ಬಾಗೇಪಲ್ಲಿ: ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಲಂಬಾಣಿ ಅಭಿವೃದ್ಧಿ ಸಂಘದಿಂದ ಸೋಮವಾರ ಸೇವಾಲಾಲ್ ಮಹಾರಾಜರ 286ನೇ ಜಯಂತಿ ನಡೆಯಿತು.
ಚಿಂತಕ ಆನಂತ್ ನಾಯ್ಕ ಮಾತನಾಡಿ, ದೇಶದ ಉದ್ದಗಲಕ್ಕೂ ಗೋರ್ ಬಂಜಾರ್ ಸಮುದಾಯದವರು ನೆಲೆಸಿದ್ದಾರೆ. ಈ ಸಮುದಾಯದ ಭಾಷೆ ಹಾಗೂ ಊಟದ ಖಾದ್ಯ ವಿಭಿನ್ನ. ಕದಿರಿ ಹುಣ್ಣಿಮೆ ಸೇರಿದಂತೆ ವಿಶೇಷ ಹಬ್ಬಗಳಲ್ಲಿ ಕಿರಿಯರು, ಹಿರಿಯರು ತಮ್ಮ ವೇಷ ಧರಿಸಿ ಕುಣಿದು ಕುಪ್ಪಳಿಸಿ ಸಂತಸಪಡುತ್ತಾರೆ. ಬೆಟ್ಟ-ಗುಡ್ಡಗಳಲ್ಲಿ ನೆಲೆಸಿದ ಲಂಬಾಣಿ ತಾಂಡಾದ ಜನರು ಶಾಂತಿ, ಪ್ರೀತಿ, ಸೌಹಾರ್ದತೆ ಮೂಡಿಸಿದ್ದಾರೆ ಎಂದರು.
ಲಂಬಾಣಿ (ಗೋರ್ ಬಂಜಾರ್) ಸಮುದಾಯಕ್ಕೆ ಸಂವಿಧಾನ 9ನೇ ಪರಿಚ್ಛೇಧನದಲ್ಲಿ ಮೀಸಲಾತಿ ಸಿಕ್ಕಿಲ್ಲ. ತಾಂಡಾಗಳು ಇಂದಿಗೂ ಕಂದಾಯ ಗ್ರಾಮಗಳು ಆಗಿಲ್ಲ. ಗೋರ್ ಬಂಜಾರ್ ಸಮುದಾಯ ಭವನ ನಿರ್ಮಿಸಬೇಕು. ಶಿಕ್ಷಣ ಹಾಗೂ ಉದ್ಯೋಗದಲ್ಲಿ ವಿಶೇಷವಾಗಿ ಮೀಸಲಾತಿ ಕಲ್ಪಿಸಬೇಕು. ಈ ಸಂಬಂಧ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಬಜೆಟ್ ಅಧಿವೇಶನದಲ್ಲಿ ಒತ್ತಾಯ ಮಾಡಬೇಕು ಎಂದು ಮನವಿ ಮಾಡಿದರು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಈಗಿನ ತಾಂಡಾಗಳಲ್ಲಿ ಅಕ್ಷರತೆ, ಉದ್ಯೋಗಾವಕಾಶ ಲಭಿಸಿದೆ. ಯಾವುದೇ ಕಾರಣಕ್ಕೂ ಕುಡಿತದ ಚಟಕ್ಕೆ ಒಳಗಾಗದೆ, ಪ್ರತಿಯೊಬ್ಬರು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಬಾಲ್ಯವಿವಾಹ ಮಾಡಿದರೆ ಜೈಲು ಹಾಗೂ ದಂಡ ವಿಧಿಸುವ ಕಾನೂನು ಇದೆ. ಬಾಲ್ಯದ ಜೀವನದಲ್ಲಿ ಹೆಣ್ಣುಮಕ್ಕಳಿಗೆ ವಿವಾಹ ಮಾಡಿದರೆ, ಹುಟ್ಟಿದ ಮಗುವಿನ ಆರೋಗ್ಯಕ್ಕೆ ತೊಂದರೆ ಆಗಲಿದೆ. ತಾಂಡಾ ಮುಖಂಡರು, ಅಕ್ಷರಸ್ಥರು ಜಾಗೃತಿ ಮೂಡಿಸಬೇಕಾಗಿದೆ ಎಂದು ತಿಳಿಸಿದರು.
ತಾಂಡಾಗಳನ್ನು ಹಂತ ಹಂತದಲ್ಲಿ ಕಂದಾಯ ಗ್ರಾಮಗಳಾಗಿ ಮಾಡಲಾಗುವುದು. ಮುಂದಿನ ಸೇವಾಲಾಲ್ ಜಯಂತಿಯೊಳಗೆ ಗೋರ್ ಬಂಜಾರ್ ಸಮುದಾಯ ಭವನ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಸದಸ್ಯೆ ವೀಣಾಮಂಜುನಾಥ್ ನಾಯ್ಕ, ಲಂಬಾಣಿ ಸಮುದಾಯದ ಹಿರಿಯ ಮಹಿಳೆಯರು, ಪ್ರತಿಭಾನ್ವಿತರನ್ನು ಅಭಿನಂದಿಸಲಾಯಿತು. ಸಂತ ಸೇವಾಲಾಲ್ ಭಾವಚಿತ್ರ ಬೆಳ್ಳಿರಥದಲ್ಲಿ ಇಟ್ಟು ಮೆರವಣಿಗೆ ಮಾಡಲಾಯಿತು.
ಚಿಕ್ಕಬಳ್ಳಾಫುರ ಲಂಬಾಣಿ ಗೋರ್ ಬಂಜಾರ್ ಅಭಿವೃದ್ಧಿ ಸಂಘದ ಅಧ್ಯಕ್ಷ ವೆಂಕಟರಮಣಪ್ಪ, ಸಮುದಾಯದವರಾದ ಗೋಪಿನಾಯ್ಕ, ಶ್ರೀನಿವಾಸನಾಯ್ಕ, ಶ್ರೀರಾಮನಾಯ್ಕ, ಸದ್ದಪಲ್ಲಿ ಶಂಕರನಾಯ್ಕ, ಸೀತಾರಾಮನಾಯ್ಕ, ಗೊರ್ತಪಲ್ಲಿ ಶ್ರೀನಿವಾಸನಾಯ್ಕ, ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸನಾಯ್ಕ, ಕಾರ್ಯದರ್ಶಿ ನಾಗಭೂಷಣ, ಕೃಷ್ಣಾನಾಯ್ಕ, ವೆಂಕಟರಮಣನಾಯ್ಕ, ಬಾಲಾಜಿನಾಯ್ಕ, ನಾರಾಯಣನಾಯ್ಕ, ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್, ಸದಸ್ಯ ಎ.ನಂಜುಂಡಪ್ಪ, ಕೆಡಿಪಿ ಸದಸ್ಯ ಪಿ.ಮಂಜುನಾಥರೆಡ್ಡಿ, ಸಾಗುವಳಿ ಅಕ್ರಮ-ಸಕ್ರಮ ಸಮಿತಿ ಸದಸ್ಯ ಲಕ್ಷ್ಮೀನರಸಿಂಹಪ್ಪ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.