ADVERTISEMENT

ವಕ್ಫ್ ಆಸ್ತಿಗಳ ರಕ್ಷಣೆಗೆ ಕ್ರಮ

ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಇಂತಿಯಾಜ್ ಪಾಷಾ ಭರವಸೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 1:29 IST
Last Updated 12 ಸೆಪ್ಟೆಂಬರ್ 2020, 1:29 IST
ಚಿಂತಾಮಣಿ ತಾಲ್ಲೂಕಿನ ಮುರುಗಮಲೆ ಗ್ರಾಮದ ದರ್ಗಾಗೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಇಂತಿಯಾಜ್ ಪಾಷಾ ಶುಕ್ರವಾರ ಭೇಟಿ ನೀಡಿದ್ದರು.
ಚಿಂತಾಮಣಿ ತಾಲ್ಲೂಕಿನ ಮುರುಗಮಲೆ ಗ್ರಾಮದ ದರ್ಗಾಗೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಇಂತಿಯಾಜ್ ಪಾಷಾ ಶುಕ್ರವಾರ ಭೇಟಿ ನೀಡಿದ್ದರು.   

ಚಿಂತಾಮಣಿ: ಜಿಲ್ಲೆಯಾದ್ಯಂತ ಇರುವ ವಕ್ಫ್ ಆಸ್ತಿಗಳನ್ನು ರಕ್ಷಣೆ ಮಾಡಲು ಹಾಗೂ ಮುಸ್ಲಿಮರ ಪವಿತ್ರ ಯಾತ್ರಾಸ್ಥಳ ಮುರುಗಮಲೆ ದರ್ಗಾ ಅಭಿವೃದ್ಧಿಗೆ ಶ್ರಮಿಸುವುದಾಗಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಇಂತಿಯಾಜ್ ಪಾಷಾ ಭರವಸೆ ನೀಡಿದರು.

ತಾಲ್ಲೂಕಿನ ಮುರುಗಮಲೆ ಗ್ರಾಮದ ಹಜರತ್ ಅಮ್ಮಾಜಾನ್ ಬಾವಾಜಾನ್ ದರ್ಗಾಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು.

ದರ್ಗಾ ಆವರಣದಲ್ಲಿ ನಡೆದಿರುವ ಕಾಮಗಾರಿಗಳು, ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಜಿಲ್ಲಾ ವಕ್ಫ್ ಅಧಿಕಾರಿ ಹಾಗೂ ದರ್ಗಾ ಮೇಲ್ವಿಚಾರಣೆಯ ಅಧಿಕಾರಿಗಳೊಂದಿಗೆ ಮಾತನಾಡಿ ಕಾಮಗಾರಿಗಳ ಸಂಪೂರ್ಣ ವಿವರಗಳನ್ನು ಪಡೆದುಕೊಂಡರು.

ADVERTISEMENT

ದರ್ಗಾ ಆವರಣದಲ್ಲಿರುವ ಖಬರಸ್ಥಾನದ ಕಾಂಪೌಂಡ್ ಬೀಳುವ ಸ್ಥಿತಿಯಲ್ಲಿದೆ. ಅದನ್ನು ದುರಸ್ತಿಗೊಳಿಸಬೇಕು. ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ವಕ್ಫ್ ಮಂಡಳಿ ಮತ್ತು ಸರ್ಕಾರದೊಂದಿಗೆ ಮಾತುಕತೆ ನಡೆಸಿ ಅಗತ್ಯವಾದ ಅನುದಾನ ಸೇರಿದಂತೆ ಎಲ್ಲ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಚಿಕ್ಕಬಳ್ಳಾಪುರದಲ್ಲಿ ಇತ್ತೀಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸಹ ವಕ್ಫ್ ಆಸ್ತಿಗಳ ರಕ್ಷಣೆಗೆ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳು ಕಾನೂನು ಪ್ರಕಾರ ಖಾತಾ ಮತ್ತಿತರ ದಾಖಲೆಗಳನ್ನು ನೀಡುವಂತೆ ಸೂಚಿಸಿದ್ದಾರೆ ಎಂದರು.

ವಕ್ಫ್ ಆಸ್ತಿಗಳನ್ನು ಒತ್ತುವರಿ ಮಾಡಿ ಕೊಂಡಿರುವವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು. ಕಾಯಲಹಳ್ಳಿಯ ಹಜರತ್ ಸಯ್ಯದ್ ಜಲಾಲ್ ಖಾಕಿ ಷಾ ಮೌಲಾ ಬಾಬಾ ದರ್ಗಾ ಸಮಿತಿಯ ಅವಧಿ ಮುಕ್ತಾಯವಾಗಿದೆ. ಶೀಘ್ರದಲ್ಲೇ ನೂತನ ಸಮಿತಿಯನ್ನು ನೇಮಕ ಮಾಡಲಾಗುವುದು. ತಡವಾದಲ್ಲಿ ಆಡಳಿತಾಧಿಕಾರಿಯನ್ನಾದರೂ ನೇಮಕ ಮಾಡಿ ದರ್ಗಾ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ವಕ್ಫ್ ಅಧಿಕಾರಿ ನವೀದ್ ಪಾಷಾ, ಮುಖಂಡರಾದ ಮುಜಮಿಲ್, ಸಾಬೀರ್, ಅಮಾನುಲ್ಲಾ, ಆರೀಫ್ ಖಾನ್, ರಹಮತುಲ್ಲಾ, ನಿಮ್ಮಕಾಯಲಹಳ್ಳಿ ದರ್ಗಾ ಮುಜಾವರ್ ಮೌಲಾ ಆಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.