ADVERTISEMENT

ಹಸಿ ಕಸ ಸಂಗ್ರಹಕ್ಕೆ ಬಿದಿರಿನ ಪೆಟ್ಟಿಗೆ

ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ತಹಬದಿಗೆ ತರಲು ವಿನೂತನ ಪರಿಕಲ್ಪನೆ

ಈರಪ್ಪ ಹಳಕಟ್ಟಿ
Published 28 ಡಿಸೆಂಬರ್ 2019, 19:30 IST
Last Updated 28 ಡಿಸೆಂಬರ್ 2019, 19:30 IST
ಚಿಕ್ಕಬಳ್ಳಾಪುರ ನಗರಸಭೆಯ ಆವರಣದಲ್ಲಿ ಸಂಗ್ರಹಿಸಿರುವ ಹಸಿ ತ್ಯಾಜ್ಯ ಸಂಗ್ರಹಿಸುವ ಬಿದಿರಿನ ಪೆಟ್ಟಿಗೆಗಳು
ಚಿಕ್ಕಬಳ್ಳಾಪುರ ನಗರಸಭೆಯ ಆವರಣದಲ್ಲಿ ಸಂಗ್ರಹಿಸಿರುವ ಹಸಿ ತ್ಯಾಜ್ಯ ಸಂಗ್ರಹಿಸುವ ಬಿದಿರಿನ ಪೆಟ್ಟಿಗೆಗಳು   

ಚಿಕ್ಕಬಳ್ಳಾಪುರ: ನಗರದಲ್ಲಿ ನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿಗೆ ಆಗುವ ಶ್ರಮ ಮತ್ತು ಖರ್ಚು ಕಡಿಮೆಗೊಳಿಸುವ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ನಗರಸಭೆಯು ಮನೆಗಳಲ್ಲಿಯೇ ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿಸಲು ಅನುಕೂಲವಾಗುವಂತಹ ಬಿದಿರಿನ ಪೆಟ್ಟಿಗೆಗಳನ್ನು ನಾಗರಿಕರಿಗೆ ಉಚಿತವಾಗಿ ನೀಡಲು ಮುಂದಾಗಿದೆ.

ನಗರಸಭೆಯ ನೂತನ ಆಯುಕ್ತ ಡಿ.ಲೋಹಿತ್ ಅವರ ಆಸಕ್ತಿಯ ಫಲವಾಗಿ ಇಂತಹದೊಂದು ‘ಪರಿಸರ ಸ್ನೇಹಿ’ ಉಪಕ್ರಮ ಪ್ರಾಯೋಗಿಕವಾಗಿ ಮೊದಲ ಬಾರಿಗೆ ಜಿಲ್ಲಾ ಕೇಂದ್ರದಲ್ಲಿ ಅನುಷ್ಟಾನಗೊಳ್ಳುತ್ತಿದೆ. ಅದಕ್ಕಾಗಿ ಈಗಾಗಲೇ ಮಧುಗಿರಿಯಿಂದ 100 ಬಿದಿರಿನ ಬಾಕ್ಸ್‌ಗಳನ್ನು ತರಿಸಲಾಗಿದೆ. ಯಾವ ಮನೆಯಲ್ಲಿ ಕಾಂಪೌಂಡ್, ಅಂಗಳ, ಹಿತ್ತಲ, ಮಣ್ಣಿನ ಪ್ರದೇಶ ಇರುತ್ತದೋ ಅಂತಹ ಮನೆಗಳಿಗೆ ಬಿದಿರಿನ ಬಾಕ್ಸ್‌ಗಳನ್ನು ವಿತರಿಸಲು ಉದ್ದೇಶಿಸಲಾಗಿದೆ.

‘ನಗರದಲ್ಲಿ ಸುಮಾರು 12 ಸಾವಿರ ಮನೆಗಳಿವೆ. ಆ ಪೈಕಿ ನಾವು ಸುಮಾರು ಎರಡು ಸಾವಿರ ಮನೆಗಳಲ್ಲಿ ಬಿದಿರಿನ ಕಾಂಪೋಸ್ಟ್ ಪೆಟ್ಟಿಗೆ ಅಳವಡಿಸಬಹುದು ಎಂದು ಅಂದಾಜಿಸಿದ್ದೇವೆ. ಪ್ರತಿ ಮನೆಯಲ್ಲಿ ನಿತ್ಯ ಸರಾಸರಿ 500 ಗ್ರಾಂ ಹಸಿ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಅದರಂತೆ ಲೆಕ್ಕ ಹಾಕಿದರೆ ಎರಡು ಸಾವಿರ ಮನೆಗಳಲ್ಲಿ ಒಂದು ದಿನಕ್ಕೆ ಒಂದು ಟನ್, ಒಂದು ವರ್ಷಕ್ಕೆ 365 ಟನ್ ಹಸಿ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಬಿದಿರಿನ ಪೆಟ್ಟಿಗೆ ಅಳವಡಿಸಿದರೆ 365 ಟನ್ ತ್ಯಾಜ್ಯ ಸಾಗಿಸುವ ಶ್ರಮ, ಖರ್ಚು ಉಳಿತಾಯ ಮಾಡಬಹುದು’ ಎನ್ನುತ್ತಾರೆ ಲೋಹಿತ್.

ADVERTISEMENT

‘ಕೆಲವೆಡೆ ಹಸಿ ತ್ಯಾಜ್ಯ ಸಂಗ್ರಹಕ್ಕೆ ಪ್ಲಾಸ್ಟಿಕ್ ಪೈಪ್‌ ಬಳಕೆ ಮಾಡಲಾಗುತ್ತಿದೆ. ಇದಕ್ಕೆ ಸುಮಾರು ₹800 ಖರ್ಚಾಗುತ್ತದೆ. ಪರಿಸರ ಸ್ನೇಹಿ ಕ್ರಮಕ್ಕೆ ಪ್ಲಾಸ್ಟಿಕ್ ಬಳಸುವುದು ಕೂಡ ಪರೋಕ್ಷವಾಗಿ ಪರಿಸರಕ್ಕೆ ಹಾನಿ ಮಾಡುವ ಕ್ರಮವೇ ಆಗಿದೆ. ಆದ್ದರಿಂದ ನಾವುಎಷ್ಟು ಬಾರಿ ಕಡಿದರೂ ಬೆಳೆಯುವ ‘ಹಸಿರು ಹೊನ್ನು’ ಎನ್ನಬಹುದಾದ ಬಿದಿರಿಗೆ ಪ್ರಾಶಸ್ತ್ಯ ನೀಡಿದ್ದೇವೆ’ ಎಂದು ಹೇಳಿದರು.

‘ಒಂದು ಚದರಡಿ ಚೌಕಾಕಾರದ, ಮೂರು ಅಡಿ ಎತ್ತರದ ಮುಚ್ಚಳ ಹೊಂದಿರುವ ಒಂದು ಬಿದಿರಿನ ಪೆಟ್ಟಿಗೆಗೆ ₹350 ವೆಚ್ಚವಾಗುತ್ತದೆ. ಪೆಟ್ಟಿಗೆಗಳಿಗೆ ರಾಸಾಯನಿಕ ಲೇಪನ ಮಾಡಿರುವುದರಿಂದ ಕೊಳೆಯುವುದಿಲ್ಲ. ಸುಮಾರು 10 ವರ್ಷ ಬಳಕೆ ಮಾಡಬಹುದು’ ಎಂದು ಹೇಳಿದರು.

‘ನಿತ್ಯ ಅಡುಗೆ ಮನೆಯಲ್ಲಿ ಸಿಗುವ ತರಕಾರಿ, ಹಣ್ಣುಗಳ ತ್ಯಾಜ್ಯ, ಮಿಕ್ಕಿ ಉಳಿಯುವ ಆಹಾರ, ಮುಸುರೆ, ಮನೆಯ ಆವರಣದಲ್ಲಿ ಬೀಳುವ ಮರದ ಎಲೆಗಳು, ಹೂವುಗಳಂತಹ ಹಸಿ ತ್ಯಾಜ್ಯವನ್ನು ನಿತ್ಯ ಪೆಟ್ಟಿಗೆಯಲ್ಲಿ ತುಂಬುತ್ತ ಬಂದರೆ ಮೂರು ತಿಂಗಳ ಹೊತ್ತಿಗೆ ಪೆಟ್ಟಿಗೆಯಲ್ಲಿ ಫಲವತ್ತಾದ ಸಾವಯವ ಗೊಬ್ಬರ ಸಿಗುತ್ತದೆ. ಅದನ್ನು ಮನೆಯ ಆವರಣಗಳಲ್ಲಿ ಇರುವ ಗಿಡಗಳಿಗೆ ಬಳಕೆ ಮಾಡಬಹುದು. ಒಂದು ಪೆಟ್ಟಿಗೆಯಲ್ಲಿ ಕುಟುಂಬವೊಂದು ಸುಮಾರು ಎರಡೂವರೆ ತಿಂಗಳಿಂದ ನಾಲ್ಕು ತಿಂಗಳವರೆಗೆ ಕಸ ಸಂಗ್ರಹಿಸಬಹುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.