ADVERTISEMENT

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶ್ರಮಿಸಿ

ಯೋಜನಾ ಸಂಘದ 5ನೇ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 0:54 IST
Last Updated 13 ಫೆಬ್ರುವರಿ 2021, 0:54 IST
ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು
ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಎಲ್ಲಾ ಇಲಾಖೆಗಳ ಸಮನ್ವಯ ಸಹಕಾರದೊಂದಿಗೆ ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ 5ನೇ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಾಲ ಕಾರ್ಮಿಕ ಪದ್ಧತಿಯು ಒಂದು ಸಾಮಾಜಿಕ ಪಿಡುಗು ಅದನ್ನು ತೊಡಗಿಸಲು ಎಲ್ಲರೂ ಶ್ರಮಿಸಬೇಕು. ಬಾಲ ಕಾರ್ಮಿಕ ಪದ್ಧತಿಗೆ ಬಡತನ, ಅನಕ್ಷರತೆಯೇ ಪ್ರಮುಖ ಕಾರಣವಾಗಿದ್ದು, ಬಾಲ ಕಾರ್ಮಿಕರು ದುಡಿಯುವುದು ಅಪರಾಧ ಎಂಬುದನ್ನು ಪೋಷಕರಿಗೆ ತಿಳಿಹೇಳಬೇಕು ಎಂದು ತಿಳಿಸಿದರು.

ADVERTISEMENT

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕೇವಲ ಕಾರ್ಮಿಕ ಇಲಾಖೆ ಜವಾಬ್ದಾರಿ ಮಾತ್ರ ಅಲ್ಲ. ಅವರೊಂದಿಗೆ ಇತರೆ ಇಲಾಖೆ ಅಧಿಕಾರಿಗಳು ಕೈಜೋಡಿಸಿದಾಗ ಮಾತ್ರ ಅದನ್ನು ನಿರ್ಮೂಲನೆ ಮಾಡಲು ಸಾಧ್ಯ. ಈ ದಿಸೆಯಲ್ಲಿ ಎಲ್ಲಾ ಇಲಾಖೆಯವರು ಕಾರ್ಮಿಕ ಇಲಾಖೆಯೊಂದಿಗೆ ಸಹಕಾರ ಹಾಗೂ ಸಮನ್ವಯತೆಯಿಂದ ಇರಬೇಕು ಎಂದು ಹೇಳಿದರು.

ಕಾರ್ಮಿಕ ಇಲಾಖೆ ಜಿಲ್ಲಾ ಅಧಿಕಾರಿ ವರಲಕ್ಷ್ಮೀ ಮಾತನಾಡಿ, ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ(ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ಪ್ರಕಾರ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ತೊಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದರಡಿ ಕಾನೂನು ಉಲ್ಲಂಘಿಸಿದವರಿಗೆ 50 ಸಾವಿರ ದಂಡ ಮತ್ತು 2 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಜಿಲ್ಲೆಯಲ್ಲಿ 2021ನೇ ಸಾಲಿನಲ್ಲಿ ದಾಳಿ ನಡೆಸಿ ಒಟ್ಟು 115 ಅಪಾಯಕಾರಿ ಹಾಗೂ 26 ಅಪಾಯಕಾರಿ ಅಲ್ಲದ ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ಬಾಲ ಕಾರ್ಮಿಕರನ್ನು ನೇಮಿಸಿಕೊಂಡ 11 ವಿವಿಧ ಕಂಪನಿ ಹಾಗೂ ಮಾಲೀಕರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕಾರ್ಮಿಕ ಇಲಾಖೆ ಜೊತೆಗೆ ಪೊಲೀಸ್ ಹಾಗೂ ಇನ್ನಿತರೆ ಇಲಾಖೆಗಳ ಸಹಕಾರವೂ ಅಗತ್ಯವಿದೆ ಎಂದು ತಿಳಿಸಿದರು.

ಸಭೆಯಲ್ಲಿ ಡಿಎಸ್‍ಪಿ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ತೇಜ್‍ಆನಂದ್‍ರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾರಾಯಣಸ್ವಾಮಿ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.