ADVERTISEMENT

ಬ್ಯಾಗ್ ರಹಿತ ದಿನ: ಕತೆ ಹೇಳಿದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 23 ಜೂನ್ 2018, 12:43 IST
Last Updated 23 ಜೂನ್ 2018, 12:43 IST
ಅಪ್ಪೇಗೌಡನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಕಥೆ ಹೇಳಿದರು
ಅಪ್ಪೇಗೌಡನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಕಥೆ ಹೇಳಿದರು   

ಶಿಡ್ಲಘಟ್ಟ: ಮಕ್ಕಳಿಗೆ ಪಠ್ಯಪುಸ್ತಕದ ಹೊರೆ ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡಲು ಬ್ಯಾಗ್ ರಹಿತ ದಿನ ಎಂಬ ವಿನೂತನ ಕಾರ್ಯಕ್ರಮಕ್ಕೆ ತಾಲ್ಲೂಕಿನ ಎಲ್ಲ ಸರ್ಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶನಿವಾರ ಚಾಲನೆ ನೀಡಲಾಯಿತು. ಇದರ ಪ್ರಯುಕ್ತ ಶಾಲೆಗಳಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರತಿ ತಿಂಗಳು ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಗ್ ತರದೇ ಮಕ್ಕಳು ಶಾಲೆಗೆ ಬರುವಂತೆ ಸೂಚನೆ ನೀಡಲಾಗಿದೆ. ಮಕ್ಕಳಿಗೆ ಆ ದಿನ ಪಾಠದ ಬದಲಿಗೆ ಸೃಜನಶೀಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವರು. ಮಕ್ಕಳಿಗೆ ಕಲಿಕೆಯನ್ನು ಜೀವನ್ಮುಖಿಯಾಗಿರಿಸಲು ಇದು ಪೂರಕವಾಗಿದೆ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರತರಲು ಮತ್ತು ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಕಲ್ಪಿಸುವುದು ಇದರ ಮೂಲ ಉದ್ದೇಶ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಬಾಬು ತಿಳಿಸಿದ್ದಾರೆ.

ಕತೆ ಹೇಳಿದ ಮಕ್ಕಳು

ADVERTISEMENT

ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಕಥೆ ಹೇಳಿಸಿ, ಯೋಗ ಮಾಡಿಸಲಾಯಿತು.

ತಮ್ಮದೇ ಶೈಲಿಯಲ್ಲಿ ಕಥೆ ಹೇಳಿ ಬರೆಯುವ ವಿಧಾನವನ್ನು ಶಿಕ್ಷಕರು ಕಲಿಸಿದರು. ಬಣ್ಣದ ಕಾಗದ ಬಳಸಿ ವಿವಿಧ ಕರಕುಶಲ ವಸ್ತುಗಳನ್ನು ರೂಪಿಸುವ ವಿಧಾನವನ್ನು ಕಲಿಸಲಾಯಿತು.

‘‘ಕಥೆ ಎಂದರೆ ಮಕ್ಕಳಿಗೆ ಅಚ್ಚುಮೆಚ್ಚು. ಒಂದೊಂದು ಮಗುವಿನ ಆಲೋಚನೆಯೂ ವಿಭಿನ್ನ. ಮಕ್ಕಳ ಕಲ್ಪನೆ ವಿಸ್ತರಿಸುವಂತೆ ಅವರಿಂದ ಕತೆ ಹೇಳಿಸಿದೆವು. ಮಕ್ಕಳಿಗೆ ಪ್ರೋತ್ಸಾಹಿಸಿದಾಗ ಅವರು ಕಥೆ ಹೇಳುವ ಶೈಲಿ ಅಚ್ಚರಿ ಮೂಡಿಸಿತು. ಎಲ್ಲ ಮಕ್ಕಳೂ ಕಥೆ ಹೇಳುವುದರಲ್ಲಿ ಪೈಪೋಟಿಯಿಂದ ಭಾಗವಹಿಸಿದ್ದು ವಿಶೇಷ’ ಎಂದು ಶಿಕ್ಷಕ ಚಾಂದ್‌ಪಾಷಾ ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್‌, ಪಿಡಿಒ ಅಂಜನ್‌ಕುಮಾರ್‌, ಅಧಿಕಾರಿ ಮೋಹನ್‌, ಶಿಕ್ಷಕರಾದ ಭಾರತಿ, ಅಶೋಕ್‌ ಸಿಬ್ಬಂದಿ ವೆಂಕಟಮ್ಮ ಇದ್ದರು.


ಕಥೆ ಪುಸ್ತಕ ಓದಿದ ಮಕ್ಕಳು

ತಾಲ್ಲೂಕಿನ ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಗ್ರಂಥಾಲಯದಲ್ಲಿರುವ ಕಥೆ ಪುಸ್ತಕಗಳನ್ನು ಮಕ್ಕಳಿಗೆ ನೀಡಿ ಓದಿಸಲಾಯಿತು. ಯೋಗ, ಧ್ಯಾನ, ಆಟಗಳಲ್ಲಿ ಮಕ್ಕಳು ತೊಡಗಿಸಿಕೊಂಡರು.

ಶಾಲೆಗೆ ಭೇಟಿ ನೀಡಿದ್ದ ತಾಲ್ಲೂಕು ಪಂಚಾಯಿತಿ ನರೇಗಾ ಯೋಜನೆ ಸಹಾಯಕ ನಿರ್ದೇಶಕ ಶ್ರೀನಾಥಗೌಡ ಮಾತನಾಡಿ, ‘ಮಕ್ಕಳಿಗೆ ಉತ್ತಮ ಆಲೋಚನೆ, ಚಿಂತನೆಗೆ ಹಚ್ಚುವ ಚಲನಚಿತ್ರ ತೋರಿಸಿ. ಪ್ರೊಜೆಕ್ಟರ್‌ ವ್ಯವಸ್ಥೆ ಮಾಡಿಸುವೆ. ಮಕ್ಕಳು ಸರ್ವಾಂಗೀಣ ಬೆಳವಣಿಗೆಗೆ ವಿವಿಧ ಸದಭಿರುಚಿಯ ಹವ್ಯಾಸ ರೂಢಿಸುವ ಅಗತ್ಯವಿದೆ’ ಎಂದು ಹೇಳಿದರು.

ಅಬ್ಲೂಡು ಗ್ರಾಮ ಪಂಚಾಯಿತಿ ಪಿಡಿಒ ಜಯಶ್ರೀ, ಮುಖ್ಯ ಶಿಕ್ಷಕಿ ಸರಸ್ವತಮ್ಮ, ಶಿಕ್ಷಕರಾದ ಎಂ.ದೇವರಾಜ್‌, ಡಿ.ಎಸ್‌.ಶ್ರೀಕಾಂತ್‌, ಎಚ್‌.ಆರ್‌.ಮಂಜುನಾಥ್‌, ಕೆ.ಶ್ರೀನಿವಾಸ ಯಾದವ್‌, ಕೆ.ನಾಗರಾಜ್‌, ಎ.ತ್ರಿವೇಣಿ ಇದ್ದರು.

ಭಾಷಣ ಮಾಡಿದ ಮಕ್ಕಳು

ತಾಲ್ಲೂಕಿನ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಮಗೆ ಸಿಕ್ಕ ವಿಷಯದ ಬಗ್ಗೆ ತಮ್ಮ ಅಭಿಪ್ರಾಯ, ಅನಿಸಿಕೆ, ಆಲೋಚನೆ ವ್ಯಕ್ತಪಡಿಸಿದರು.

ಡಬ್ಬಿಯಲ್ಲಿ ವಿವಿಧ ವಿಷಯಗಳನ್ನು ಚೀಟಿಯಲ್ಲಿ ಬರೆದು ಹಾಕಿ, ವಿದ್ಯಾರ್ಥಿಗಳು ತಮಗೆ ಸಿಕ್ಕ ಚೀಟಿಯ ವಿಷಯದ ಬಗ್ಗೆ ಆ ಕ್ಷಣದಲ್ಲಿ ಮಾತನಾಡಬೇಕಿತ್ತು. ಮಕ್ಕಳ ನಂತರ ಮಾತನಾಡಿದ ಶಿಕ್ಷಕರು, ಮಾರ್ಗದರ್ಶಕ ಅಂಶಗಳನ್ನು ತಿಳಿಸಿದರು. ಮಕ್ಕಳು ಯೋಗ, ಧ್ಯಾನ, ಕ್ರೀಡೆಯಲ್ಲಿ ತೊಡಗಿಸಿಕೊಂಡರು.

ಸಿಆರ್‌ಪಿ ಶ್ರೀನಿವಾಸರೆಡ್ಡಿ, ಎಸ್‌ಡಿಎಂಸಿ ಅಧ್ಯಕ್ಷ ಜಯರಾಮ್‌, ಸದಸ್ಯ ಗಂಗಾಧರ್‌, ಮುಖ್ಯ ಶಿಕ್ಷಕ ಗೋಪಾಲಕೃಷ್ಣಯ್ಯ, ಶಿಕ್ಷಕರಾದ ಎಲ್‌.ನಾಗಭೂಷಣ್‌, ಎಂ.ಎ.ರಾಮಕೃಷ್ಣಪ್ಪ, ಗಂಗಶಿವಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.