ADVERTISEMENT

ಬಾಗೇಪಲ್ಲಿ ಆಸ್ಪತ್ರೆಗೆ ವಿದೇಶಿಗರ ನಿಯೋಗ: ಚಿಕಿತ್ಸೆ ಗುಣಮಟ್ಟದ ಬಗ್ಗೆ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 7:20 IST
Last Updated 19 ಸೆಪ್ಟೆಂಬರ್ 2025, 7:20 IST
ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ದಕ್ಷಿಣ ಆಫ್ರಿಕಾ ಸೇರಿ ವಿವಿಧ ದೇಶಗಳ ತಂಡದ ಜೊತೆ ಟಿಎಚ್‍ಒ ಡಾ.ಸಿ.ಸತ್ಯನಾರಾಯಣರೆಡ್ಡಿ, ಎಎಂಒ ಡಾ.ವಿನಯ್ ಹಾಗೂ ಶುಶ್ರೂಷಕಿಯರು
ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ದಕ್ಷಿಣ ಆಫ್ರಿಕಾ ಸೇರಿ ವಿವಿಧ ದೇಶಗಳ ತಂಡದ ಜೊತೆ ಟಿಎಚ್‍ಒ ಡಾ.ಸಿ.ಸತ್ಯನಾರಾಯಣರೆಡ್ಡಿ, ಎಎಂಒ ಡಾ.ವಿನಯ್ ಹಾಗೂ ಶುಶ್ರೂಷಕಿಯರು   

ಬಾಗೇಪಲ್ಲಿ: ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಚಿಕಿತ್ಸಾ ಸೌಲಭ್ಯಗಳ ಕುರಿತು ಅಧ್ಯಯನ ನಡೆಸುವ ಭಾಗವಾಗಿ ದಕ್ಷಿಣ ಆಫ್ರಿಕಾ ಸೇರಿದಂತೆ ವಿವಿಧ ದೇಶಗಳ 15 ಸದಸ್ಯರ ನಿಯೋಗವು ಇಲ್ಲಿನ ತಾಲ್ಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿತು. 

ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿನ ತುರ್ತು ಚಿಕಿತ್ಸಾ ಘಟಕ (ಐಸಿಯು)ವನ್ನು ನಿಯೋಗವು ಪರಿಶೀಲನೆ ನಡೆಸಿತು. ಅಲ್ಲದೆ, ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡಲಾಗುವ ಚಿಕಿತ್ಸೆ ಬಗ್ಗೆ ಆರೋಗ್ಯ ಅಧಿಕಾರಿಗಳು ಮತ್ತು ರೋಗಿಗಳಿಂದ ಮಾಹಿತಿ ಪಡೆಯಿತು. ಅಲ್ಲದೆ, ಆಸ್ಪತ್ರೆಯಲ್ಲಿನ ತುರ್ತು ಚಿಕಿತ್ಸಾ ಘಟಕ ಸೇರಿದಂತೆ ಇನ್ನಿತರ ಸೌಲಭ್ಯಗಳ ಬಗ್ಗೆ ವಿದೇಶಿಗರ ನಿಯೋಗವು ಮೆಚ್ಚುಗೆ ವ್ಯಕ್ತಪಡಿಸಿತು. 

ಆಸ್ಪತ್ರೆಯಲ್ಲಿನ ಮಹಿಳಾ ಮತ್ತು ಮಕ್ಕಳ ಶಸ್ತ್ರಚಿಕಿತ್ಸಾ ವಾರ್ಡ್‌, ತುರ್ತು ಚಿಕಿತ್ಸಾ ಘಟಕ (ಐಸಿಯು), ಚಿಕಿತ್ಸಾ ಯಂತ್ರೋಪಕರಣಗಳ ಕಾರ್ಯ ನಿರ್ವಹಣೆ ಕುರಿತು ಖುದ್ದಾಗಿ ಪರಿಶೀಲನೆ ನಡೆಸಿದರು. ಆಸ್ಪತ್ರೆಗೆ ಬರುವ ರೋಗಿಗಳಿಗೆ ವೈದ್ಯರು ಮತ್ತು ಸಿಬ್ಬಂದಿ ಹೇಗೆ ಸ್ಪಂದಿಸುತ್ತಿದ್ದಾರೆ ಎಂಬ ಬಗ್ಗೆ ರೋಗಿಗಳಿಂದಲೇ ಮಾಹಿತಿ ಸಂಗ್ರಹಿಸಿದರು. ರೋಗಿಗಳಿಗೆ ಆಮ್ಲಜನಕ ಸರಬರಾಜು, ರಕ್ತದ ಒತ್ತಡ, ಬೆಳಗ್ಗೆ ಮತ್ತು ಸಂಜೆ ವೇಳೆ ರೋಗಿಗಳಿಗೆ ಚಿಕಿತ್ಸೆ ಕುರಿತು ಮಾಹಿತಿ ಕಲೆಹಾಕಿದರು. 

ADVERTISEMENT

ಗ್ರಾಮೀಣ ಭಾಗದಲ್ಲಿ ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಮತ್ತು ರೋಗಿಗಳಿಗೆ ಏನೆಲ್ಲಾ ಸೌಲಭ್ಯಗಳು ಸಿಗುತ್ತಿವೆ ಎಂಬುದನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಗಡಿ ಭಾಗ ಬಾಗೇಪಲ್ಲಿ ತಾಲ್ಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಂಡೆವು. ಬೆಂಗಳೂರಿನಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಿಂದ ಈ ಸರ್ಕಾರಿ ಆಸ್ಪತ್ರೆ ಕುರಿತು ಮಾಹಿತಿ ಪಡೆದು, ಇಲ್ಲಿಗೆ ಬಂದಿದ್ದೇವೆ ಎಂದು ನಿಯೋಗ ತಿಳಿಸಿತು. 

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್. ಸತ್ಯನಾರಾಯಣರೆಡ್ಡಿ, ಆಸ್ಪತ್ರೆ ಆಡಳಿತಾಧಿಕಾರಿ ಡಾ. ವಿನಯ್ ಅವರು ಆಸ್ಪತ್ರೆಯಲ್ಲಿನ ಸೌಲಭ್ಯಗಳು, ಚಿಕಿತ್ಸೆ ಮತ್ತು ಯಂತ್ರೋಪಕರಣಗಳು ಮತ್ತು ಶುಚಿತ್ವದ ಬಗ್ಗೆ ವಿದೇಶಿಗರ ನಿಯೋಗಕ್ಕೆ ಮಾಹಿತಿ ನೀಡಿದರು. 

ನಾವು ಇತರ ದೇಶಗಳಿಗೂ ಭೇಟಿ ನೀಡಿದ್ದೇವೆ. ಸರ್ಕಾರಿ ಆಸ್ಪತ್ರೆಗಳಿಗೆ ಬಡವರೇ ಬರುತ್ತಾರೆ. ಎಲ್ಲರಿಗೂ ಉತ್ತಮ ಆರೋಗ್ಯ ಚಿಕಿತ್ಸೆ ಲಭಿಸಬೇಕು. ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯು ಮಾದರಿಯಾಗಿದೆ. ಐಸಿಯು ಘಟಕವು ಉತ್ತಮ ಸ್ಥಿತಿಯಲ್ಲಿದೆ ಎಂದು ವಿದೇಶಿಗರ ನಿಯೋಗ ಮೆಚ್ಚುಗೆ ವ್ಯಕ್ತಪಡಿಸಿದೆ. 

ವಿದೇಶಿಗರ ನಿಯೋಗವು ತುರ್ತು ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿತು. ಆರೋಗ್ಯ ಚಿಕಿತ್ಸೆ ಬಗ್ಗೆ ಮಾಹಿತಿ ಕೇಳಿದರು. ಅವರಿಗೆ ಆಂಗ್ಲ ಭಾಷೆಯಲ್ಲಿ ಮಾಹಿತಿ ನೀಡಿದ್ದೇವೆ. ಆಸ್ಪತ್ರೆ ಕಾರ್ಯವೈಖರಿ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಡಾ.ಸಿ.ಎನ್. ಸತ್ಯನಾರಾಯಣರೆಡ್ಡಿ ತಾಲ್ಲೂಕು ಆರೋಗ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.