ADVERTISEMENT

ಸಮ ಸಮಾಜಕ್ಕೆ ಶ್ರಮಿಸಿದ ನಾಯಕ: ಶಾಸಕ ಎಂ. ಕೃಷ್ಣಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 5:20 IST
Last Updated 15 ಏಪ್ರಿಲ್ 2022, 5:20 IST
ಚಿಂತಾಮಣಿಯಲ್ಲಿ ಗುರುವಾರ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿಯನ್ನು ಶಾಸಕ ಎಂ. ಕೃಷ್ಣಾರೆಡ್ಡಿ ಮತ್ತು ನಗರಸಭೆ ಅಧ್ಯಕ್ಷೆ ರೇಖಾ ಉಮೇಶ್ ಉದ್ಘಾಟಿಸಿದರು
ಚಿಂತಾಮಣಿಯಲ್ಲಿ ಗುರುವಾರ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿಯನ್ನು ಶಾಸಕ ಎಂ. ಕೃಷ್ಣಾರೆಡ್ಡಿ ಮತ್ತು ನಗರಸಭೆ ಅಧ್ಯಕ್ಷೆ ರೇಖಾ ಉಮೇಶ್ ಉದ್ಘಾಟಿಸಿದರು   

ಚಿಂತಾಮಣಿ: ‘ಅಂಬೇಡ್ಕರ್‌ ಅವರು ಅಸ್ಪೃಶ್ಯತೆ, ಅಸಮಾನತೆ, ಮೂಢನಂಬಿಕೆ ಮುಂತಾದ ಸಮಾಜದ ಅಂಕುಡೊಂಕು ತೊಡೆದು ಹಾಕಿ ಸರ್ವರಿಗೂ ಸಮಬಾಳು, ಸಮಪಾಲು ದೊರೆಯುವ ಸಮ ಸಮಾಜಕ್ಕಾಗಿ ಶ್ರಮಿಸಿದ ಮಹಾನ್ ಮೇಧಾವಿ’ ಎಂದು ಶಾಸಕ ಎಂ. ಕೃಷ್ಣಾರೆಡ್ಡಿ ಅಭಿಪ್ರಾಯಪಟ್ಟರು.

ನಗರದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 131ನೇ ಜಯಂತಿ ಹಾಗೂ ಬಾಬು ಜಗಜೀವನ ರಾಂ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿವಿಧ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಭಾರತಕ್ಕೆ ಸುಭದ್ರವಾದ ಸಂವಿಧಾನ ರಚಿಸಿದರು. ಜಾತಿ, ಧರ್ಮ, ಜನಾಂಗ, ರಾಜಕೀಯವನ್ನು ಮೀರಿ ದೇಶದ ಅಭಿವೃದ್ಧಿಗೆ ಶ್ರಮಿಸಿದರು. ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಶಕ್ತಿಯನ್ನು ಸರ್ವರಿಗೂ ಸಿಗುವಂತೆ ಮಾಡುವ ಉದ್ದೇಶ ಅವರದಾಗಿತ್ತು ಎಂದರು.

ADVERTISEMENT

ಶಿಕ್ಷಿತರಾಗಲಿ, ಅಶಿಕ್ಷಿತರಾಗಲಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ನೀಡಿ ದೇಶದ ಆಡಳಿತದಲ್ಲಿ ಪಾಲ್ಗೊಳ್ಳುವಂತಹ ಸಂವಿಧಾನವನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ ಮಹಾತ್ಮ ಎಂದು
ಬಣ್ಣಿಸಿದರು.

ಬಾಬು ಜಗಜೀವನ ರಾಂ ಹಸಿರು ಕ್ರಾಂತಿಯ ಹರಿಕಾರ. ದೇಶದಲ್ಲಿ ಆಹಾರ ದೊರೆಯದೆ ಪರಿತಪಿಸುತ್ತಾ ವಿದೇಶಗಳ ಕಡೆ ಮುಖ ಮಾಡಿದ್ದ ಕಾಲದಲ್ಲಿ ಕೃಷಿ ಕ್ಷೇತ್ರದಲ್ಲಿ ಅಪಾರ ಬದಲಾವಣೆ ಮಾಡಿ ಆಹಾರದ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆ ಸಾಧಿಸಲು ಕಾರಣರಾದರು. ಉತ್ತಮ ವಾಗ್ಮಿ ಮತ್ತು ಆಡಳಿತಗಾರರಾಗಿದ್ದರು. ಕೇಂದ್ರ ಸರ್ಕಾರದ ಹಲವಾರು ಇಲಾಖೆಗಳಲ್ಲಿ ಕೆಲಸ ಮಾಡಿ ತಮ್ಮ ಪ್ರತಿಭೆ ಹೊರಹೊಮ್ಮುವಂತೆ ಮಾಡಿದ್ದರು ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ರೇಖಾ ಉಮೇಶ್ ಮಾತನಾಡಿ, ಸಂವಿಧಾನದ ಪಿತಾಮಹನ ಕೊಡುಗೆ, ಸಾಧನೆಯನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಕಡುಬಡತನದಲ್ಲಿ ಬೆಳೆದು ದೇಶದ ಅತ್ಯುನ್ನತ ಸ್ಥಾನ ಅಲಂಕರಿಸಿದ್ದರು. ಮಹಿಳೆಯರ ಶಿಕ್ಷಣ, ಸಮಾನತೆಗಾಗಿ ಅಪಾರವಾಗಿ ಶ್ರಮಿಸಿದ ಮಹಾನ್ ವ್ಯಕ್ತಿ ಎಂದು ನುಡಿದರು.

ಪ್ರವಾಸಿ ಮಂದಿರದಿಂದ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಿತು. ಡೊಳ್ಳುಕುಣಿತ, ತಮಟೆ ವಾದನ, ಕಳಸ ಹೊತ್ತ ಮಹಿಳೆಯರು, ವಿದ್ಯಾರ್ಥಿಗಳ ಬ್ಯಾಂಡ್ ಸೆಟ್ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರವಣಿಗೆಗೆ ಮೆರುಗು ನೀಡಿದವು. ಅಂಬೇಡ್ಕರ್ ಭಾವಚಿತ್ರಗಳನ್ನು ಹೊತ್ತ ಹತ್ತಾರು ಅಲಂಕೃತ ಬೆಳ್ಳಿರಥಗಳು ಭಾಗವಹಿಸಿದ್ದವು. ಮೆರವಣಿಗೆಯು ನಗರದ ಪರಮುಖ ರಸ್ತೆಗಳಲ್ಲಿ ಸಂಚರಿಸಿದ ನಂತರ ಅಂಬೇಡ್ಕರ್ ಭವನಕ್ಕೆ ತಲುಪಿತು.

ಮೆರವಣಿಗೆಯಲ್ಲಿ ಶಾಸಕ ಕೃಷ್ಣಾರೆಡ್ಡಿ ಇತರೆ ನಾಯಕರ ಜತೆ ತಮಟೆ ವಾದನಕ್ಕೆ ಕುಣಿದು ಕುಪ್ಪಳಿಸಿದರು. ತಹಶೀಲ್ದಾರ್ ಹನುಮಂತರಾಯಪ್ಪ, ನಗರಸಭೆ ಪೌರಾಯುಕ್ತ ಉಮಾಶಂಕರ್, ಉಪಾಧ್ಯಕ್ಷೆ ಸುಹಾಸಿನಿ ರೆಡ್ಡಿ, ಸದಸ್ಯರಾದ ಅಗ್ರಹಾರ ಮುರಳಿ, ಮಂಜುನಾಥ್, ಮಹ್ಮದ್ ಗೌಸ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಜನಾರ್ದನ ರೆಡ್ಡಿ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಹರ್ಷವರ್ಧನ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ, ಡಿವೈಎಸ್‌ಪಿ ಚಂದ್ರಶೇಖರ್, ಸಿಡಿಪಿಒ ಮಹೇಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.