ADVERTISEMENT

ಶಿಡ್ಲಘಟ್ಟ | ನಶಿಸಿದ ಅಜೀವಿಕ ಧರ್ಮ: ಸೋಮೇಶ್ವರ ದೇವಾಲಯದ ಶಾಸನದಲ್ಲಿ ಉಲ್ಲೇಖ

ಡಿ.ಜಿ.ಮಲ್ಲಿಕಾರ್ಜುನ
Published 19 ಫೆಬ್ರುವರಿ 2026, 5:58 IST
Last Updated 19 ಫೆಬ್ರುವರಿ 2026, 5:58 IST
<div class="paragraphs"><p>ಶಿಡ್ಲಘಟ್ಟ ತಾಲ್ಲೂಕಿನ ಗುಡಿಹಳ್ಳಿಯ ಸೋಮೇಶ್ವರ ದೇವಾಲಯದ ಅಧಿಷ್ಠಾನದ ಮೇಲೆ ತಮಿಳು ಭಾಷೆಯಲ್ಲಿ ಬರೆದಿರುವ ಶಾಸನ</p></div>

ಶಿಡ್ಲಘಟ್ಟ ತಾಲ್ಲೂಕಿನ ಗುಡಿಹಳ್ಳಿಯ ಸೋಮೇಶ್ವರ ದೇವಾಲಯದ ಅಧಿಷ್ಠಾನದ ಮೇಲೆ ತಮಿಳು ಭಾಷೆಯಲ್ಲಿ ಬರೆದಿರುವ ಶಾಸನ

   

ಶಿಡ್ಲಘಟ್ಟ: ದೇಶದಲ್ಲಿ ಹಲವಾರು ಧರ್ಮಗಳು ಇರುವಂತೆ ಅಜೀವಿಕ ಎಂಬುದೊಂದು ಧರ್ಮವೂ ಇತ್ತು. ಮಹಾವೀರ, ಬುದ್ಧರ ಸಮಕಾಲೀನನೇ ಅದ ಮಕ್ಕಲಿ ಗೋಸಲ ಹುಟ್ಟುಹಾಕಿದ ಧರ್ಮವಿದು.

ಈ ಅಪರೂಪದ ಧರ್ಮದ ಕುರಿತ ಮಾಹಿತಿ ತಾಲ್ಲೂಕಿನ ಗುಡಿಹಳ್ಳಿಯ ಸೋಮೇಶ್ವರ ದೇವಾಲಯದ ಅಧಿಷ್ಠಾನದ (ತಳಪಾಯದ ಕಲ್ಲಿನ) ಮೇಲೆ ಬರೆದಿರುವ ಶಾಸನದಲ್ಲಿದೆ. ಅಜೀವಿಕರಿಗೆ ಹೆಚ್ಚುವರಿಯಾಗಿ ವಿಶೇಷ ತೆರಿಗೆ ವಿಧಿಸಲಾಗಿದೆಯೆಂಬ ಅಂಶವನ್ನು ಈ ಶಾಸನ ಒಳಗೊಂಡಿದೆ.

ADVERTISEMENT

ಇದು ಕ್ರಿ.ಶ 1346ನೇ ಇಸವಿಯ ಶಾಸನವಾಗಿದೆ. ಆ ಕಾಲದಲ್ಲಿ ಗುಡಿಹಳ್ಳಿಯು ಅಂಬಡಕ್ಕಿ ನಾಡಿನ ಅಂತರ್ಗತ ಭಾಗವಾಗಿದ್ದು ಇದರ ಆಡಳಿತವು ಮಂಜಯ್ಯ ನಾಯಕನ ಮಗ ಅಂಕಯ್ಯನಾಯಕನ ಕೈಯಲ್ಲಿ ಇತ್ತು. ಅಂಬಡಕ್ಕಿ ನಾಡಿನ ಧರ್ಮಗುರು ಪಾಪಿಸಿಯರ್ ಈ ಸೋಮೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸಿದ್ದ ವಿವರಗಳು ಈ ಶಾಸನದಲ್ಲಿ ಇವೆ. ಈ ಶಾಸನದ ವೈಶಿಷ್ಟ್ಯವೇನೆಂದರೆಇದರಲ್ಲಿ ದೇವಾಲಯ ನಿರ್ವಹಣೆ ಸಂಗ್ರಹಿಸುವ ಸುಂಕಗಳ ಪೈಕಿ ಅಜೀವಿಕರ ಮೇಲಿನ ತೆರಿಗೆಯೂ ಸೇರಿದೆ ‌. ಅದನ್ನು ಅಚುವಮ್ ಅವಲಂಬವಮ್ ಎಂದು ಬರೆದಿದ್ದಾರೆ.

ದಕ್ಷಿಣ ಭಾರತದಲ್ಲಿನ ಅಜೀವಿಕರ ನೆಲೆಗಳು (ಎಡಚಿತ್ರ) ಶಿಡ್ಲಘಟ್ಟ ತಾಲ್ಲೂಕಿನ ಗುಡಿಹಳ್ಳಿಯ ಸೋಮೇಶ್ವರ ದೇವಾಲಯದ ಅಧಿಷ್ಠಾನದ ಮೇಲೆ ತಮಿಳು ಭಾಷೆಯಲ್ಲಿ ಬರೆದಿರುವ ಶಾಸನ

ಗುಡಿಹಳ್ಳಿಯ ಶಾಸನ ಕಾಲಾನುಕ್ರಮದಲ್ಲಿ ಕಡೆಯ ಶಾಸನವಾದ್ದರಿಂದ ಬಹುಶಃ ಅಜೀವಿಕರು ಈ ಭಾಗದಲ್ಲಿ 14ನೇ ಶತಮಾನದವರೆಗೂ ಜೀವಿಸಿದ್ದರೆಂದೇ ಭಾವಿಸಬಹುದಾಗಿದೆ.

‘ಸಾವಿನ ನಂತರದ ಪರಮಪದ ಅಥವಾ ಮೋಕ್ಷದ ಕುರಿತಾಗಿ ಈ ಅಜೀವಿಕ ಧರ್ಮದವರಿಗೆ ನಂಬಿಕೆ ಇರಲಿಲ್ಲ. ಇಹದಲ್ಲಿ ಪಟ್ಟ ಸುಖವೇ ಸುಖ. ತುಪ್ಪ ತಿನ್ನಬಯಸಿದರೆ ಕೊಂಡು ತಿನ್ನು, ಇಲ್ಲವಾದರೆ ಬೇಡಿ ತಿನ್ನು, ಅದೂ ಸಾಧ್ಯವಾಗಲಿಲ್ಲದಿದ್ದರೆ ಕದ್ದು ತಿನ್ನು ಎನ್ನುವುದು ಅವರ ಸಿದ್ಧಾಂತ. ವಿಶೇಷವೆಂದರೆ ರಾಜರು ಅವರ ಮೇಲೆ ತೆರಿಗೆ ವಿಧಿಸಿ ಬಿಡುತ್ತಿದ್ದರು. ರಾಜಾಶ್ರಯ ಇಲ್ಲದ ಕಾರಣ ಆ ಧರ್ಮವು ಕಾಲಾಂತರದಲ್ಲಿ ನಿರ್ನಾಮ ಆಗಿರಬಹುದು. ಡಾ.ಎ.ಎಲ್.ಭಾಷ್ಯಂ ಅವರು ಅಜೀವಿಕರ ಬಗ್ಗೆ ಸಂಶೋಧನಾತ್ಮಕ ಕೃತಿ ರಚಿಸಿದ್ದಾರೆ’ ಎಂದು ಶಾಸನತಜ್ಞ ಡಿ.ಎನ್.ಸುದರ್ಶನ ರೆಡ್ಡಿ ತಿಳಿಸಿದರು.

ಅಂಬಡಕ್ಕಿನಾಡಿನ ಅಧಿಪತಿ:

ಹೊಯ್ಸಳರ ಸೋಮೇಶ್ವರ ತನ್ನ ಇಬ್ಬರು ಮಕ್ಕಳು ಮುಮ್ಮಡಿ ನರಸಿಂಹ ಮತ್ತು ರಾಮನಾಥರಿಗೆ ರಾಜ್ಯವನ್ನು ಹಂಚಿದ್ದ. ರಾಮನಾಥನಿಗೆ ಕಣ್ಣಾನೂರು ರಾಜಧಾನಿಯಾದ ತಮಿಳು ಪ್ರದೇಶವು ಸಿಕ್ಕಿರುತ್ತದೆ. ಆತ ಮೂಲ ಹೊಯ್ಸಳ ಸಾಮ್ರಾಜ್ಯದ ಬೆಂಗಳೂರು, ಕೋಲಾರ, ಕೈವಾರ ಭಾಗಗಳನ್ನು ಗೆದ್ದು, ಕೈವಾರನಾಡಿನಿಂದ ಹೊಸದೊಂದು ವಿಭಾಗವನ್ನು ಪ್ರತ್ಯೇಕಿಸಿದ. ಅದೇ ಈಗಿನ ಅಂಬಾಜಿದುರ್ಗದ ತಪ್ಪಲಿನಲ್ಲಿ ಇರುವ ಉಪ್ಪಾರಪೇಟೆಯ ಸುತ್ತಲೂ ಇದ್ದ ಅಂಬಡಕ್ಕಿನಾಡು. ಅದರ ವ್ಯಾಪ್ತಿ ದೇವನಹಳ್ಳಿ ತಾಲ್ಲೂಕಿನ ವಿಜಯಪುರದಿಂದ ಶಿಡ್ಲಘಟ್ಟ ತಾಲ್ಲೂಕಿನ ಗುಡಿಹಳ್ಳಿಯವರೆಗೂ ಇತ್ತು.

ರಾಮನಾಥನು ಈ ಹೊಸ ಪ್ರಾಂತ್ಯಕ್ಕೆ ಮಂಜಯ್ಯನಾಯಕನನ್ನು ರಾಜ್ಯಪಾಲನನ್ನಾಗಿ ಮಾಡಿದ್ದ. ಹೊಯ್ಸಳ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ಮೇಲೆ ಈ ಭಾಗಕ್ಕೆ ಮಂಜಯ್ಯನಾಯಕನ ಮಗ ಅಂಕಯ್ಯನಾಯಕ ಅಧಿಪತಿ ಆದ. ಆತನ ಕಾಲದಲ್ಲಿ ಆಡಳಿತ ಕೇಂದ್ರ ಉಪ್ಪಾರಪೇಟೆಯಲ್ಲಿ ಇದ್ದ ಪಾಪ್ಪಿಸೀಯರ್ ಎಂಬ ಧರ್ಮಗುರುವು ಗುಡಿಹಳ್ಳಿಯ ಸೋಮೇಶ್ವರ ದೇವಾಲಯವೂ ಸೇರಿದಂತೆ ಹಲವು ಶಿವಾಲಯಗಳ ಜೀರ್ಣೋದ್ಧಾರ ಮಾಡಿಸಿದ್ದ ವಿವರವನ್ನು ನಾವು ಈ ಶಾಸನದಲ್ಲಿ ಕಾಣಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.