
ಬಾಗೇಪಲ್ಲಿ: ಪಟ್ಟಣದ ಹೊರವಲಯದ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಎಪಿಎಂಸಿ ತರಕಾರಿ ಮಾರುಕಟ್ಟೆ ಹಮಾಲಿ ಕಾರ್ಮಿಕ ಸಂಘ ಮತ್ತು ಎಪಿಎಂಸಿ ತರಕಾರಿ ವರ್ತಕರ ಸಂಘದ ಸಂಯುಕ್ತಾಶ್ರಯದಲ್ಲಿ ಸೋಮವಾರ ಮಾರುಕಟ್ಟೆಯ 150 ಹಮಾಲಿ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್‍ಗಳನ್ನು ವಿತರಿಸಲಾಯಿತು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಲಿಕಾರ್ಮಿಕರಿಗೆ ಅನೇಕ ಯೋಜನೆಗಳು ಜಾರಿ ಮಾಡಿವೆ. ಕೂಲಿಕಾರ್ಮಿಕರು ಈವರೆಗೆ ಕಾರ್ಡ್ ಮಾಡಿಸದಿರುವುದು ವಿಪರ್ಯಾಸ. ಕಾರ್ಮಿಕರು ತಮ್ಮ ಹಕ್ಕು ಪಡೆಯಲು ಸ್ಮಾಟ್ ಕಾರ್ಡ್ ಮಾಡಿಸಬೇಕು. ಆಕಸ್ಮಿಕ ಅಫಘಾತಗಳಲ್ಲಿ ಮೃತಪಟ್ಟರೆ ಕಾರ್ಮಿಕರ ಕುಟುಂಬಗಳಿಗೆ ಸರ್ಕಾರ ನೆರವು ನೀಡಲಿದೆ. ಮಕ್ಕಳ ವಿದ್ಯಾಭ್ಯಾಸ, ಕುಟುಂಬ ಪೋಷಣೆಗೆ ಸಾಲಸೌಲಭ್ಯ, ಆರೋಗ್ಯ ಚಿಕಿತ್ಸೆ, ಶಸ್ತ್ರಚಿಕಿತ್ಸೆಗಳಿಗೆ ಧನ ಸಹಾಯ ದೊರೆಯಲಿದೆ. ಎಲ್ಲ ಹಮಾಲಿಕಾರ್ಮಿಕರು ಸ್ಮಾಟ್ ಕಾರ್ಡ್ ಪಡೆಯಬೇಕು ಎಂದರು.
ತಾಲ್ಲೂಕಿನ ಪರಗೋಡು ಚಿತ್ರಾವತಿ ಡ್ಯಾಂ ಬಳಿ ಟೊಮೆಟೊ ಮಾರುಕಟ್ಟೆ ಮಾಡಲಾಗಿದೆ. ಹಾಲಿ ಇರುವ ಎಪಿಎಂಸಿಯಲ್ಲಿ ತರಕಾರಿ ವ್ಯಾಪಾರ ವಹಿವಾಟುಗಳು ಹೆಚ್ಚಾಗಿವೆ. ಸ್ಥಳಾವಕಾಶ ಇಲ್ಲದೆ ಸಂಕಷ್ಟ ಇದೆ. ಹೊರವಲಯದಲ್ಲಿ 100 ಎಕರೆಯಲ್ಲಿ ಎಪಿಎಂಸಿ ಮಾರುಕಟ್ಟೆ ಮಾಡಲು, ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಲಾಗುವುದು. ಎಪಿಎಂಸಿಯಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಹಂತ ಹಂತದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.
ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಎಚ್.ಎಸ್.ನರೇಂದ್ರ ಮಾತನಾಡಿ, ಎಲ್ಲ ಹಮಾಲಿ ಕಾರ್ಮಿಕರು ಸಂಘದಲ್ಲಿ ನೋಂದಾಯಿಸಿಕೊಳ್ಳಬೇಕು. ಹಮಾಲಿ ಕಾರ್ಮಿಕರ ಸಂಘಕ್ಕೆ ₹1 ಲಕ್ಷ ದೇಣಿಗೆ ನೀಡಲಾಗುವುದು. ಕಾರ್ಮಿಕರು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಎಪಿಎಂಸಿ ಪ್ರಾಂಗಣದ ಟೊಮೆಟೊ, ತರಕಾರಿಗಳ ಮಾರಾಟ ಜಾಗ, ಶೌಚಾಲಯಗಳು, ಕುಡಿಯುವ ನೀರು ಇಡುವ ಸ್ಥಳಕ್ಕೆ ಶಾಸಕ ಸುಬ್ಬಾರೆಡ್ಡಿ ಭೇಟಿ ಪರಿಶೀಲನೆ ನಡೆಸಿದರು. ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಎಪಿಎಂಸಿ ಕಾರ್ಯದರ್ಶಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಎಐಕೆಎಸ್ ರಾಜ್ಯ ಸಂಚಾಲಕ ಬಸವಲಿಂಗಪ್ಪ, ಎಪಿಎಂಸಿ ಕಾರ್ಯದರ್ಶಿ ಬಿ.ಶಶಿಕಲಾ, ರಾಕೇಶ್, ಆರ್.ಎಂ.ಚಲಪತಿ, ರಾಮರೆಡ್ಡಿ, ಆದಿಶೇಷು, ಎಸ್.ಸುಪ್ರಿತ್, ಮರಿಯಪ್ಪ, ಜಿ.ಎಂ.ರಾಮಕೃಷ್ಣಪ್ಪ, ನಾರಾಯಣಸ್ವಾಮಿ, ಪಿ.ಈಶ್ವರರೆಡ್ಡಿ, ಕೆ.ಎನ್.ಎಸ್. ಕೃಷ್ಣಪ್ಪ, ಶಂಕರಪ್ಪ, ನಾರಾಯಣಸ್ವಾಮಿ ಇದ್ದರು.
31ಕ್ಕೆ ಡಿಸಿಎಂ
ಡಿ.ಕೆ.ಶಿವಕುಮಾರ್ ತಾಲ್ಲೂಕಿನ ಗಂಟ್ಲಮಲ್ಲಮ್ಮ ಕಣಿವೆಯಿಂದ ಪಾತಪಾಳ್ಯ ಗೂಳೂರು ಹೋಬಳಿ ಚೇಳೂರು ತಾಲ್ಲೂಕಿನ ಕೆಲ ಗ್ರಾಮಗಳಿಗೆ ಕುಡಿಯುವ ನೀರು ಕಲ್ಪಿಸುವ ಯೋಜನೆ ಆಗಿದೆ. ಡ್ಯಾಂ ನಿರ್ಮಾಣಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ₹200 ಕೋಟಿ ಅನುದಾನ ನೀಡಿದೆ. ಜನವರಿ 31 ರಂದು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವರು ಶಾಸಕರು ಬಾಗೇಪಲ್ಲಿಗೆ ಆಗಮಿಸಿ ಗಂಟ್ಲಮಲ್ಲಮ್ಮ ಕಣಿವೆಯ ಡ್ಯಾಂನ ಭೂಮಿ ಪೂಜೆ ನಿರ್ವಹಿಸಲಿದ್ದಾರೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪತ್ರಕರ್ತರಿಗೆ ಮಾಹಿತಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.