ಶಿಡ್ಲಘಟ್ಟ: ತಾಲ್ಲೂಕಿನ ಅಂಕತಟ್ಟಿ ಗ್ರಾಮದಲ್ಲಿ ಆವತಿ ನಾಡಪ್ರಭುಗಳ ಶಾಸನವನ್ನು ಶಾಸನ ತಜ್ಞ ಕೆ.ಧನಪಾಲ್, ಅಪ್ಪೆಗೌಡನಹಳ್ಳಿ ತ್ಯಾಗರಾಜ್ ಮತ್ತು ಡಿ.ಎನ್.ಸುದರ್ಶನರೆಡ್ಡಿ ಪತ್ತೆ ಹಚ್ಚಿದ್ದಾರೆ.
ಶಾಸನವು ಅಂಕತಟ್ಟಿ ಗ್ರಾಮದ ಸರ್ಕಾರಿ ಶಾಲೆ ಆವರಣದ ಗೋಡೆಗೆ ಸೇರಿಕೊಂಡಿದೆ. ಕ್ಷೇತ್ರ ಕಾರ್ಯದಲ್ಲಿ ಗಮನಿಸಿದ ಕೆ.ಧನಪಾಲ್ ಮತ್ತು ತಂಡ, ಸ್ಥಳೀಯರಾದ ವೆಂಕಟರೆಡ್ಡಿ ಅವರ ಸಹಕಾರದಿಂದ ಬಣ್ಣ ಬಳಿದು ವಿರೂಪವಾಗಿದ್ದ ಶಾಸನವನ್ನು ಸ್ವಚ್ಛಗೊಳಿಸಿದ್ದಾರೆ. ಅಧ್ಯಯನ ಮಾಡಿ ಗ್ರಾಮಸ್ಥರಿಗೆ ಶಾಸನ ಹಾಗೂ ಅವುಗಳ ಮಹತ್ವದ ಕುರಿತು ಜಾಗೃತಿ ಮೂಡಿಸಿದರು.
ಮಾರ್ಚ್ 3, 1729ರಂದು ವಡಿಗೆನಹಳ್ಳಿ (ಇಂದಿನ ವಿಜಯಪುರ) ಚೆನ್ನಕೇಶವ ದೇವಾಲಯದ ಪೂಜಾ ಕೈಂಕರ್ಯಗಳಿಗೆ ಆವತಿ ನಾಡಪ್ರಭು ಗೋಪಾಲಗೌಡ ಮಗ ದೊಡ್ಡಬೈರೇಗೌಡ ಅಂಗತಟ್ಟಿ (ಇಂದಿನ ಅಂಕತಟ್ಟಿ) ಮತ್ತು ಶೆಟ್ಟಿಹಳ್ಳಿ ಗ್ರಾಮಗಳ ತೆರಿಗೆಗಳನ್ನು ದಾನವಾಗಿ ನೀಡಿರುವ ವಿಚಾರವನ್ನು ಈ ಶಾಸನ ತಿಳಿಸುತ್ತದೆ.
ವಿಶೇಷವೆಂದರೆ ದಾನ ನೀಡಿದಾಗ ಶಾಸನವನ್ನು ಕೆತ್ತಿ ವಿಜಯಪುರದ ಗೋಪಾಲಸ್ವಾಮಿ ದೇವಾಲಯದ ಮುಂಭಾಗದಲ್ಲಿ ಹಾಕಿಸಿ, ನಾಲ್ಕು ದಿನಗಳ ನಂತರ ದಾನ ನೀಡಿದ ಅಂಕತಟ್ಟಿ ಗ್ರಾಮದಲ್ಲೂ ಇನ್ನೊಂದು ಶಾಸನವನ್ನು ಹಾಕಿಸಿದರು.
ಆವತಿ ನಾಡಪ್ರಭುಗಳಾಗಿದ್ದ ಗೋಪಾಲಗೌಡರು ತಮ್ಮ ಆಳ್ವಿಕೆ ಕಾಲದಲ್ಲಿ ದೇವನಹಳ್ಳಿ ವೇಣುಗೋಪಾಲಸ್ವಾಮಿ ದೇವಸ್ಥಾನದ ಪೂಜಾ ಕೈಂಕರ್ಯಗಳಿಗೆ ಮೇಲೂರು, ಮಳ್ಳೂರು ಸೇರಿದಂತೆ ಏಳು ಗ್ರಾಮಗಳನ್ನು ದಾನ ನೀಡಿರುವ ಬಗ್ಗೆ ಶಾಸನಗಳಲ್ಲಿ ದಾಖಲೆಯಿದೆ. ಅವರು ಒಂದು ಶಾಸನ ದೇವಸ್ಥಾನದಲ್ಲಿ ಹಾಕಿಸಿ, ದಾನವಾಗಿ ನೀಡಿರುವ ಏಳು ಗ್ರಾಮಗಳಲ್ಲೂ ಶಾಸನವನ್ನು ಹಾಕಿಸಿದ್ದಾರೆ.
ಈಗಲೂ ತಾಲ್ಲೂಕಿನ ಮೇಲೂರು ಮತ್ತು ಮಳ್ಳೂರಿನಲ್ಲಿ ಗೋಪಾಲಗೌಡರ ಶಾಸನಗಳಿವೆ. ಅದೇ ರೀತಿ ಅವರ ಮಗ ದೊಡ್ಡಬೈರೇಗೌಡ ಕೂಡ ವಿಜಯಪುರದಲ್ಲಿರುವ ಚೆನ್ನಕೇಶವ ದೇವಸ್ಥಾನದಲ್ಲಿ ಒಂದು ಶಾಸನವನ್ನೂ, ಅದರ ಸೇವಾರ್ಥವಾಗಿ ದಾನ ನೀಡಿರುವ ಅಂಕತಟ್ಟಿ ಗ್ರಾಮದಲ್ಲಿಯೂ ಒಂದು ಶಾಸನವನ್ನು ಹಾಕಿಸಿದ್ದಾರೆ ಎಂದು ಶಾಸನ ತಜ್ಞ ಧನಪಾಲ್ ವಿವರಿಸಿದರು.
‘ಈ ಶಾಸನದಲ್ಲಿ ಉಲ್ಲೇಖವಾಗಿರುವ ಗೋಪಾಲಗೌಡರು ಆವತಿನಾಡಪ್ರಭು ರಣಭೈರೇಗೌಡರ ವಂಶಸ್ಥರು. ಆವತಿನಾಡ ಪ್ರಭುಗಳು 14ನೇ ಶತಮಾನದಲ್ಲಿ ಕಂಚಿ ದಿಕ್ಕಿನಿಂದ ಬಂದು ನಂದಿಸೀಮೆ ಕಾರಹಳ್ಳಿಯಲ್ಲಿ ನೆಲೆಗೊಂಡ ಮೇಲೆ ಯಲಹಂಕ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿಗಳನ್ನು ಪ್ರತ್ಯೇಕವಾಗಿ ಪಾಲಿಸತೊಡಗುತ್ತಾರೆ. ಗೋಪಾಲಗೌಡರ ವಂಶಸ್ಥರು ದೇವನಹಳ್ಳಿಯಲ್ಲಿ ಇದ್ದಾಗ ಅವರ ಆಡಳಿತ ವ್ಯಾಪ್ತಿ ವಡಿಗೆಹಳ್ಳಿಯೂ ಸೇರಿದಂತೆ ಶಿಡ್ಲಘಟ್ಟದ ಬೂದಾಳದವರೆಗೂ ವಿಸ್ತರಿಸಿರುತ್ತದೆ. ಹೈದರಾಲಿ ದೇವನಹಳ್ಳಿಯನ್ನು ವಶಪಡಿಸಿಕೊಂಡ ನಂತರ ಇವರು ತಮ್ಮ ದಾಯಾದಿಗಳ ಊರಾದ ಚಿಕ್ಕಬಳ್ಳಾಪುರದಕ್ಕೆ ಹೋಗಿಬಿಡುತ್ತಾರೆ’ ಎಂದು ಶಾಸನತಜ್ಞ ಡಿ.ಎನ್.ಸುದರ್ಶನರೆಡ್ಡಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ವೆಂಕಟರೆಡ್ಡಿ ಹಾಗೂ ಇತರ ಅಂಕತಟ್ಟಿ ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.