಶ ಸಮಾಜ ನಿರ್ಮಿಸಲು ನಿರಂತರ ಶ್ರಮಿಸಿದರು. ಅವರ ಅತ್ಯಮೂಲ್ಯ ವಚನಗಳನ್ನು ಮಕ್ಕಳು, ಯುವ ಸಮುದಾಯ ಅರ್ಥ ಮಾಡಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಿಸಲು ಮುಂದಾಗಬೇಕು. ವೇಮನ ಅವರಂತೆ ನಾವು ಆತ್ಮ, ಮನಸ್ಸು, ಆಚಾರ, ವಿಚಾರ, ಕಾಯಕ ನಿಷ್ಠೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮನಸ್ಸು ಪರಿಶುದ್ಧವಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ಅನಾಗರಿಕತೆ, ಅಸತ್ಯ, ಅಧರ್ಮ ಹೆಚ್ಚಾದಾಗ ಅದರಿಂದ ಜನರನ್ನು ಹೊರತರಲು ಸೂಕ್ತ ಮಾರ್ಗದರ್ಶನ ನೀಡುವ ಕೆಲಸವನ್ನು ಅವರು ಮಾಡುತ್ತಾರೆ. ಅಂತಹ ಜ್ಞಾನಿಗಳ ಮಾರ್ಗದರ್ಶನದಲ್ಲಿ ನಾವೆಲ್ಲ ನಡೆದರೆ ಸಮಾಜ ಸುಭಿಕ್ಷವಾಗಿರುತ್ತದೆ. ಮನುಷ್ಯನ ದುರಾಸೆಯ ಆಲೋಚನೆಗಳು ತೊಡೆದು ಹಾಕಲು ವೇಮನ ವಚನಗಳು ತುಂಬಾ ಮುಖ್ಯವಾಗುತ್ತವೆ. ಪ್ರಕೃತಿ, ನಿಸರ್ಗದಂತೆ ಪ್ರೀತಿಯಿಂದ ಬದುಕಬೇಕು ಎಂಬುದನ್ನು ಅವರು ತಮ್ಮ ವಚನಗಳಲ್ಲಿ ತೋರಿಸಿಕೊಟ್ಟಿದ್ದಾರೆ’ ಎಂದರು.

ಗ್ರೇಡ್ 2 ತಹಶೀಲ್ದಾರ್ ತುಳಸಿ, ಶಿರಸ್ತೆದಾರ ಚಂದ್ರಪ್ಪ ತಾಲ್ಲೂಕು ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.