ADVERTISEMENT

ಅಟೆಂಡರ್ ಕೊಲೆ: ನಾಲ್ಕು ಆರೋಪಿಗಳ ಬಂಧನ

ಕೊಲೆಗೆ ಕಾರಣವಾದ ತ್ರಿಕೋನ ಪ್ರೇಮ ಪ್ರಕರಣ: ಕಕ್ಷಿದಾರರಿಂದ ಕೊಲೆ ಮಾಡಿಸಿದ ವಕೀಲ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 15:06 IST
Last Updated 14 ಸೆಪ್ಟೆಂಬರ್ 2020, 15:06 IST
ದೀಪಾ, ನವೀನ್, ಅನಿಲ್, ಕೃಷ್ಣಮೂರ್ತಿ
ದೀಪಾ, ನವೀನ್, ಅನಿಲ್, ಕೃಷ್ಣಮೂರ್ತಿ   

ಚಿಕ್ಕಬಳ್ಳಾಪುರ: ನಗರದಲ್ಲಿಆ.17 ನಡೆದಿದ್ದ ಸಿಜೆಎಂ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಅಟೆಂಡರ್ ಮೈಸೂರು ಮೂಲದ ನವೀನ್ (32) ಅವರ ಕೊಲೆ ಪ್ರಕರಣ ಬೇಧಿಸಿರುವ ಪೊಲೀಸರು, ವಕೀಲನೊಬ್ಬ ಸೇರಿದಂತೆ ನಾಲ್ಕು ಆರೋಪಿಗಳನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪ್ರಕರಣದ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್, ‘ತ್ರಿಕೋನ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿದೆ. ಗುರುಕುಲನಾಗೇನಹಳ್ಳಿ ನಿವಾಸಿ, ಹೈಕೋರ್ಟ್ ವಕೀಲ ನವೀನ್ ಮತ್ತು ಚಿಂತಾಮಣಿ ನ್ಯಾಯಾಲಯ ಉದ್ಯೋಗಿ ದೀಪಾ ಸೇರಿದಂತೆ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಹೇಳಿದರು.

‘ಈ ಹಿಂದೆ ಚಿಕ್ಕಬಳ್ಳಾಪುರ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದ ದೀಪಾ ಅವರನ್ನು ವಕೀಲ ನವೀನ್ ಪ್ರೀತಿಸುತ್ತಿದ್ದ. ಅದೇ ಯುವತಿಯನ್ನು ಇತ್ತೀಚೆಗೆ ಅಟೆಂಡರ್‌ ನವೀನ್ ಸಹ ಪ್ರೀತಿಸಲು ಆರಂಭಿಸಿದ್ದ. ಮಾರ್ಚ್‌ 6 ರಂದು ದೀಪಾ ಅವರ ಮನೆಯಲ್ಲಿ ಇಬ್ಬರು ಇರುವುದನ್ನು ನೋಡಿದ್ದ ವಕೀಲ ನವೀನ್ ಗಲಾಟೆ ಮಾಡಿ ವಾಪಾಸಾಗಿದ್ದ’ ಎಂದು ತಿಳಿಸಿದರು.

ADVERTISEMENT

‘ಬಳಿಕ ದೀಪಾ ಸಹ ವಕೀಲ ನವೀನ್‌ಗೆ ಕರೆ ಮಾಡಿ ಅಟೆಂಡರ್ ನವೀನ್ ಕಾಟ ಕೊಡುತ್ತಿದ್ದಾನೆ, ಆತನನ್ನು ಹೇಗಾದರೂ ಮಾಡಿ ಮುಗಿಸಬೇಕು ಎಂದು ತಿಳಿಸಿದ್ದಳು. ಅದಕ್ಕಾಗಿ ನವೀನ್ ತನ್ನ ಕಕ್ಷಿದಾರಾಗಿದ್ದ ಚಿಕ್ಕಬಳ್ಳಾಪುರ ಮೂಲದ ಯಲಹಂಕ ನಿವಾಸಿಗಳಾದ ಕೃಷ್ಣಮೂರ್ತಿ, ಅನಿಲ್‌ ಎಂಬುವರ ಸಹಾಯ ಪಡೆದಿದ್ದ’ ಎಂದು ಮಾಹಿತಿ ನೀಡಿದರು.

‘ಅವಿವಾಹಿತರಾಗಿದ್ದ ಅಟೆಂಡರ್ ನವೀನ್‌ ಅವರು ನಗರದ ಪ್ರಶಾಂತ್‌ ನಗರದಲ್ಲಿ ಕೆಎಸ್‌ಆರ್‌ಟಿ ಡಿಪೋ ಹಿಂಭಾಗದ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಆ.17 ರಂದು ಅವರನ್ನು ಹಿಂಬಾಲಿಸಿ ಬಂದ ಕೃಷ್ಣಮೂರ್ತಿ, ಅನಿಲ್‌ ಅವರು ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದರು’ ಎಂದು ಹೇಳಿದರು.

‘ಈ ಕೊಲೆಯ ಉದ್ದೇಶಕ್ಕಾಗಿಯೇ ಪ್ರಮುಖ ಆರೋಪಿ, ವಕೀಲ ನವೀನ್ ಆ.8 ರಂದು ಹೊಸ ಸಿಮ್ ಮತ್ತು ಮೊಬೈಲ್ ಖರೀದಿಸಿದ್ದ. ಆ.17 ರಂದು ಆ ಸಿಮ್‌ನ ಸೇವೆ ಸ್ಥಗಿತಗೊಳಿಸಿದ್ದ. ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶಾಂತ್, ನಗರ ಪೊಲೀಸ್‌ ಠಾಣೆ ಎಸ್‌ಐ ಹೊನ್ನೇಗೌಡ ಅವರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಪ್ರಕರಣ ಬೇಧಿಸಿದ ತಂಡಕ್ಕೆ ಬಹುಮಾನ ನೀಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.