ADVERTISEMENT

ಪ್ರಾಂತ ರೈತ ಸಂಘದ ಸಮ್ಮೇಳನ

ರೈತರ ಜಮೀನು ಸ್ವಾಧೀನ; ಕೃಷಿವಲಯ ಬಿಕ್ಕಟ್ಟು; ಹೋರಾಟಕ್ಕೆ ಕರೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 5:05 IST
Last Updated 25 ನವೆಂಬರ್ 2025, 5:05 IST
ಬಾಗೇಪಲ್ಲಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಪ್ರಾಂತ ರೈತ ಸಂಘದ 14ನೇ ಸಮ್ಮೇಳನ
ಬಾಗೇಪಲ್ಲಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಪ್ರಾಂತ ರೈತ ಸಂಘದ 14ನೇ ಸಮ್ಮೇಳನ   

ಬಾಗೇಪಲ್ಲಿ: ಕರ್ನಾಟಕ ರೈತ ಸಂಘದ 14ನೇ ತಾಲ್ಲೂಕು ಮಟ್ಟದ ಸಮ್ಮೇಳನವನ್ನು ಸೋಮವಾರ ಬಾಗೇಪಲ್ಲಿ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಯಿತು. 

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಅಧ್ಯಕ್ಷ ಯು. ಬಸವರಾಜು ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯ ಸರ್ಕಾರವು ಖಾಸಗೀಕರಣ, ಉದಾರೀಕರಣದ ಹೆಸರಿನಲ್ಲಿ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡು, ಕೃಷಿಕರು ಮತ್ತು ಕೃಷಿ ವಲಯವನ್ನು ವಿನಾಶದ ಅಂಚಿಗೆ ತಳ್ಳುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕೃಷಿ ವಲಯ ಮತ್ತು ಕೃಷಿಕರು ಈ ದೇಶದ ಆಸ್ತಿ. ರೈತರ ಜಮೀನುಗಳನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಂಡು, ಶ್ರೀಮಂತರು ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ನೀಡಲಾಗುತ್ತಿದೆ. ಇದರಿಂದ ದೇಶದಲ್ಲಿ ಶ್ರೀಮಂತರು ಮತ್ತು ಕಾರ್ಪೋರೇಟ್ ಕಂಪನಿಗಳ ಆದಾಯ ದ್ವಿಗುಣ ಆಗಿದೆ. ಆದರೆ ಕೃಷಿ ಕೂಲಿಕಾರ್ಮಿಕರು, ಜನಸಾಮಾನ್ಯರ ಆದಾಯ ಕಡಿಮೆ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಬಗರ್ ಹುಕುಂ ಸಕ್ರಮಕ್ಕಾಗಿ ರೈತರು ಅರ್ಜಿ ಸಲ್ಲಿಸಿ, ಅನೇಕ ವರ್ಷಗಳೇ ಆಗಿದೆ. ಆದರೆ, ಈವರೆಗೆ ರೈತರಿಗೆ ಭೂಮಿ ಮಂಜೂರಾತಿ ಆಗಿಲ್ಲ. ಅರ್ಜಿ ಸಲ್ಲಿಸಿದ ರೈತರಿಗೆ ಬಗರ್ ಹುಕುಂ ಮಂಜೂರಾತಿ ಪತ್ರಗಳನ್ನು ವಿತರಿಸಬೇಕು ಎಂದು ಆಗ್ರಹಿಸಿದರು.

ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಪಿ. ಮುನಿವೆಂಕಟಪ್ಪ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಶ್ವತ ನೀರಾವರಿ ಕಲ್ಪಿಸಲು ಸಂಘಟಿತ ಹೋರಾಟದ ಅಗತ್ಯವಿದೆ ಎಂದರು.

ಪ್ರಾಂತ ರೈತ ಸಂಘದ ತಾಲ್ಲೂಕು ಸಮಿತಿ ಸಂಚಾಲಕ ಡಿ.ಟಿ.ಮುನಿಸ್ವಾಮಿ ಸಮ್ಮೇಳನದ ಕರಡು ವರದಿ ಮಂಡಿಸಿದರು. ವರದಿಯ ಮೇಲೆ ಚರ್ಚೆ, ವಿಮರ್ಶೆ  ನಡೆಯಿತು. ಮುಂದಿನ 3 ವರ್ಷಗಳ ಅವಧಿಗೆ ಬಲಿಷ್ಠ ರೈತ ಚಳವಳಿ ಕಟ್ಟಲು ಸಮ್ಮೇಳನದಲ್ಲಿ ತೀರ್ಮಾನಿಸಲಾಯಿತು.

ಸಮ್ಮೇಳನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಸೂರ್ಯನಾರಾಯಣ, ಜಯರಾಮರೆಡ್ಡಿ, ಮುನಿಕೃಷ್ಣಪ್ಪ, ಡಿ.ಟಿ.ಮುನಿಸ್ವಾಮಿ, ಚನ್ನರಾಯಪ್ಪ, ಎಂ.ಎನ್.ರಘುರಾಮರೆಡ್ಡಿ, ದೇವಿಕುಂಟೆಡಿ.ಸಿ.ಶ್ರೀನಿವಾಸ್, ಬಿಳ್ಳೂರುನಾಗರಾಜು, ಜಿ.ಕೃಷ್ಣಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.