ADVERTISEMENT

ಚಿಕ್ಕಬಳ್ಳಾಪುರ: ಬೈರಗೊಂಡ್ಲು ಜಲಾಶಯ ನಿರ್ಣಯಕ್ಕೆ ಆಗ್ರಹಿಸಿ ವೀರಪ್ಪ ಮೊಯಿಲಿ ಪತ್ರ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 17:35 IST
Last Updated 26 ಜೂನ್ 2020, 17:35 IST
ಎಂ.ವೀರಪ್ಪ ಮೊಯಿಲಿ
ಎಂ.ವೀರಪ್ಪ ಮೊಯಿಲಿ   

ಚಿಕ್ಕಬಳ್ಳಾಪುರ: ಎತ್ತಿನಹೊಳೆ ಯೋಜನೆಯಲ್ಲಿ ಬೈರಗೊಂಡ್ಲು ಬಳಿ ಜಲಾಶಯ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಸೂಕ್ತ ಪರಿಹಾರ ನಿಗದಿಪಡಿಸುವ ಸಂಬಂಧ ಬೇಗ ನಿರ್ಣಯ ತೆಗೆದುಕೊಂಡು ವಿಳಂಬವಾಗಿರುವ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಮಾಜಿ ಸಂಸದ ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು ಬರೆದು ಒತ್ತಾಯಿಸಿದ್ದಾರೆ.

ಜಲಾಶಯ ನಿರ್ಮಾಣಕ್ಕೆ ಕೊರಟಗೆರೆ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರ ಜಮೀನು ಭೂಸ್ವಾಧೀನವಾಗಲಿದೆ. ಆದರೆ, ಉಭಯ ತಾಲ್ಲೂಕುಗಳ ರೈತರಿಗೆ ನೀಡುವ ಪರಿಹಾರದ ವಿಚಾರವಾಗಿ ಕೆಲ ವರ್ಷಗಳಿಂದ ತಲೆದೋರಿರುವ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ನಿರ್ಣಯ ತೆಗೆದುಕೊಳ್ಳುವುದು ಬಹಳ ವಿಳಂಬವಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಎತ್ತಿನಹೊಳೆ ಯೋಜನೆಯ ಮೂಲ ಅಂದಾಜು ವೆಚ್ಚ ₹13 ಸಾವಿರ ಕೋಟಿಯಾಗಿತ್ತು. ಕಾಲಮಿತಿಯೊಳಗೆ ಯೋಜನೆ ಅನುಷ್ಠಾನಗೊಳಿಸಿದ್ದರೆ ಅಷ್ಟೇ ಮೊತ್ತದಲ್ಲಿ ಯೋಜನೆ ಕಾಮಗಾರಿ ಮುಗಿಸಬಹುದಿತ್ತು. ವಿಳಂಬದಿಂದಾಗಿ ಯೋಜನೆಯ ಪರಿಷ್ಕೃತ ಅಂದಾಜು ವೆಚ್ಚ ಇದೀಗ ₹24 ಸಾವಿರ ಕೋಟಿಗೆ ಏರಿಕೆಯಾಗಿದೆ.

ADVERTISEMENT

ದೊಡ್ಡಬಳ್ಳಾಪುರ ಮತ್ತು ಕೊರಟಗೆರೆ ಭಾಗದ ರೈತರ ಭೂಮಿಗೆ ಸಮನಾದ ಪರಿಹಾರ ನೀಡಿದ್ದರೆ ನಾಲ್ಕು ವರ್ಷಗಳಿಂದ ಬಗೆಹರಿಯದೆ ಉಳಿದಿರುವ ಸಮಸ್ಯೆ ಈ ಹಿಂದೆಯೇ ಪರಿಹಾರವಾಗಿ ಕಡಿಮೆ ವೆಚ್ಚದಲ್ಲಿ ಯೋಜನೆ ಪೂರ್ಣಗೊಳಿಸಬಹುದಿತ್ತು. ಯೋಜನೆ ವಿಳಂಬವಾದಷ್ಟು ವೆಚ್ಚ ಮತ್ತಷ್ಟು ದುಬಾರಿಯಾಗಲಿದೆ.

ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಇತ್ತೀಚೆಗೆ ತಾವು ಕರೆದಿದ್ದ ಸಭೆಯಲ್ಲಿ ಕೂಡ ಬೈರಗೊಂಡ್ಲು ಜಲಾಶಯ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇದರಿಂದ ₹319 ಕೋಟಿ ವೆಚ್ಚದ ಆ ಯೋಜನೆ ಮುಂದೆ ಪರಿಷ್ಕೃತಗೊಂಡು ₹700ಕ್ಕೆ ಏರಿಕೆಯಾಗಲಿದೆ. ಜತೆಗೆ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಯೋಜನೆ ಅನುಷ್ಠಾನ ಇನ್ನಷ್ಟು ತಡವಾಗಲಿದೆ ಎಂದು ಮೊಯಿಲಿ ಅವರು ಮುಖ್ಯಮಂತ್ರಿ ಅವರ ಗಮನ ಸೆಳೆದಿದ್ದಾರೆ.

ಈಗಾಗಲೇ ಏತ ನೀರಾವರಿ ನೀರು ವೇದಾವತಿ ಕಣಿವೆಗೆ ಹರಿದು ಈ ಮಳೆಗಾಲದಲ್ಲೇ ವಾಣಿವಿಲಾಸ ಸಾಗಕ್ಕೆ ಸೇರಬೇಕಾಗಿತ್ತು. ಅದು ಕೂಡ ವಿಳಂಬವಾಗಿದೆ. ಈಗಾಗಲೇ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಆದ್ದರಿಂದ, ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಆದ್ಯತೆ ನೀಡಬೇಕು.

ಕಾಲುವೆಗಳಿಂದ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ನೀರು ಹರಿಸಿದರೆ ನೀರು ಸೋರಿಕೆ, ವ್ಯರ್ಥವಾಗುತ್ತದೆ. ಕೆರೆಯಿಂದ ಕೆರೆಗೆ ನೀರು ಹರಿಸಲು ಪೈಪ್‌ ಅಳವಡಿಸಬೇಕು. ಈ ಬಗ್ಗೆ ಸರ್ಕಾರ ಈಗಾಗಲೇ ನಿರ್ಧಾರ ಕೈಗೊಂಡಿದೆ. ಬೇರೆ ಜಿಲ್ಲೆಗಳಿಗೂ ಇದನ್ನು ವಿಸ್ತರಿಸುವುದು ಸೂಕ್ತ.

ಆದಷ್ಟು ಬೇಗ ಎತ್ತಿನಹೊಳೆ ಯೋಜನೆಗೆ ಸಂಬಂಧಪಟ್ಟವರ ಸಭೆ ಕರೆದು ಕೊರಟಗೆರೆ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರ ಜಮೀನುಗಳಿಗೆ ನೀಡಬೇಕಾದ ಪರಿಹಾರದ ಮೊತ್ತ ಮತ್ತು ಬೈರಗೊಂಡ್ಲು ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿರ್ಣಯ ತೆಗೆದುಕೊಳ್ಳಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.