ADVERTISEMENT

ಬಾಬು ಜಗಜೀವನ ರಾಮ್ |ಅಭಿವೃದ್ಧಿ, ಕ್ರಾಂತಿಕಾರಿ ನಿಲುವಿನ ನಾಯಕ: ನವೀನ್ ಭಟ್

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 5:42 IST
Last Updated 7 ಜುಲೈ 2025, 5:42 IST
ಬಾಬು ಜಗಜೀವನ ರಾಮ್ ಅವರ ಪ್ರತಿಮೆಯನ್ನು  ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮುಂಭಾಗ ನಿರ್ಮಿಸಬೇಕು ಎಂದು ದಲಿತ ಸಂಘಟನೆಗಳ ಮುಖಂಡರು ಸಿಇಒ ಡಾ.ವೈ.ನವೀನ್ ಭಟ್ ಅವರಿಗೆ ಮನವಿ ಸಲ್ಲಿಸಿದರು 
ಬಾಬು ಜಗಜೀವನ ರಾಮ್ ಅವರ ಪ್ರತಿಮೆಯನ್ನು  ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮುಂಭಾಗ ನಿರ್ಮಿಸಬೇಕು ಎಂದು ದಲಿತ ಸಂಘಟನೆಗಳ ಮುಖಂಡರು ಸಿಇಒ ಡಾ.ವೈ.ನವೀನ್ ಭಟ್ ಅವರಿಗೆ ಮನವಿ ಸಲ್ಲಿಸಿದರು    

ಚಿಕ್ಕಬಳ್ಳಾಪುರ: ಮಾಜಿ ಉಪ‌ಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಮ್ ಅವರು ಜನರ ಒಳಿತಾಗಿ ಕ್ರಾಂತಿಕಾರಿ ನಿಲುವು ಮತ್ತು ಅಭಿವೃದ್ಧಿಗಾಗಿ ಒಲವು ಎರಡನ್ನೂ ಮೈಗೂಡಿಸಿಕೊಂಡಿದ್ದ ಅಪ್ರತಿಮ ನಾಯಕ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಭಾನುವಾರ ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಬಾಬು ಜಗಜೀವನರಾಮ್ ಅವರ 39ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಹಲವು ಗಂಭೀರ ಸಮಸ್ಯೆಗಳಿದ್ದವು. ಅವುಗಳ ನಿವಾರಣೆಯಲ್ಲಿ ಅವರ ಪಾತ್ರ ಬಹಳ ಮುಖ್ಯವಾಗಿದೆ. ಜಗಜೀವನ್ ರಾಮ್ ಅವರ ಜೀವನ ಚರಿತ್ರೆ ಅವಲೋಕಿಸಿದರೆ ದೇಶದ ಇತಿಹಾಸವೇ ಕಂಡುಬರುತ್ತದೆ ಎಂದರು.

ADVERTISEMENT

ಸ್ವಾತಂತ್ರ್ಯ ಪೂರ್ವದಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ, ದೌರ್ಜನ್ಯ, ಶೋಷಣೆ  ವಿರುದ್ಧ ಧ್ವನಿ ಎತ್ತಿದವರು ಬಾಬೂಜಿ ಮತ್ತು ಅಂಬೇಡ್ಕರ್. 1917-1920 ವೇಳೆ ಆಲ್ ಇಂಡಿಯಾ ಡಿಪ್ರೆಸೆಡ್ ಕ್ಲಾಸೆಸ್ ಫೆಡರೇಶನ್ ಸ್ಥಾಪಿಸಿದರು. ಅಂಬೇಡ್ಕರ್ ಅವರ ಕಾರ್ಯ, ನಿಲುವುಗಳಿಗೆ ಬಾಬೂಜಿ ಬೆಂಬಲವಾಗಿದ್ದರು ಎಂದರು.

ಕಾರ್ಮಿಕ ಸಚಿವ, ರಕ್ಷಣಾ ಸಚಿವ, ಕೃಷಿ ಸಚಿವರಾಗಿ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು. 40 ವರ್ಷ ಒಂದೇ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಅವರ ನಿಧನ ನಂತರ ಅವರ ಪುತ್ರಿ ಮೀರಾ ಕುಮಾರಿ ಎರಡು ಬಾರಿ ಅದೇ ಕ್ಷೇತ್ರದಲ್ಲಿ ಸಂಸದರಾಗಿ ಆಯ್ಕೆಯಾದರು. ಅಂದರೆ ಬಾಬೂಜಿ ಅವರು ಎಷ್ಟು ಪ್ರಭಾವಿ ರಾಜಕೀಯ ನಾಯಕರು ಎಂಬುದನ್ನು ಇದು ತೋರಿಸುತ್ತದೆ ಎಂದು ಹೇಳಿದರು.

ಬಾಬು ಜಗಜೀವನ ರಾಮ್ ಅವರ ಕುರಿತು ಉಪನ್ಯಾಸ ನೀಡಿದ ಮಂಚೇನಹಳ್ಳಿ ಅಂಬೇಡ್ಕರ್ ವಸತಿ ಶಾಲೆ ಶಿಕ್ಷಕ ಯುವರಾಜ್, ಬಾಬೂಜಿ ಬಿಎಸ್ಸಿ ವ್ಯಾಸಂಗದ ವೇಳೆ  ದಲಿತ ಕಾರ್ಮಿಕರನ್ನು ಒಗ್ಗೂಡಿಸಿ ಗಿರಣಿ ಮಾಲೀಕರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ ಜಯ ಸಾಧಿಸಿದರು. ಸಮಾನತೆಗಾಗಿ ಹೋರಾಡಿದ ಮಹಾನ್ ನಾಯಕ. ಅವರ ಆಶಯಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಉಪ ವಿಭಾಗಾಧಿಕಾರಿ ಡಿ.ಎಚ್ ಅಶ್ವಿನ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ತೇಜಾನಂದ ರೆಡ್ಡಿ, ಸಹಾಯಕ ನಿರ್ದೇಶಕ ಶೇಷಾದ್ರಿ, ವೃತ್ತ ನಿರೀಕ್ಷಕ ಮಂಜುನಾಥ್, ವಿವಿಧ ಸಮುದಾಯದ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.