ಬಾಗೇಪಲ್ಲಿ: ತಾಲ್ಲೂಕಿನಾದ್ಯಂತ ಗೌರಿ–ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಗಣೇಶ ಹಬ್ಬದ ಪ್ರಯುಕ್ತ ಪಟ್ಟಣದ ಡಿವಿಜಿ ಮುಖ್ಯರಸ್ತೆಯಲ್ಲಿ ಮಂಗಳವಾರದಿಂದಲೇ ಜನರು ಗಣೇಶ ಮೂರ್ತಿ ಸೇರಿದಂತೆ ಹಬ್ಬಕ್ಕೆ ಬೇಕಿರುವ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದರು.
ಪಟ್ಟಣದ ಕುಂಬಾರಪೇಟೆ, ಸಂತೆಮೈದಾನ, ಭಜನೆ ಮಂದಿರ ರಸ್ತೆ ಸೇರಿದಂತೆ ಡಿವಿಜಿ ಮುಖ್ಯರಸ್ತೆಯಲ್ಲಿ ಜನಜಂಗುಳಿಯಿಂದ ಕೂಡಿತ್ತು. ಒಂದು ಅಡಿಯಿಂದ 10 ಅಡಿ ಗಣಪತಿ ಮೂರ್ತಿಗಳನ್ನು ಅಂಗಡಿ, ಮಳಿಗೆಗಳಲ್ಲಿ ಹಾಗೂ ತಳ್ಳುವ ಗಾಡಿಗಳಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದಿತು. ಜನರು ಜೇಡಿಮಣ್ಣಿನಲ್ಲಿ ಮಾಡಿದ ಗಣೇಶ ಮೂರ್ತಿಗಳನ್ನು ಖರೀದಿ ಮಾಡಿದರು. ದಿನಸಿ, ಹೂವು, ಹಣ್ಣು ವ್ಯಾಪಾರದ ಅಂಗಡಿಗಳ ಮುಂದೆ ಜನರು ನೆರೆದಿದ್ದರು. ಮಹಿಳೆಯರು, ಹೆಣ್ಣುಮಕ್ಕಳು ಹೊಸ ಬಟ್ಟೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಖರೀದಿಸಿದರು. ಮನೆಗಳಲ್ಲಿ ಗಣೇಶ ಮತ್ತು ಗೌರಿ ಮೂರ್ತಿ ಪ್ರತಿಷ್ಠಾಪನೆ ಮಾಡಲು ಬುಧವಾರ ರಾತ್ರಿವರೆಗೆ ಅಗತ್ಯ ಸಿದ್ಧತೆಗಳನ್ನು ಜನರು ಮಾಡಿಕೊಂಡರು.
ಹಬ್ಬದ ಕಾರಣ ಮಾರುಕಟ್ಟೆಯಲ್ಲಿ ಹೂವು, ಎಲೆ, ಅಡಿಕೆ, ತೆಂಗಿನಕಾಯಿ, ಹಣ್ಣುಗಳ ಬೆಲೆ ಗಗನಕ್ಕೇರಿತ್ತು. ಬೆಲೆ ಏರಿಕೆಯ ನಡುವೆಯೂ ಜನರು ಹಬ್ಬದ ವಸ್ತುಗಳನ್ನು ಖರೀದಿ ಮಾಡಿದರು. ಮಾರುಕಟ್ಟೆಯಲ್ಲಿ ಮಂಗಳವಾರ ಚೆಂಡೂಹೂವು ಪ್ರತಿ 1 ಕೆಜಿ ₹100, ಚಾಕಲೇರು ಹೂವು ₹400, ಬಟನ್ ರೋಜಾ 100 ಗ್ರಾಂ.ಗೆ ₹150, ಮಲ್ಲಿಗೆ ಹೂವು 100 ಗ್ರಾಂ.ಗೆ ₹150, ಕನಕಾಂಬರ 100 ಗ್ರಾಂ.ಗೆ ₹200ಕ್ಕೆ ಬಿಕರಿಯಾದವು.
ಒಂದು ಕಟ್ಟು ಎಲೆಗೆ ₹150, ಸೇಬು ₹150, ದಾಳಿಂಬೆ ₹150, ಅನಾನಸ್ ಒಂದಕ್ಕೆ ₹50, ಕಿತ್ತಳೆ ಹಣ್ಣು ₹100, ಮೊಸಂಬಿ ₹80, ದ್ರಾಕ್ಷಿ ₹120, ಹಾಗೂ ಬಾಳೆಹಣ್ಣು ಒಂದು ಕೆ.ಜಿಗೆ ₹50 ರೂಪಾಯಿಯಂತೆ ಮಾರಾಟವಾಯಿತು. ಒಂದು ಗಣೇಶ ಮೂರ್ತಿ ₹1 ಸಾವಿರದಿಂದ ₹40 ಸಾವಿರದವರೆಗೆ ಮಾರಾಟ ನಡೆಯಿತು. ಪಟ್ಟಣದ ಡಿವಿಜಿ ಮುಖ್ಯರಸ್ತೆಯ ಬಟ್ಟೆ ಅಂಗಡಿಗಳಲ್ಲಿ ಮಹಿಳೆಯರು, ಮಕ್ಕಳು ಬಟ್ಟೆಗಳನ್ನು ಖರೀದಿ ಮಾಡಿದರು.
ಪಟ್ಟಣ ಸೇರಿದಂತೆ ಗ್ರಾಮಗಳ ಯುವಕರು, ಸಂಘ-ಸಂಸ್ಥೆಗಳಿಗೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಪ್ರತ್ಯೇಕವಾಗಿ ತಮ್ಮ ಸ್ವಗೃಹಗಳ ಮುಂದೆ ಗಣಪತಿ ಮೂರ್ತಿಗಳನ್ನು ವಿತರಿಸಿದರು. ಇದರಿಂದ ಪ್ರತಿ ಬೀದಿ ಹಾಗೂ ಗ್ರಾಮಗಳಲ್ಲಿ ಐದಕ್ಕಿಂತ ಹೆಚ್ಚು ಕಡೆಗಳಲ್ಲಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪನೆ ನಡೆಯಿತು. ಮಂಗಳವಾರ ಮೋಡ ಕವಿದ ವಾತಾವರಣವಿದ್ದು, ಜಿಟಿಜಿಟಿ ಮಳೆಯ ನಡುವೆಯೂ ಯುವಕರು ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಜಾಗದ ಸ್ವಚ್ಛತೆಯಲ್ಲಿ ತೊಡಗಿದ್ದರು. ಚಪ್ಪರ, ಪೆಂಡಾಲ್‍ಗಳನ್ನು ಹಾಕಿದರು. ಮುಖ್ಯರಸ್ತೆವರಿಗೆ ಎರಡು ಬದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಿದರು.
ಗಣೇಶ ಹಬ್ಬದಿಂದ ಹೂವು ಹಣ್ಣು ವೀಳ್ಯದೆಲೆಗಳ ಬೆಲೆ ಏರಿಕೆಯಾಗಿದೆ. ಜನರು ಹಬ್ಬ ಆಚರಣೆಗಾಗಿ ಬೆಲೆ ಏರಿಕೆ ನಡುವೆಯೇ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಹಣ್ಣಿನ ವ್ಯಾಪಾರ ಸಮಾಧಾನಕರವಾಗಿದೆಮಂಜುನಾಥ್ ಹಣ್ಣಿನ ವ್ಯಾಪಾರಿ
ಗೌರಿ ಗಣೇಶ ಹಬ್ಬವು ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಹೂವು ಹಣ್ಣು ತರಕಾರಿ ದಿನಸಿ ಬಟ್ಟೆ ದರಗಳು ಏರಿಕೆಯಾಗಿದೆ. ಬೆಲೆ ಏರಿಕೆಯಾಗಿದೆ ಎಂಬ ಕಾರಣಕ್ಕೆ ಹಬ್ಬ ಆಚರಿಸದಂತೆ ಇರಲಾಗದುರಮಾದೇವಿ ಚಂದ್ರಶೇಖರ್ ಕುಂಬಾರಪೇಟೆ ನಿವಾಸಿ
ಯುವಕರಿಂದ ಸಾಂಸ್ಕೃತಿಕ ರಸಸಂಜೆ:
ವಿವಿಧ ಗ್ರಾಮಗಳಲ್ಲಿ ಯುವಕರು ಗಣೇಶೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳು ರಸಸಂಜೆ ಕ್ರಿಕೆಟ್ ವಾಲಿಬಾಲ್ ಸೇರಿದಂತೆ ಇನ್ನಿತರ ಕ್ರೀಡಾಕೂಟಗಳನ್ನು ಆಯೋಜಿಸಲು ಮುಂದಾಗಿದ್ದಾರೆ. ಪಟ್ಟಣದ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಆರ್ಯವೈಶ್ಯ ಸಮುದಾಯದವರು ವಿಜೃಂಭಣಿಯಿಂದ ಗಣೇಶೋತ್ಸವದ ಆಚರಣೆಗೆ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಪಟ್ಟಣದ ಸೆವೆಲ್‍ಹಿಲ್ಸ್ ಶಾಲೆಯ ರಸ್ತೆಯಲ್ಲಿನ ವರಸಿದ್ಧಿ ಗಣಪತಿ ದೇವಾಲಯದಲ್ಲಿ ಬುಧವಾರ ವಿವಿಧ ಪೂಜಾ ಕೈಂಕಾರ್ಯಗಳನ್ನು ಹಮ್ಮಿಕೊಳ್ಳಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.