ADVERTISEMENT

ಬಾಗೇಪಲ್ಲಿ | ಕೋಡಿ ಹರಿದ ಚಿತ್ರಾವತಿ: ಜನರಲ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 5:30 IST
Last Updated 20 ಸೆಪ್ಟೆಂಬರ್ 2025, 5:30 IST
ಬಾಗೇಪ್ಲಲಿ ತಾಲ್ಲೂಕಿನ ಚಿತ್ರಾವತಿ ಬ್ಯಾರೇಜಿನಲ್ಲಿ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗಿ ಗುರುವಾರ ಬೆಳಗ್ಗೆ ಕೋಡಿ ಹರಿದಿರುವುದು
ಬಾಗೇಪ್ಲಲಿ ತಾಲ್ಲೂಕಿನ ಚಿತ್ರಾವತಿ ಬ್ಯಾರೇಜಿನಲ್ಲಿ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗಿ ಗುರುವಾರ ಬೆಳಗ್ಗೆ ಕೋಡಿ ಹರಿದಿರುವುದು   

ಬಾಗೇಪಲ್ಲಿ: ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಗುರುವಾರ ರಾತ್ರಿ ಭಾರಿ ಮಳೆ ಆಗಿದ್ದರಿಂದ ತಾಲ್ಲೂಕಿನ ಪರಗೋಡು ಚಿತ್ರಾವತಿ ಬ್ಯಾರೇಜಿನಲ್ಲಿ ನೀರು ಕೋಡಿ ಹರಿಯುತ್ತಿದೆ.

ಸಂತೆಮೈದಾನದ ರಸ್ತೆ ಹಾಗೂ ಸಿವಿಲ್ ನ್ಯಾಯಾಲಯದ ಪಕ್ಕದಲ್ಲಿ ಚಿತ್ರಾವತಿ ಮೇಲುಸೇತುವೆಯಲ್ಲಿ ನೀರು ಕಜಣ ಮೂಲಕ ಆಂಧ್ರಪ್ರದೇಶದ ಬುಕ್ಕಪಟ್ನಂ ಕರೆಗೆ ಹರಿಯುತ್ತಿದೆ. ಸಾರ್ವಜನಿಕರು ಹಾಗೂ ವಾಹನ ಸವಾರರು ಹರಿಯುವ ನೀರನ್ನು ವೀಕ್ಷಿಸಿ ಸಂಭ್ರಮಿಸಿದರು.

ಚಿಕ್ಕಬಳ್ಳಾಪುರ, ಪೆರೇಸಂದ್ರ, ಸೋಮೇನಹಳ್ಳಿ, ಸೋಮೇಶ್ವರ ಕಡೆಗಳಲ್ಲಿ ಒಂದು ವಾರದಿಂದ ಮಳೆ ಹೆಚ್ಚಾಗಿದೆ. ಇದರಿಂದ ಕೆರೆ, ಕುಂಟೆ, ಕಾಲುವೆ ಭರ್ತಿಯಾಗಿವೆ. ಇದರಿಂದ ಚಿತ್ರಾವತಿ ಬ್ಯಾರೇಜಿನಲ್ಲಿ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಸೋಮವಾರ ಕೋಡಿ ಹರಿಯಲು ಒಂದು ಅಡಿ ಮಾತ್ರ ಉಳಿದಿತ್ತು. ಸತತವಾಗಿ 3 ದಿನಗಳಿಂದ ಭಾರಿ ಮಳೆ ಇತ್ತು. ಗುರುವಾರ ಬೆಳಿಗ್ಗೆ ನೀರು ಕೋಡಿ ಹರಿದಿದೆ.

ADVERTISEMENT

ಪರಗೋಡು ಚಿತ್ರಾವತಿ ಬ್ಯಾರೇಜಿನಲ್ಲಿ 0.7 ಟಿಎಂಸಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಹೂಳು, ಕಲ್ಲುಗಳು ತುಂಬಿರುವುದರಿಂದ ನೀರಿನ ಸಂಗ್ರಹಣಾ ಪ್ರಮಾಣ ಇದೀಗ ಕಡಿಮೆ ಆಗಿದೆ.

ಚಿತ್ರಾವತಿ ಬ್ಯಾರೇಜಿನಲ್ಲಿ ಸಂಗ್ರಹದ ನೀರನ್ನು ಪಟ್ಟಣದ 23 ವಾರ್ಡ್‍ಗಳಿಗೆ ಶುದ್ಧ ಕುಡಿಯಲು ನೀರು ಬಳಕೆ ಮಾಡಲಾಗುತ್ತಿದೆ. ಒಮ್ಮೆ ನೀರು ಕೋಡಿ ಹರಿದರೆ ಕನಿಷ್ಠ 2 ವರ್ಷಗಳ ಪಟ್ಟಣಕ್ಕೆ ನೀರು ಪೈಪಿನ ಮೂಲಕ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬಹುದು. ಇದೀಗ ಮಳೆ ಹೆಚ್ಚಾಗಿ ಚಿತ್ರಾವತಿ ಕೋಡಿ ಹರಿದಿರುವುದು ಪಟ್ಟಣದ ಜನರಿಗೆ ಖುಷಿ ಮೂಡಿಸಿದೆ ಎಂದು ಪುರಸಭಾ ಅಧ್ಯಕ್ಷ ಎ.ಶ್ರೀನಿವಾಸ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸರ್ಕಾರದ ಅಧಿಕಾರಿಗಳು, ಜನಪ್ರತಿನಿಧಿಗಳು ಚಿತ್ರಾವತಿ ಬ್ಯಾರೇಜಿನಲ್ಲಿ ನೀರನ್ನು ಸಂಗ್ರಹ ಮಾಡುವ ಯೋಜನೆ ಜಾರಿ ಮಾಡಿಲ್ಲ. ಮಳೆಗಾಲದ ಮುನ್ನಾ ಡೈಕ್‍, ಚೆಕ್ ಡ್ಯಾಂಗಳು ನಿರ್ಮಾಣ ಮಾಡಬೇಕಿತ್ತು. ಹೂಳು ತೆರವು ಮಾಡಿಲ್ಲ. ಕಾಲುವೆ, ಪೋಷಕಕಾಲುವೆ ಸ್ವಚ್ಛತೆ ಮಾಡಿದ್ದರೆ ಮತ್ತಷ್ಟು ಪ್ರಮಾಣದ ನೀರು ಸಂಗ್ರಹ ಆಗುತ್ತಿತ್ತು’ ಎಂದು ಚಿತ್ರಾವತಿ ಅಣೆಕಟ್ಟು ಹೋರಾಟ ಸಮಿತಿ ಮುಖಂಡ ಜಿ.ಎಂ.ರಾಮಕೃಷ್ಣಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬಾಗೇಪಲ್ಲಿ ಪಟ್ಟಣದ ಸಿವಿಲ್ ನ್ಯಾಯಾಲಯದ ಪಕ್ಕದಲ್ಲಿ ಹಾದು ಹೋಗುವ ಚಿತ್ರಾವತಿ ಸೇತುವೆಯಲ್ಲಿ ಹರಿಯುವ ನೀರನ್ನು ಜನರು ವೀಕ್ಷಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.