ADVERTISEMENT

ಶಾಸಕರ ಅಸಿಂಧು ಪ್ರಕರಣ: ಅಂದು ಶಿಡ್ಲಘಟ್ಟ, ಇಂದು ಬಾಗೇಪಲ್ಲಿ..

1978ರಲ್ಲಿ ಶಾಸಕ ಆನೆಮಡಗು ಎಸ್.ಮುನಿಶಾಮಪ್ಪ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ಭಕ್ತರಹಳ್ಳಿ ವೆಂಕಟರಾಯಪ್ಪ

ಡಿ.ಎಂ.ಕುರ್ಕೆ ಪ್ರಶಾಂತ
Published 18 ಫೆಬ್ರುವರಿ 2026, 6:14 IST
Last Updated 18 ಫೆಬ್ರುವರಿ 2026, 6:14 IST
ಎಸ್.ಮುನಿಶಾಮಪ್ಪ
ಎಸ್.ಮುನಿಶಾಮಪ್ಪ   

ಚಿಕ್ಕಬಳ್ಳಾಪುರ: ಬಾಗೇಪಲ್ಲಿಯ ಎಸ್‌.ಎನ್.ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನವನ್ನು ಹೈಕೋರ್ಟ್ ಅಸಿಂಧುಗೊಳಿಸಿದೆ. ಈ ಮೂಲಕ ಜಿಲ್ಲೆಯಷ್ಟೇ ಅಲ್ಲ ರಾಜ್ಯ ಮಟ್ಟದಲ್ಲಿಯೂ ಚರ್ಚೆಗಳು ನಡೆದಿವೆ. ಇಂತಹದ್ದೇ ಪ್ರಕರಣ ಜಿಲ್ಲೆಯಲ್ಲಿ ಈ ಹಿಂದೆಯೂ ನಡೆದಿತ್ತು. ಇತಿಹಾಸದ ಪುಟವನ್ನು ನೋಡಿದರೆ ಅಂದಿನ ಘಟಾನುಘಟಿ ರಾಜಕೀಯ ನಾಯಕರು ಸಹ ಪರಸ್ಪರ ನ್ಯಾಯಾಲಯದಲ್ಲಿ ಕಾದಾಟ ನಡೆಸಿದ್ದರು.

ಹೌದು, ಅವಿಭಜಿತ ಕೋಲಾರ ಜಿಲ್ಲೆಗೆ ಸೇರಿದ್ದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ 1978ರಲ್ಲಿ ಈಗ ಬಾಗೇಪಲ್ಲಿಯಲ್ಲಿ ಘಟಿಸಿರುವ ವಿದ್ಯಮಾನಕ್ಕೆ ಹತ್ತಿರವಾದ ಘಟನೆಗಳು ನಡೆದಿದ್ದವು. ಬಾಗೇಪಲ್ಲಿ ಶಾಸಕರ ಅಸಿಂಧು ಪ್ರಕರಣದ ಈ ಹೊತ್ತಿನಲ್ಲಿ ಶಿಡ್ಲಘಟ್ಟದಲ್ಲಿ ಅಂದು ನಡೆದ ರಾಜಕೀಯ ವಿದ್ಯಮಾನಗಳನ್ನು ಹಿರಿಯ ರಾಜಕೀಯ ನಾಯಕರು ಸ್ಮರಿಸುತ್ತಿದ್ದಾರೆ. 

ಅಷ್ಟಕ್ಕೂ ಆಗಿದ್ದೇನು: 1978ರ ವಿಧಾನಸಭಾ ಚುನಾವಣೆಯಲ್ಲಿ ಆನೆಮಡಗು ಎಸ್.ಮುನಿಶಾಮಪ್ಪ ಇಂದಿರಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದರು. ಇಂದಿರಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಅವರು 34,683 (ಶೇ 52.8) ಮತಗಳನ್ನು ಪಡೆದರೆ ಅವರ ಸಮೀಪದ ಪ್ರತಿಸ್ಪರ್ಧಿ ಜನತಾ ಪಕ್ಷದ ಭಕ್ತರಹಳ್ಳಿ ವೆಂಕಟರಾಯಪ್ಪ 27,106
(ಶೇ 41.2) ಮತ ಪಡೆದರು. ಉಳಿದಂತೆ ಸಿಪಿಐನ ಜಿ.ಪಾಪಣ್ಣ 3,205 (ಶೇ 4.9), ಕಾಂಗ್ರೆಸ್ ಪಕ್ಷದ ನಾರಾಯಣಪ್ಪ 424 ಮತ್ತು ಪಕ್ಷೇತರ ಅಭ್ಯರ್ಥಿ ಕೆಂಪೇಗೌಡ 309 ಮತ ಪಡೆದಿದ್ದರು. ಆಗ ಶಿಡ್ಲಘಟ್ಟ ಕ್ಷೇತ್ರದಲ್ಲಿ 79,941 ಮತದಾರರು ಇದ್ದರು. 

ADVERTISEMENT

ಹೀಗೆ ಇಂದಿರಾ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ ಆನೆಮಡಗು ಎಸ್‌.ಮುನಿಶಾಮಪ್ಪ ಅವರಿಗೆ ಚುನಾವಣೆಯ ನಂತರ ಆಘಾತ ಕಾದಿತ್ತು. ಮುನಿಶಾಮಪ್ಪ ಅವರು ಗುತ್ತಿಗೆದಾರರಾಗಿದ್ದಾರೆ. ಹೀಗಿದ್ದರೂ ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇದು ಕಾನೂನಬದ್ಧವಲ್ಲ. ಅವರ ಶಾಸಕ ಸ್ಥಾನ ಅನರ್ಹಗೊಳಿಸಬೇಕು ಎಂದು ಪ್ರತಿಸ್ಪರ್ಧಿ ಜನತಾ ಪಕ್ಷದ ಭಕ್ತರಹಳ್ಳಿ ವೆಂಕಟರಾಯಪ್ಪ ಹೈಕೋರ್ಟ್ ಮೊರೆ ಹೋದರು. ಅಂದು ಗುತ್ತಿಗೆದಾರರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎನ್ನುವ ಕಾನೂನಿನ ನಿಯಮಗಳು ಇದ್ದವು. 

ಹೈಕೋರ್ಟ್ ವೆಂಕಟರಾಯಪ್ಪ ಅವರ ಅರ್ಜಿಯನ್ನು ಪುರಸ್ಕರಿಸಿತು. ಮುನಿಶಾಮಪ್ಪ ಅವರ ಆಯ್ಕೆಯನ್ನು ಅಸಿಂಧುಗೊಳಿಸಿತು. ಹೀಗೆ ಜಿಲ್ಲೆಯಲ್ಲಿ ಶಾಸಕ ಸ್ಥಾನ ಅಸಿಂಧುಗೊಂಡ ಮೊದಲ ಪ್ರಕರಣವು ಇದಾಗಿದೆ. ನಂತರ ಮುನಿಶಾಮಪ್ಪ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಸುಪ್ರೀಂಕೋರ್ಟ್‌ನಲ್ಲಿ ಮುನಿಶಾಮಪ್ಪ ಅವರ ಪರವಾಗಿ ತೀರ್ಪು ಬಂದಿತು.  

ಹೀಗೆ ಶಿಡ್ಲಘಟ್ಟದ ಅಂದಿನ ಪ್ರಕರಣವನ್ನು ಸುಬ್ಬಾರೆಡ್ಡಿ ಅವರು ಅಸಿಂಧುಗೊಂಡಿರುವ ಈ ಹೊತ್ತಿನಲ್ಲಿ ಸ್ಮರಿಸಲಾಗುತ್ತಿದೆ. 

ಅಂದು ಹೈಕೋರ್ಟ್ ಮೆಟ್ಟಿಲೇರಿದ್ದ ಭಕ್ತರಹಳ್ಳಿಯ ವೆಂಕಟರಾಯಪ್ಪ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಸರ್ಕಾರದ ಪಿಂಚಣಿ ನಿರಾಕರಿಸಿದ್ದರು. ಅಲ್ಲದೆ 1967ರ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಶಿಡ್ಲಘಟ್ಟ ಕ್ಷೇತ್ರದಿಂದ ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.

ಮೂರು ಬಾರಿ ಶಾಸಕರಾಗಿದ್ದ ಮುನಿಶಾಮಪ್ಪ: ಮೊದಲ ಬಾರಿ ಗೆಲುವಿನಲ್ಲಿಯೇ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಮುನಿಶಾಮಪ್ಪ ಅವರು ನಂತರವೂ ಎರಡು ಬಾರಿ ಶಾಸಕರಾದರು.

1985ರಲ್ಲಿ ಜನತಾ ಪಕ್ಷದಿಂದ ಸ್ಪರ್ಧೆಗಿಳಿದ ಆನೆಮಡಗು ಎಸ್‌.ಮುನಿಶಾಮಪ್ಪ 44,199 ಮತಪಡೆದು ಕಾಂಗ್ರೆಸ್‌ನ ವಿ.ಮುನಿಯಪ್ಪ (ಪಡೆದ ಮತ 33,998) ಅವರನ್ನು ಸೋಲಿಸಿದರು. ಮತ್ತೆ 2004ರ ವಿಧಾನಸಭಾ ಚುನಾವಣೆಯಲ್ಲಿ ಜಾತ್ಯಾತೀತ ಜನತಾದಳದಿಂದ ಕಣಕ್ಕೆ ಇಳಿದ ಮುನಿಶಾಮಪ್ಪ ಅವರು 60,322 ಮತಗಳನ್ನು ಪಡೆದು ಗೆಲುವು ಸಾಧಿಸಿದರು. 

ವೆಂಕಟರಾಯಪ್ಪ

‘ಅಂದು ಕಾವೇರಿದ ಚರ್ಚೆ’

ಮುನಿಶಾಮಪ್ಪ ಅವರು ಗುತ್ತಿಗೆದಾರರಾಗಿದ್ದಾರೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಹೀಗಿದ್ದರೂ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ವೆಂಕಟರಾಯಪ್ಪ ಹೈಕೋರ್ಟ್ ಮೊರೆ ಹೋಗಿದ್ದರು. ಈ ವಿಚಾರವು ಅಂದು ರಾಜ್ಯದಲ್ಲಿಯೇ ತೀವ್ರವಾಗಿ ಚರ್ಚೆಗೆ ಒಳಗಾಗಿತ್ತು ಎಂದು ಸ್ಮರಿಸುವರು ಹಿರಿಯ ಪತ್ರಕರ್ತ ಎಚ್‌.ವಿ.ಸೋಮಶೇಖರ್.  ಹೀಗೆ ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಕೀಯ ಇತಿಹಾಸವನ್ನು ನೋಡಿದರೆ ನಾನಾ ರಾಜಕೀಯ ಬೆಳವಣಿಗೆಗಳು ಕೌತುಕಗಳು ಜರುಗಿವೆ ಎಂದರು.

ವಾದ ಮಂಡಿಸಿದ್ದ ಎನ್. ವೆಂಕಟಾಚಲ

ಅಂದು ಭಕ್ತರಹಳ್ಳಿ ವೆಂಕಟರಾಯಪ್ಪ ಅವರ ಪರವಾಗಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ಎನ್.ವೆಂಕಟಾಚಲ ಅವರು ವಾದ ಮಂಡಿಸಿದ್ದರು.  ವೆಂಕಟಾಚಲ ಅವರು ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಮತ್ತು ಕರ್ನಾಟಕದ ಲೋಕಾಯುಕ್ತರಾಗಿ ಕೆಲಸ ನಿರ್ವಹಿಸಿದರು.ಲೋಕಾಯುಕ್ತರಾಗಿದ್ದ ವೇಳೆ ಅವರ ಕಾರ್ಯವೈಖರಿ ರಾಜ್ಯದ ಜನರ ಮನಗೆದ್ದಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.