
ಚಿಕ್ಕಬಳ್ಳಾಪುರ: ಕಾರ್ಯಕ್ರಮಗಳ ಅನುಷ್ಠಾನ, ತರಬೇತಿ ಸೇರಿದಂತೆ ಇಲಾಖೆ ವ್ಯಾಪ್ತಿಯ ಯೋಜನೆಗಳ ಅನುಷ್ಠಾನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಪಶುಪಾಲನಾ ಇಲಾಖೆಯು ರಾಜ್ಯದಲ್ಲಿ ಮೊದಲ ಸ್ಥಾನಕ್ಕೆ ಭಾಜನವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ರಚನೆಯಾದ ನಂತರ ಇದೇ ಮೊದಲ ಬಾರಿಗೆ ಈ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
2025–26ನೇ ಸಾಲಿನಲ್ಲಿ ಏಪ್ರಿಲ್‌ನಿಂದ ಅಕ್ಟೋಬರ್ ಅಂತ್ಯಕ್ಕೆ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಚಿಕ್ಕಬಳ್ಳಾಪುರ ಪಶುಪಾಲನಾ ಇಲಾಖೆ ಶೇ 100ರಷ್ಟು ಗುರಿ ಸಾಧಿಸಿದೆ. ಬೆಂಗಳೂರಿನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳು ಪ್ರಶಂಸನಾ ಪ್ರಮಾಣ ಪತ್ರ ನೀಡಿದರು. ಜಿಲ್ಲಾ ಪಶುಸಂಗೋಪನಾ ಇಲಾಖೆ ನಿರ್ದೇಶಕ ರಂಗಪ್ಪ ಪ್ರಮಾಣ ಪತ್ರ ಸ್ವೀಕರಿಸಿದರು.
ಶೇ 99.9ರಷ್ಟು ಸಾಧನೆಯ ಮೂಲಕ ಚಿತ್ರದುರ್ಗ ಎರಡನೇ ಮತ್ತು ಶೇ 99.87ರಷ್ಟು ಸಾಧನೆಯ ಮೂಲಕ ಬಳ್ಳಾರಿ ತೃತೀಯ ಸ್ಥಾನಕ್ಕೆ ಭಾಜನವಾಗಿವೆ.
ಕೃತಕ ಗರ್ಭಧಾರಣೆ, ಲಸಿಕೆ ಕಾರ್ಯಕ್ರಮ, ಆರೋಗ್ಯ ಶಿಬಿರ ಸೇರಿದಂತೆ ವಿಸ್ತರಣಾ ಚಟುವಟಿಕೆಗಳು ಸೇರಿದಂತೆ ಇಲಾಖೆ ವ್ಯಾಪ್ತಿಯ ಎಲ್ಲ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಚಿಕ್ಕಬಳ್ಳಾಪುರ ಇಲಾಖೆ ಶೇ 100 ಗುರಿ ಸಾಧಿಸಿದೆ. ಪ್ರತಿ ತಿಂಗಳು ಈ ಪ್ರಗತಿಯ ವಿವರಗಳನ್ನು ಇಲಾಖೆಯ ಕೇಂದ್ರ ಕಚೇರಿಗೆ ಕಳುಹಿಸಲಾಗುತ್ತದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಪಶು ಇಲಾಖೆಯಲ್ಲಿ ಶೇ 50ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಈ ನಡುವೆಯೇ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಇಲಾಖೆಯು ಉತ್ತಮ ಸಾಧನೆ ತೋರಿದೆ.
‘ಜಿಲ್ಲೆಗೆ ಇದೆ ಮೊದಲ ಬಾರಿಗೆ ಈ ಗೌರವ ದೊರೆತಿದೆ. ಇದು ತಂಡದ ಕೆಲಸಕ್ಕೆ ದೊರೆತ ಶ್ರಮ. ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ. ನವೀನ್ ಭಟ್ ಮಾರ್ಗದರ್ಶನ ಮತ್ತು ಸೂಕ್ತ ಸಲಹೆ ಸೂಚನೆಗಳ ಪ್ರಥಮ ಸ್ಥಾನಗಳಿಸಲು ಸಾಧ್ಯವಾಗಿದೆ’ ಎಂದು ಪಶುಸಂಗೋಪನಾ ಇಲಾಖೆ ಜಿಲ್ಲಾ ಉಪನಿರ್ದೇಶಕ ರಂಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.