ADVERTISEMENT

ಬಾಗೇಪಲ್ಲಿ | ಅಂಗನವಾಡಿ ನೌಕರರಿಂದ ಕಪ್ಪು ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 6:07 IST
Last Updated 23 ಆಗಸ್ಟ್ 2025, 6:07 IST
<div class="paragraphs"><p>ಬಾಗೇಪಲ್ಲಿ ಸಿಡಿಪಿಒ ಕಚೇರಿ ಮುಂದೆ ಅಂಗನವಾಡಿ ನೌಕರರು ಕಚೇರಿ ಅಧಿಕಾರಿ ಚೈತನ್ಯಗೆ ಮನವಿ ಪತ್ರ ಸಲ್ಲಿಸಿದರು</p></div>

ಬಾಗೇಪಲ್ಲಿ ಸಿಡಿಪಿಒ ಕಚೇರಿ ಮುಂದೆ ಅಂಗನವಾಡಿ ನೌಕರರು ಕಚೇರಿ ಅಧಿಕಾರಿ ಚೈತನ್ಯಗೆ ಮನವಿ ಪತ್ರ ಸಲ್ಲಿಸಿದರು

   

ಬಾಗೇಪಲ್ಲಿ: ಅಂಗನವಾಡಿ ನೌಕರರನ್ನು ಸಿ ಮತ್ತು ಡಿ ದರ್ಜೆಯ ನೌಕರರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲ್ಲೂಕು ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು. 

ಅಂಗನವಾಡಿ ನೌಕರರ ಸಂಘದ (ಸಿಐಟಿಯು) ಜಿಲ್ಲಾ ಅಧ್ಯಕ್ಷೆ ಜಿ.ಎಂ.ಲಕ್ಷ್ಮಿದೇವಮ್ಮ ಮಾತನಾಡಿ, ಅಂಗನವಾಡಿ ನೌಕರರು ಅನೇಕ ವರ್ಷಗಳಿಂದ ನ್ಯಾಯಯುತವಾದ ಹಕ್ಕುಗಳಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಪ್ರತಿಭಟನೆಗಳನ್ನು ಮಾಡಿದ್ದಾರೆ. ಆದರೆ, ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳನ್ನು ಸರ್ಕಾರ ಬಗೆಹರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ADVERTISEMENT

ಶಿಶು ಕಲ್ಯಾಣ ಯೋಜನೆಯಡಿ ಐಸಿಡಿಎಸ್ ಯೋಜನೆ ಬಲಪಡಿಸದೆ ಮತ್ತು ಸೌಲಭ್ಯಗಳನ್ನು ನೀಡದೆ ಮುಖಚರ್ಯೆ ಗುರ್ತಿಸುವ ಕ್ರಮ (ಎಫ್‍ಆರ್‌ಎಸ್) ಅಳವಡಿಸಲಾಗಿದೆ. ಇದರಿಂದ ಅರ್ಹ ಫಲಾನುಭವಿಗಳ ಹಕ್ಕು ಕಸಿದಂತಾಗಲಿದೆ ಎಂದರು. 

ಎಫ್ಆರ್‌ಎಸ್ ಅನ್ನು ಸರ್ಕಾರವು ಕೂಡಲೇ ರದ್ದುಪಡಿಸಬೇಕು. ಅಲ್ಲದೆ, ಅಂಗನವಾಡಿ ಕಾರ್ಯಕರ್ತೆಯರ ನ್ಯಾಯಯುತವಾದ ಹಕ್ಕುಗಳನ್ನು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ ರಾಜ್ಯ ಎಲ್ಲ ತಾಲ್ಲೂಕು, ಜಿಲ್ಲಾ ಕಚೇರಿಗಳ ಮುಂದೆ ಗುರುವಾರ ಕಪ್ಪು ಬಟ್ಟೆ ಧರಿಸಿ, ಪ್ರತಿಭಟನೆ ಮಾಡಲಾಗಿದೆ ಎಂದು ಹೇಳಿದರು. 

ಮುಂದಿನ ದಿನಗಳಲ್ಲಿ ನೌಕರರ ಬೇಡಿಕೆಗಳನ್ನು ಈಡೇರಿಸದಿದ್ದರೆ, ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಕೇಂದ್ರ ಸಚಿವರ ಮನೆ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು. 

ಪ್ರತಿಭಟನೆಯಲ್ಲಿ ಸಂಘದ ತಾಲ್ಲೂಕು ಅಧ್ಯಕ್ಷೆ ಕೆ.ರತ್ನಮ್ಮ, ಕಾರ್ಯದರ್ಶಿ ಕೆ.ಗೀತಾ, ಪದಾಧಿಕಾರಿಗಳಾದ ಶಿಲ್ಪ, ರಮಾದೇವಿ, ಅಲುವೇಲಮ್ಮ, ವಿಮಲ, ಗಂಗರತ್ಮಮ್ಮ, ಮಮತ, ಸುಶೀಲಮ್ಮ, ಗಂಗರತ್ನ, ಲಕ್ಷ್ಮಿ ಹಾಗೂ ಅಂಗನವಾಡಿ ನೌಕರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.