ADVERTISEMENT

ಬಾಗೇಪಲ್ಲಿ ಕ್ಷೇತ್ರಕ್ಕೆ ತಕ್ಷಣವೇ ಮರು ಚುನಾವಣೆ ನಡೆಸಿ: ಸಿಪಿಎಂ ಮುಖಂಡ ಆಗ್ರಹ

ಸುಬ್ಬಾರೆಡ್ಡಿ ಶಾಸಕ ಸ್ಥಾನ ಅಸಿಂಧು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 6:14 IST
Last Updated 18 ಫೆಬ್ರುವರಿ 2026, 6:14 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಸಿಪಿಎಂ ಮುಖಂಡ ಡಾ.ಅನಿಲ್ ಕುಮಾರ್ ಮಾತನಾಡಿದರು
ಚಿಕ್ಕಬಳ್ಳಾಪುರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಸಿಪಿಎಂ ಮುಖಂಡ ಡಾ.ಅನಿಲ್ ಕುಮಾರ್ ಮಾತನಾಡಿದರು   

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಕ್ಷೇತ್ರದಲ್ಲಿ ಎಸ್.ಎನ್ ಸುಬ್ಬಾರೆಡ್ಡಿ ಶಾಸಕರಾಗಿ ಆಯ್ಕೆಯಾಗಿದ್ದನ್ನು ಹೈಕೋರ್ಟ್ ಅಸಿಂಧುಗೊಳಿಸಿರುವುದನ್ನು ಸಿಪಿಎಂ ಸ್ವಾಗತಿಸಿದೆ. ಈ ಕ್ಷೇತ್ರಕ್ಕೆ ತಕ್ಷಣವೇ ಉಪ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದೆ.

ನಗರದಲ್ಲಿ ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಿಪಿಎಂ ಮುಖಂಡ ಡಾ.ಅನಿಲ್ ಕುಮಾರ್, ಚುನಾವಣಾ ಆಯೋಗವು ಈ ಕ್ಷೇತ್ರಕ್ಕೆ ತಕ್ಷಣವೇ ಚುನಾವಣೆ ನಡೆಸಬೇಕು. ಸುಬ್ಬಾರೆಡ್ಡಿ ಅವರ ಅಕ್ರಮ ಆಸ್ತಿ ಮತ್ತು ಆದಾಯದ ವಿಚಾರವಾಗಿ ಸಿಪಿಎಂ ಈ ಹಿಂದಿನಿಂದಲೂ ಜನರಿಗೆ ಹೇಳುತ್ತಲೇ ಬಂದಿದೆ ಎಂದರು.

ನೈಜ ಆದಾಯ ಮತ್ತು ಆಸ್ತಿಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಸರಿಯಾದ ಮಾಹಿತಿ ನೀಡದೆ ವಂಚಿಸಿದ್ದಾರೆ. ಇದು ಹೈಕೋರ್ಟ್‌ ತೀರ್ಪಿನಿಂದ ಸಾಬೀತಾಗಿದೆ. ಚುನಾವಣಾ ಆಯೋಗವನ್ನು ದಾರಿ ತಪ್ಪಿಸಿರುವ ಸುಬ್ಬಾರೆಡ್ಡಿ ಅವರ ಮೇಲೆ ತಕ್ಷಣ ಕಾನೂನು ಕ್ರಮ ಜರುಗಿಸಬೇಕು ಎಂದರು.

ADVERTISEMENT

ರಾಜ್ಯ ಸರ್ಕಾರ ಶಾಸಕರಾಗಿ ಅವರು ಪಡೆದ ಎಲ್ಲ ಹಣಕಾಸು ಮತ್ತಿತರೆ ಸೌಲಭ್ಯಗಳನ್ನು ವಾಪಸ್ ಪಡೆಯಬೇಕು. ಅದೇ ರೀತಿ ಇಂತಹವರನ್ನು ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯನ್ನಾಗಿಸಿದ್ದಕ್ಕೆ ಬಾಗೇಪಲ್ಲಿ ಕ್ಷೇತ್ರದ ಮತದಾರರಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಸುಬ್ಬಾರೆಡ್ಡಿ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ ಮೊದಲ ಚುನಾವಣೆಯಿಂದಲೂ ತಮ್ಮ ಅಕ್ರಮ ಬಂಡವಾಳ ಹೂಡುತ್ತ ಕ್ಷೇತ್ರದ ಮತದಾರರನ್ನು ಭ್ರಷ್ಟಗೊಳಿಸಿದ್ದಾರೆ. ಇದು ಗುಟ್ಟಾದ ವಿಚಾರವಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಆ ಪಕ್ಷದ ಅಭ್ಯರ್ಥಿ ಕೂಡಾ ವ್ಯಾಪಕವಾದ ಅಕ್ರಮ ಬಂಡವಾಳ ತೊಡಗಿಸಿ ಮತದಾರರನ್ನು ಭ್ರಷ್ಟಗೊಳಿಸಿದ್ದರು. ಇದೆಲ್ಲ ಕ್ಷೇತ್ರದ ಜನರಿಗೆ ತಿಳಿದಿರುವ ವಿಚಾರ ಎಂದು ಹೇಳಿದರು.

ಸಿಪಿಎಂ ರಾಜ್ಯ ಸಮಿತಿ ಸದಸ್ಯ ಮುನಿವೆಂಕಟಪ್ಪ ಎಂ.ಪಿ ಮಾತನಾಡಿ, ಸಿಪಿಎಂನಿಂದ ಬಾಗೇಪಲ್ಲಿಯಲ್ಲಿ ಜಿ.ವಿ. ಶ್ರೀರಾಮ ರೆಡ್ಡಿ ಶಾಸಕರಾಗಿದ್ದ ವೇಳೆ ನಡೆದ ಅಭಿವೃದ್ಧಿ ಕಾರ್ಯಗಳು ಕಣ್ಣಿಗೆ ಕಟ್ಟುವಂತಿದೆ. ಸುಬ್ಬಾರೆಡ್ಡಿ ಶಾಸಕರಾಗಿದ್ದಾಗ ಯಾವ ರೀತಿ ಅಭಿವೃದ್ಧಿ ಆಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದರು.

ಪಕ್ಷದ ಮುಖಂಡ ಜಿ.ಸಿದ್ದಗಂಗಪ್ಪ, ಬಿ.ಎನ್.ಮುನಿಕೃಷ್ಣಪ್ಪ, ಚನ್ನರಾಯಪ್ಪ, ಜಯರಾಮರೆಡ್ಡಿ, ರಘುರಾಮರೆಡ್ಡಿ, ಬೈರಾರೆಡ್ಡಿ, ಡಿ.ಟಿ ಮುನಿಸ್ವಾಮಿ, ಅಶ್ವತ್ಥನಾರಾಯಣ, ರಮಣ ಮಾಸ್ಟರ್, ಬೈರಾರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.