ADVERTISEMENT

ಕೃಷಿ ಖುಷಿ | ತರಕಾರಿ ಬೆಳೆದು ಯಶಸ್ಸು ಕಂಡ ರೈತ

ಪಿ.ಎಸ್.ರಾಜೇಶ್
Published 17 ಡಿಸೆಂಬರ್ 2023, 6:25 IST
Last Updated 17 ಡಿಸೆಂಬರ್ 2023, 6:25 IST
ಬಾಗೇಪಲ್ಲಿ ಹೊರವಲಯದ ಶಿಂಗೇನಾಯಕನದಿನ್ನೆಯ ತಮ್ಮ ಜಮೀನಿನಲ್ಲಿ ಹೂಕೋಸು ಬೆಳೆದಿರುವುದು
ಬಾಗೇಪಲ್ಲಿ ಹೊರವಲಯದ ಶಿಂಗೇನಾಯಕನದಿನ್ನೆಯ ತಮ್ಮ ಜಮೀನಿನಲ್ಲಿ ಹೂಕೋಸು ಬೆಳೆದಿರುವುದು   

ಬಾಗೇಪಲ್ಲಿ: ಪದವಿ ವಿದ್ಯಾಭ್ಯಾಸ ಪಡೆದ ಯುವಕರೊಬ್ಬರು, ತಮ್ಮ ತಾತನ ಕೃಷಿ ಜಮೀನಿನಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ.

ಯುವರೈತ ಕೆ.ಎನ್.ನರಸಿಂಹಪ್ಪ, ಇದೀಗ ಎಲ್‍ಎಲ್‍ಬಿ ಅಂತಿಮ ವರ್ಷದ ವಿದ್ಯಾಭ್ಯಾಸ ಮಾಡುವ ಜತೆಗೆ, ಬದನೆಕಾಯಿ, ಹೂಕೋಸು, ಈರುಳ್ಳಿ ಸೇರಿದಂತೆ ವಿವಿಧ ತರಕಾರಿ ಬೆಳೆ ಬೆಳೆದು ಲಾಭಗಳಿಸುತ್ತಿದ್ದಾರೆ.

ಕೃಷಿ ಕಾಯಕ ನಂಬಿದವರನ್ನು ಕೈ ಬಿಡುವುದಿಲ್ಲ. ಶ್ರದ್ಧೆ ಹಾಗೂ ಗುರಿಯಿಂದ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡರೆ ಸಾಧನೆ ಮಾಡಬಹುದು ಎಂದು ಪಟ್ಟಣದ 1ನೇ ವಾರ್ಡ್‍ನ ನಿವಾಸಿ, ಯುವರೈತ ಕೆ.ಎನ್.ನರಸಿಂಹಪ್ಪ ತೋರಿಸಿದ್ದಾರೆ.

ADVERTISEMENT

ಪಟ್ಟಣದ ಟೌನ್‌ನ 1ನೇ ವಾರ್ಡ್‍ನ ಗಡಿದಂ ಬೆಟ್ಟದ ಸಮೀಪ ಇರುವ ಸಿಂಗನಾಯಕನದಿನ್ನೆಯಲ್ಲಿ ಮನೇರಿನಾರಾಯಣಪ್ಪ ಅವರ ಆರೂವರೆ ಎಕರೆ ಪ್ರದೇಶ ಹೊಲ-ಗದ್ದೆ ಇದೆ. ತಮ್ಮ ತಾತನ ಜಮೀನಿನಲ್ಲಿ ನರಸಿಂಹಪ್ಪ ಕಳೆದ 6 ವರ್ಷಗಳಿಂದ ಕೃಷಿ ಕೆಲಸ ಮಾಡಿದ್ದಾರೆ. 10 ವರ್ಷಗಳ ಹಿಂದೆ ಬಿಎ ಪದವಿ ಮುಗಿಸಿದ್ದಾರೆ. ಸರ್ಕಾರಿ ನೌಕರಿ ಪಡೆಯಲು ಸ್ಪರ್ಧಾತ್ಮಕ ಹಾಗೂ ಬ್ಯಾಂಕ್‌ ಪರೀಕ್ಷೆ ಬರೆದಿದ್ದಾರೆ.

ತಮ್ಮ ಜಮೀನಿನಲ್ಲಿ ಎರಡು ಕೊಳವೆ ಬಾವಿ ಹಾಕಿಸಿದ್ದಾರೆ. ಬೆಳೆಗಳಿಗೆ ಆಗುವಷ್ಟು ನೀರಿನ ಪ್ರಮಾಣ ಇದೆ. ಆರೂವರೆ ಎಕರೆ ಹೊಲಗದ್ದೆಯಲ್ಲಿ ಈರುಳ್ಳಿ 1 ಎಕರೆಯಲ್ಲಿ, ಹೂಸೋಸು 2 ಎಕರೆ ಟೊಮೆಟೊ 2 ಎಕರೆಯಲ್ಲಿ, ಬದನೆಕಾಯಿ 2 ಎಕರೆಯಲ್ಲಿ ತರಕಾರಿ ಬೆಳೆದಿದ್ದಾರೆ.

₹80 ಸಾವಿರ ಖರ್ಚು ಮಾಡಿ 2 ಎಕರೆ ಪ್ರದೇಶದಲ್ಲಿ ಹೂಕೋಸು ಬೆಳೆ ಬೆಳೆದಿದ್ದೇನೆ. ಇದೀಗ ಮಾರುಕಟ್ಟೆಯಲ್ಲಿ ಹೂಕೋಸು ಮಾರಾಟ ಮಾಡಿದ್ದೇನೆ. ಗೋಬಿಮಂಚೂರಿ ಮಾರಾಟ ಮಾಡುವ ವ್ಯಾಪಾರಸ್ಥರು ಹೂಕೋಸು ಖರೀದಿ ಮಾಡುತ್ತಿದ್ದಾರೆ. ನಿರೀಕ್ಷೆ ಬೆಲೆಗೆ ಮಾರಾಟ ಆಗುತ್ತಿಲ್ಲ. ಆದರೂ ಬೆಳೆಗೆ ಲಾಭ ಬಂದಿದೆ. ಒಂದು ಚೀಲಕ್ಕೆ ₹2 ಸಾವಿರ ಆದಾಯ ಇದೆ. ಬದನೆಕಾಯಿ ಬೆಳೆಗೆ ನಿರೀಕ್ಷೆಯಷ್ಟು ಲಾಭ ಇಲ್ಲ ಎನ್ನುತ್ತಾರೆ ರೈತ ನರಸಿಂಹಪ್ಪ ತಿಳಿಸಿದರು.

ಕಷ್ಟಪಟ್ಟರೆ ರೈತರು ಉತ್ತಮ ಲಾಭಗಳಿಸಬಹುದು. ಬೆಳೆಯಿಂದ ನಷ್ಟ ಆಗಿದೆ ಒಪ್ಪಲು ಸಾಧ್ಯವೇ ಇಲ್ಲ. ಒಮ್ಮೊಮ್ಮೆ ಬೆಳೆ ನಷ್ಟ ಆದರೂ, ಮತ್ತೊಮ್ಮೆ ಲಾಭ ಗಳಿಸಬಹುದು ಎಂದು ಪ್ರಾಯೋಗಿಕವಾಗಿ ಕಂಡಿದ್ದೇನೆ ಎನ್ನುತ್ತಾರೆ ರೈತ ನರಸಿಂಹಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.