ADVERTISEMENT

ಆವಲಗುರ್ಕಿ ಶಾಲೆಯಲ್ಲಿ ಗುರು ಶಿಷ್ಯರ ಸಮ್ಮಿಲನ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 13:21 IST
Last Updated 9 ಫೆಬ್ರುವರಿ 2020, 13:21 IST
ಆವಲಗುರ್ಕಿ ಶಾಲೆಯಲ್ಲಿ ಕಂಡುಬಂದ ಗುರು ಶಿಷ್ಯರ ಸಮಾಗಮ
ಆವಲಗುರ್ಕಿ ಶಾಲೆಯಲ್ಲಿ ಕಂಡುಬಂದ ಗುರು ಶಿಷ್ಯರ ಸಮಾಗಮ   

ಚಿಕ್ಕಬಳ್ಳಾಪುರ: ತಾಲ್ಲೂಕಿನ ಆವಲಗುರ್ಕಿಯ ಸರ್ಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸದ ಅವಧಿಯಲ್ಲಿ ಮಾರ್ಗದರ್ಶಕರಾಗಿದ್ದ ಶಿಕ್ಷಕರನ್ನು ಕರೆಸಿ ಅರ್ಥಪೂರ್ಣ ಗುರುವಂದನೆ ಸಲ್ಲಿಸಿದರು.

ಪ್ರೌಢಶಾಲೆಯ 2008–09ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ತಮಗೆ ಕಲಿಸಿದ ಗುರುಗಳಿಗೆ ಸನ್ಮಾನಿಸಿ, ಗುರು ಶಿಷ್ಯರ ಸಮ್ಮಿಲನದ ಮೂಲಕ ಧನ್ಯತೆ ಮೆರೆದು ಕಿರಿಯರಿಗೆ ಮಾದರಿಯಾದರು. ಜತೆಗೆ ಅಪರೂಪಕ್ಕೆ ಸಿಕ್ಕ ಸಹಪಾಠಿಗಳ ಜತೆಗೆ ಶಾಲಾ ದಿನಗಳ ನೆನಪುಗಳನ್ನು ಮೆಲುಕು ಹಾಕಿ, ಹರ್ಷಪಟ್ಟರು.

ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿನಿ ನಾಗರತ್ನ ಮಾತನಾಡಿ, ‘ಹತ್ತಾರು ವರ್ಷಗಳಿಂದ ದೂರ ಇದ್ದ ಸಹಪಾಠಿಗಳನ್ನು, ಶಿಕ್ಷಕರನ್ನು ಗುರುವಂದನ ಕಾರ್ಯಕ್ರಮದ ನೆಪದಲ್ಲಿ ಪುನಃ ಭೇಟಿ ಮಾಡುತ್ತಿರುವುದು ತುಂಬಾ ಸಂತಸ ತಂದಿದೆ. ಗುರುಗಳ ಋಣ ಏನೂ ಮಾಡಿದರೂ ತೀರಿಸಲಾಗದು. ಈ ಕಾರ್ಯಕ್ರಮ ನಮ್ಮ ಸಹಪಾಠಿಗಳೆಲ್ಲರಲ್ಲಿ ಶಾಲೆಯ ದಿನಗಳ ಮಧುರ ನೆನಪಗಳನ್ನು ಮತ್ತೆ ಮೆಲುಕು ಹಾಕಲು ಸಹಕಾರಿಯಾಯಿತು’ ಎಂದು ತಿಳಿಸಿದರು.

ADVERTISEMENT

ಶಾಲೆಯ ಮುಖ್ಯಶಿಕ್ಷಕಿ ವಿಜಯವತಿ ಮಾತನಾಡಿ, ‘ಶಾಲೆಯ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಗುರುವಂದನೆ ಸಲ್ಲಿಸಿದ್ದು ನೋಡಿ ಹೃದಯ ತುಂಬಿ ಬಂದಿದೆ. ಇಂತಹ ಸಂಸ್ಕಾರ ಇವತ್ತು ಅಗತ್ಯವಾಗಿದೆ. ಸದಾ ಶಿಷ್ಯರ ಏಳಿಗೆ ಬಯಸುವ ಶಿಕ್ಷಕರು ಏನನ್ನೂ ಬಯಸುವುದಿಲ್ಲ. ಅಕ್ಷರ ಕಲಿಸಿದ ಗುರುಗಳನ್ನು ಮರೆಯದೆ ವಿದ್ಯಾರ್ಥಿಗಳು ತೋರಿದ ಗೌರವ ನಿಜಕ್ಕೂ ಅಭಿನಂದನಾರ್ಹ’ ಎಂದರು.

ಸನ್ಮಾನಿತ ಶಿಕ್ಷಕರು ವಿದ್ಯಾರ್ಥಿಗಳನ್ನು ಕುರಿತು ಮನತುಂಬಿ ಮಾತನಾಡಿ, ಹಳೆಯ ವಿದ್ಯಾರ್ಥಿಗಳು ಶಿಕ್ಷಕರ ವೃತ್ತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಕರಾದ ರೆಡ್ಡಪ್ಪ, ಶಿವಕುಮಾರ್, ಅನಿತಾ, ಚಂದ್ರಕಲಾ,ಮಾಲತಿ, ವಿದ್ಯಾರ್ಥಿಗಳಾದ ರಮೇಶ್, ಮುನಿರಾಜು, ಸುನಿಲ್, ಮುರಳಿಧರ್, ಕವಿತಾ ಇನ್ನೂ ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.