
ಚಿಕ್ಕಬಳ್ಳಾಪುರ: ಬಿಜೆಪಿಯಿಂದ ಚಿಕ್ಕಬಳ್ಳಾಪುರದಲ್ಲಿ ನ.26ರಂದು ಸಂವಿಧಾನ ಸಮರ್ಪಣಾ ಜಾಗೃತಿ ಸಪ್ತಾಹ ಮತ್ತು ಭೀಮ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಿ.ಆರ್.ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮಾಡಿರುವ ಅನ್ಯಾಯವನ್ನು ಬೂತ್ ಮಟ್ಟದಲ್ಲಿ ಪ್ರಚಾರ ಮಾಡಲಾಗುವುದು ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶಕ್ಕೆ ಅಂಬೇಡ್ಕರ್ ಅವರ ಕೊಡುಗೆಗಳು, ಅವರಿಗೆ ಕಾಂಗ್ರೆಸ್ ಮಾಡಿದ ಮೋಸ ಮತ್ತು ಬಿಜೆಪಿ ಗೌರವ ಕೊಟ್ಟ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅಂಬೇಡ್ಕರ್ ಅವರು ಸಂಸತ್ತಿಗೆ ಹೋಗಬಾರದು ಎಂದು ಕಾಂಗ್ರೆಸ್ ಅವರನ್ನು ಚುನಾವಣೆಯಲ್ಲಿ ಸೋಲಿಸಲು ಯತ್ನಿಸಿತು. ಅಂಬೇಡ್ಕರ್ ಅವರಂತಹ ಬುದ್ದಿವಂತರು ಸಂಸತ್‌ನಲ್ಲಿ ಇದ್ದರೆ ನಮ್ಮದು ನಡೆಯುವುದಿಲ್ಲ ಎಂದು ನೆಹರೂ ತಿಳಿದಿದ್ದರು ಎಂದರು.
ಅಂಬೇಡ್ಕರ್ ಅವರು ರಚಿಸಿದ ಸಂವಿಧಾನಕ್ಕೆ ಕಾಂಗ್ರೆಸ್ ಯಾವ ರೀತಿ ತಿದ್ದುಪಡಿಗಳನ್ನು ಮಾಡಿದೆ. ಬಿಜೆಪಿ ಯಾವ ರೀತಿಯಲ್ಲಿ ಸಂವಿಧಾನಕ್ಕೆ ಗೌರವ ನೀಡಿದೆ ಎನ್ನುವ ಬಗ್ಗೆಯೂ ಭೀಮ ಸ್ಮರಣೆಯಲ್ಲಿ ತಿಳಿಸಲಾಗುವುದು. ಅಂಬೇಡ್ಕರ್ ಜನಿಸಿದ, ಬೆಳೆದ ಸ್ಥಳಗಳನ್ನು ಬಿಜೆಪಿ ಮತ್ತು ನರೇಂದ್ರ ಮೋದಿ ಅವರು ಅಭಿವೃದ್ಧಿಗೊಳಿಸಿದ್ದಾರೆ. ಸಂವಿಧಾನ ದಿನ ಜಾರಿಗೊಳಿಸಿದ್ದು ಸಹ ಬಿಜೆಪಿ ಎಂದು ಹೇಳಿದರು.
ರಾಹುಲ್ ಗಾಂಧಿ ಸಂವಿಧಾನದ ಪ್ರತಿಯನ್ನು ಜೇಬಿನಲ್ಲಿಟ್ಟುಕೊಂಡು ಓಡಾಡುವರು. ಆದರೆ ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ಅವರು ನಿಧನರಾದ ವೇಳೆ ನವದೆಹಲಿಯಲ್ಲಿ ಅವರ ಸಮಾಧಿಗೆ ಜಾಗ ಸಹ ನೀಡಲಿಲ್ಲ. ರಾಹುಲ್ ಗಾಂಧಿ ಮತಕ್ಕಾಗಿ ಮಾತ್ರ ಸಂವಿಧಾನದ ಪ್ರತಿ ಇಟ್ಟುಕೊಂಡು ಓಡಾಡುತ್ತಾರೆ ಎಂದು ಟೀಕಿಸಿದರು.
ದಲಿತರ ಅಭಿವೃದ್ಧಿಗೆ ಮೀಸಲಿರುವ ಎಸ್‌ಇಪಿ ಮತ್ತು ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದ್ದಾರೆ. ವಾಲ್ಮೀಕಿ ನಿಗಮದ ₹ 181 ಕೋಟಿಯನ್ನು ತೆಲಂಗಾಣ ಚುನಾವಣೆಗೆ ಬಳಸಿದ್ದಾರೆ. ಪ್ರತಿ ಇಲಾಖೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ದಲಿತರಿಗೆ ಮತ್ತು ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮಾಡಿರುವ ಮೋಸವನ್ನು ಜನರಿಗೆ ತಿಳಿಸಬೇಕು. ದಲಿತ ವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿ, ಕಾರ್ಯಕ್ರಮ ನಡೆಯುವ ಸ್ಥಳ ಮತ್ತು ಯಾರೆಲ್ಲಾ ನಾಯಕರು ಪಾಲ್ಗೊಳ್ಳುವರು ಎನ್ನುವುದನ್ನು ಶೀಘ್ರದಲ್ಲಿ ಅಂತಿಮಗೊಳಿಸಲಾಗುವುದು ಎಂದರು.
ಎಸ್.ಸಿ.ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜಣ್ಣ, ಮಾಜಿ ಶಾಸಕ ಎಂ.ರಾಜಣ್ಣ, ಮುಖಂಡರಾದ ವೇಣುಗೋಪಾಲ್, ಬಾಲಕುಂಟಹಳ್ಳಿ ಗಂಗಾಧರ್, ಲೀಲಾವತಿ ಶ್ರೀನಿವಾಸ್, ಬಾಗೇಪಲ್ಲಿ ವೆಂಕಟೇಶ್, ಕೃಷ್ಣಮೂರ್ತಿ, ಮಧುಚಂದ್ರ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
‘ದಲಿತರ ಏಳಿಗೆ ಸಹಿಸದ ಸಿದ್ದರಾಮಯ್ಯ’
ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರ ಏಳಿಗೆ ಸಹಿಸುವುದಿಲ್ಲ. ಡಾ.ಜಿ.ಪರಮೇಶ್ವರ ಮುಖ್ಯಮಂತ್ರಿ ಆಗುವರು ಎನ್ನುವ ಸಂದರ್ಭದಲ್ಲಿ ಸಿದ್ದರಾಮಯ್ಯ ಚಿತಾವಣೆ ನಡೆಸಿ ಅವರನ್ನು ಸೋಲುವಂತೆ ಮಾಡಿದರು ಎಂದು ಎಸ್.ಮುನಿಸ್ವಾಮಿ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.