ADVERTISEMENT

ಬಾಗೇಪಲ್ಲಿ: ಮಹಿಳೆಯರ ಬದುಕಿಗೆ ಆಸರೆಯಾದ ಹೊಂಗೆಬೀಜ

ಪಿ.ಎಸ್.ರಾಜೇಶ್
Published 23 ಜನವರಿ 2026, 6:26 IST
Last Updated 23 ಜನವರಿ 2026, 6:26 IST
ಬಾಗೇಪಲ್ಲಿಯ ತೀಮಾಕಲಪಲ್ಲಿ ಗ್ರಾಮದ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿ–44ರ ಬೈಪಾಸ್ ರಸ್ತೆಗೆ ಸಂಪರ್ಕಿಸುವ ರಸ್ತೆ ಬದಿ ಮಹಿಳೆಯರು ಹೊಂಗೆ ಬೀಜಗಳನ್ನು ಸಂಗ್ರಹಿಸುತ್ತಿರುವುದು
ಬಾಗೇಪಲ್ಲಿಯ ತೀಮಾಕಲಪಲ್ಲಿ ಗ್ರಾಮದ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿ–44ರ ಬೈಪಾಸ್ ರಸ್ತೆಗೆ ಸಂಪರ್ಕಿಸುವ ರಸ್ತೆ ಬದಿ ಮಹಿಳೆಯರು ಹೊಂಗೆ ಬೀಜಗಳನ್ನು ಸಂಗ್ರಹಿಸುತ್ತಿರುವುದು   

ಬಾಗೇಪಲ್ಲಿ: ತಾಲ್ಲೂಕಿನ ರಸ್ತೆಬದಿಗಳಲ್ಲಿನ ಹೊಂಗೆ ಮರಗಳು ದ್ವಿಚಕ್ರ ವಾಹನ ಸವಾರರು, ಜನ ಮತ್ತು ಜಾನುವಾರುಗಳಿಗೆ ನೆರಳು ನೀಡುವ ಜೊತೆಗೆ ಹತ್ತಾರು ಕುಟುಂಬಗಳ ಜೀವನಕ್ಕೆ ಮಾರ್ಗೋಪಾಯವಾಗಿವೆ. 

ಪಟ್ಟಣದ ಹೊರವಲಯದ ಗೂಳೂರು, ಪಾತಪಾಳ್ಯ, ಚಿಂತಾಮಣಿ, ಟಿ.ಬಿ ಕ್ರಾಸ್ ಮತ್ತು ರಾಷ್ಟ್ರೀಯ ಹೆದ್ದಾರಿ ರಸ್ತೆ-44 ಸೇರಿದಂತೆ ವಿವಿಧ ಕಡೆಗಳಿಗೆ ಸಂಚರಿಸುವ ರಸ್ತೆಗಳ ಪಕ್ಕದಲ್ಲಿ ಹೊಂಗೆ ಮರಗಳಿವೆ. ಹೊಂಗೆ ಮರಗಳಲ್ಲಿ ಇದೀಗ ಬೀಜಗಳು ಬಿಟ್ಟಿದ್ದು, ಹೊಂಗೆ ಮರಗಳು ಅಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ರಸ್ತೆ ಬದಿ ಓಡಾಡುವ ಜನರಿಗೆ ತಂಪಾದ ನೆರಳು ಮತ್ತು ತಣ್ಣನೆಯ ಗಾಳಿ ನೀಡುತ್ತಿವೆ. ರಸ್ತೆಬದಿಗಳಲ್ಲಿ ಜನರು ಕೆಲಕಾಲ ವಿಶ್ರಾಂತಿ ಪಡೆದು ಸಂಚರಿಸುತ್ತಿದ್ದಾರೆ. 

ಗ್ರಾಮೀಣ ಪ್ರದೇಶಗಳ ರಸ್ತೆಬದಿಯ ಹೊಂಗೆ ಮರಗಳಿಂದ ವೃದ್ಧರು, ವೃದ್ಧೆಯರು, ಮಹಿಳೆಯರು ಬೀಜಗಳನ್ನು ಕೋಲಿನಿಂದ ಹೊಡೆದು ನೆಲಕ್ಕೆ ಉರುಳಿಸುತ್ತಿದ್ದಾರೆ. ಕೆಲವರು ಕೋಲಿನಿಂದ ಬೀಜಗಳಿಗೆ ಹೊಡೆದರೆ, ಕೆಲವರು ನೆಲಕ್ಕೆ ಬಿದ್ದ ಕಾಯಿಗಳನ್ನು ಆರಿಸಿ ಚೀಲಕ್ಕೆ ತುಂಬಿಸುತ್ತಿರುವ ದೃಶ್ಯಗಳು ಕಾಣುತ್ತಿವೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬೀಜಗಳನ್ನು ಆರಿಸಿ, ಚೀಲಗಳಲ್ಲಿ ತುಂಬಿ ಮನೆಗೆ ಕೊಂಡೊಯ್ಯುತ್ತಿದ್ದಾರೆ. ಮಹಿಳೆಯರು ದೂರದ ಪ್ರದೇಶಗಳಿಗೆ ಪ್ರಯಾಣಿಸಿ ಹೊಂಗೆಬೀಜಗಳನ್ನು ಆರಿಸಿ, ಆಟೊಗಳಲ್ಲಿ ತರುತ್ತಿದ್ದಾರೆ. 

ADVERTISEMENT

ಕೃಷಿ ಮತ್ತು ಕೂಲಿ ಕೆಲಸ ಮಾಡಲು ಆಗದ ವಯಸ್ಸಾದ ವೃದ್ಧರು ಹೊಂಗೆಬೀಜಗಳನ್ನು ಆರಿಸಿ ಸಂಗ್ರಹಿಸುತ್ತಿದ್ದಾರೆ. ಪ್ರತಿದಿನ ಮಹಿಳೆಯರು 2 ರಿಂದ 3 ಚೀಲದಷ್ಟು ಹೊಂಗೆಬೀಜಗಳನ್ನು ಆರಿಸುತ್ತಾರೆ. ಒಂದು ಕೆ.ಜಿ ಹೊಂಗೆಬೀಜ ₹70 ರಿಂದ ₹80 ಆದಾಯ ತಂದುಕೊಡುತ್ತದೆ. ಒಬ್ಬ ಮಹಿಳೆ 50 ರಿಂದ 80 ಕೆ.ಜಿಯಷ್ಟು ಹೊಂಗೆಬೀಜ ಸಂಗ್ರಹಿಸಿ, ಎಣ್ಣೆ ಅಂಗಡಿಗಳಿಗೆ ಮಾರಾಟ ಮಾಡಿ ಬದುಕು ರೂಪಿಸಿಕೊಂಡಿದ್ದಾರೆ. 

ಈ ಕುರಿತು ಪ್ರತಿಕ್ರಿಯಿಸಿದ ಗ್ರಾಮದ ಡಿ.ಎನ್. ಶಿವರಾಮರೆಡ್ಡಿ, ‘ಪ್ರತಿದಿನ ದೂರದ ಕಡೆಗಳಿಂದ ಮಹಿಳೆಯರು ಬಂದು ಹೊಂಗೆಬೀಜಗಳನ್ನು ಆಯ್ದು ಪ್ರತಿ ಕೆ.ಜಿಗೆ ₹80 ಸಂಪಾದಿಸುತ್ತಿದ್ದಾರೆ. ಇದು ಹಲವರಿಗೆ ಜೀವನೋಪಾಯವಾಗಿದೆ’ ಎಂದರು. 

‘ಕೂಲಿಕೆಲಸ ಮಾಡಲು ಆಗುವುದಿಲ್ಲ. ವಯಸ್ಸಾಗಿರುವುದರಿಂದ, ಹೊಂಗೆ ಬೀಜ ಆರಿಸಿ, ಮಾರಾಟ ಮಾಡಿ ಜೀವನ ಸಾಗಿಸುತ್ತೇವೆ’ ಎಂದು ಪಟ್ಟಣದ ಹಿರಿಯ ಮಹಿಳೆ ವೆಂಕಟಲಕ್ಷ್ಮಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ಹೊಂಗೆ ಎಣ್ಣೆ ಬಹಳ ಶ್ರೇಷ್ಠ. ಸಾಬೂನು ಹಾಗೂ ಸುಗಂಧ ದ್ರವ್ಯಗಳು ಮತ್ತು ಕೈಕಾಲು ನೋವಿಗೆ ಹೊಂಗೆ ಎಣ್ಣೆ ಬಳಕೆ ಮಾಡಲಾಗುತ್ತದೆ. ಹೊಂಗೆ ಎಣ್ಣೆಗೆ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ವೈದ್ಯೆ ಮಂಜುಳಾ ಪ್ರಸಾದ್.

ತೀಮಾಕಲಪಲ್ಲಿ ಕ್ರಾಸ್ ನ ರಾಷ್ಟ್ರೀಯ ಹೆದ್ದಾರಿ ರಸ್ತೆ-44ರ ಬೈಪಾಸ್ ರಸ್ತೆ ಇಕ್ಕೆಲಗಳಲ್ಲಿ ಹೊಂಗೆ ಮರಗಳಿವೆ. ಮಹಿಳೆಯರು ಕೋಲಿನಿಂದ ಹೊಡೆದು ಹೊಂಗೆಬೀಜ ಆರಿಸುತ್ತಿದ್ದಾರೆ.
ಬೀಬಿಜಾನ್, ಶ್ರೀರಾಮರೆಡ್ಡಿ ಬಡಾವಣೆ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.