ADVERTISEMENT

ಎಸ್‌ಐಟಿ ವಿಚಾರಣೆಗೆ ಒಪ್ಪಿಗೆ ಸಮಾಧಾನ ತಂದಿದೆ: ಎಚ್.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 27 ಮೇ 2024, 23:42 IST
Last Updated 27 ಮೇ 2024, 23:42 IST
ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ   

ಚಿಕ್ಕಬಳ್ಳಾಪುರ: ‘ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾಗಬೇಕು ಮತ್ತು ಸಹಕಾರ ನೀಡಬೇಕು ಎಂದು ದೇವೇಗೌಡರು ಪ್ರಜ್ವಲ್‌ಗೆ ಎಚ್ಚರಿಕೆ ನೀಡಿದ್ದರು‌. ನಾನು ಸಹ ಮನವಿ ಮಾಡಿದ್ದೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

‘ನಮ್ಮ ಮನವಿಗೆ ಓಗೊಟ್ಟು ವಿಚಾರಣೆಗೆ ಹಾಜರಾಗುವುದಾಗಿ ಪ್ರಜ್ವಲ್‌ ಹೇಳಿದ್ದಾನೆ. ಇದು ನಮಗೂ ಸಮಾಧಾನ ತಂದಿದೆ’ ಎಂದು ನಗರದಲ್ಲಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

‘ಜೆಡಿಎಸ್‌ ಕಾರ್ಯಕರ್ತರ ನೋವಿಗೆ ಸ್ಪಂದಿಸಿ ಕ್ಷಮೆ ಕೋರುವಂತೆ ಹೇಳಿದ್ದೆವು. ಆ ಪ್ರಕಾರ ಕ್ಷಮೆ ಕೋರಿದ್ದಾನೆ. ಪಕ್ಷದ ಕಾರ್ಯಕರ್ತರ ಮೇಲೆ ಮಮತೆ ಇದೆ ಎನ್ನುವುದನ್ನು ತೋರಿಸಿಕೊಂಡಿದ್ದಾನೆ. ನನಗೆ ಸಮಾಧಾನವಿದೆ’ ಎಂದರು.

ADVERTISEMENT

ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದರೆ ಪೆನ್‌ಡ್ರೈವ್ ಕೊಟ್ಟ ಅವರೇ (ಕಾಂಗ್ರೆಸ್) ಸಿಕ್ಕಿಹಾಕಿಕೊಳ್ಳುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.

ಕೆಲವು ಸಚಿವರು ತಮ್ಮ ಇಲಾಖೆ ನಿರ್ವಹಣೆಗಿಂತ ಪ್ರಜ್ವಲ್ ರೇವಣ್ಣ ಪ್ರಕರಣದ ವಕೀಲಿಕೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

‘ಶುಂಠಿ ಬೆಳೆದವರು ಬೀದಿಗೆ ಬಂದಿದ್ದಾರೆ. ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಸರ್ಕಾರ ಮಾತ್ರ ಪ್ರಜ್ವಲ್ ಪ್ರಕರಣಕ್ಕೆ ದೊಡ್ಡ ಪ್ರಚಾರ ಕೊಡುತ್ತಿದೆ. ಇದರಿಂದ ಏನು ಸಾಧನೆ ಮಾಡುತ್ತೀರಿ’ ಎಂದು ಪ್ರಶ್ನಿಸಿದರು.

‘ಇದು ಯಾರೂ ಬೆನ್ನು ತಟ್ಟುವ ಪ್ರಕರಣವಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ವಾತಾವರಣ ದಲ್ಲಿ ತನಿಖೆ ನಡೆಯುತ್ತದೆಯೇ ಎನ್ನುವುದೇ ನನ್ನ ಸಂಶಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.