ADVERTISEMENT

ಬೆಂಗಳೂರಿನ ಕೊಳಚೆ ನೀರು; 3ನೇ ಹಂತದಲ್ಲಿ ಶುದ್ಧೀಕರಿಸಿ: ಸಚಿವ ಯೋಗೇಶ್ವರ್‌ಗೆ ಮನವಿ

ಶಾಶ್ವತ ನೀರಾವರಿ ಹೋರಾಟ ಸಮಿತಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 14:45 IST
Last Updated 23 ಜುಲೈ 2021, 14:45 IST
ಎಚ್‌.ಎನ್.ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ನೀರನ್ನು ಮೂರನೇ ಹಂತದಲ್ಲಿ ಶುದ್ಧೀಕರಿಸುವಂತೆ ಪರಿಸರ ಮತ್ತು ಜೀವವಿಜ್ಞಾನ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡರು ಮನವಿ ಸಲ್ಲಿಸಿದರು
ಎಚ್‌.ಎನ್.ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ನೀರನ್ನು ಮೂರನೇ ಹಂತದಲ್ಲಿ ಶುದ್ಧೀಕರಿಸುವಂತೆ ಪರಿಸರ ಮತ್ತು ಜೀವವಿಜ್ಞಾನ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡರು ಮನವಿ ಸಲ್ಲಿಸಿದರು   

ಚಿಕ್ಕಬಳ್ಳಾಪುರ: ಎಚ್‌.ಎನ್.ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ನೀರಾವರಿ ಯೋಜನೆಗಳ ಮೂಲಕ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಬೆಂಗಳೂರಿನ ಕೊಳಚೆ ನೀರನ್ನು ಎರಡು ಹಂತದಲ್ಲಿ ಸಂಸ್ಕರಿಸಿ ಹರಿಸಲಾಗುತ್ತಿದೆ. ಇದರಿಂದ ಅಂತರ್ಜಲವು ಶಾಶ್ವತವಾಗಿ ಕಲುಷಿತಗೊಳ್ಳುವ ಅಪಾಯವಿದೆ. ಆದ್ದರಿಂದ ಈ ನೀರನ್ನು ಮೂರನೇ ಹಂತದಲ್ಲಿ ಸಂಸ್ಕರಿಸಿ ಹರಿಸಬೇಕು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯು ಪರಿಸರ ಹಾಗೂ ಜೀವ ವಿಜ್ಞಾನ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಮನವಿ ಸಲ್ಲಿಸಿತು.

ತಾಲ್ಲೂಕಿನ ನಾಯನಹಳ್ಳಿಯ ಆರ್.ಆಂಜನೇಯರೆಡ್ಡಿ ಅವರ ತೋಟದ ಮನೆಯಲ್ಲಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಸ್ಮರಣಾರ್ಥ ರೂಪಿಸಿರುವ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಕ್ಕೆ ಸಚಿವರು ಭೇಟಿ ನೀಡಿದ್ದು ಈ ವೇಳೆ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.

ವೈಜ್ಞಾನಿಕ ಸಂಸ್ಥೆಗಳು, ವಿಜ್ಞಾನಿಗಳು ನೀಡಿದ ಎಚ್ಚರಿಕೆಗಳನ್ನು ಕಡೆಗಣಿಸಿ ಅರೆ ಸಂಸ್ಕರಿತ ನೀರನ್ನು ಹರಿಸಲಾಗುತ್ತಿದೆ. ಈ ಮೂರು ಜಿಲ್ಲೆಗಳಲ್ಲಿನ ಕೆರೆಗಳಲ್ಲಿನ ಜಲಚರಗಳು ಸಾವನ್ನಪ್ಪುತ್ತಿವೆ. ಜಾನುವಾರುಗಳು ಈ ಕೆರೆಗಳ ನೀರನ್ನು ಮೂಸುತ್ತಿಲ್ಲ. ಕೆರೆಗಳಲ್ಲಿ ವಿಷಕಾರಿ ಲವಣಗಳು, ಖನಿಜದ ಅಂಶಗಳು ಕರಗಿವೆ. ಇದರಿಂದ ಅಂತರ್ಜಲ ಕಲುಷಿತಗೊಳ್ಳುತ್ತದೆ.

ADVERTISEMENT

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಮ್ಮ ಸಚಿವಾಲಯದ ವ್ಯಾಪ್ತಿಯಲ್ಲಿದೆ. ಆದ್ದರಿಂದ ಕಡ್ಡಾಯವಾಗಿ ಮೂರನೇ ಹಂತದಲ್ಲಿ ತ್ಯಾಜ್ಯ ನೀರನ್ನು ಶುದ್ಧೀಕರಿಸಬೇಕು. ಹಾಲಿ ಶುದ್ಧೀಕರಣ ಘಟಕಗಳನ್ನು ಮೇಲ್ದರ್ಜೆಗೇರಿಸಬೇಕು. ಮೇಲುಸ್ತುವಾರಿವಹಿಸಿ ನೀರಿನ ಗುಣಮಟ್ಟದ ಬಗ್ಗೆ ನಿರಂತರವಾಗಿ ಖಾತ್ರಿಮಾಡಿಕೊಳ್ಳಬೇಕು ಎಂದು ಕೋರಲಾಯಿತು.

ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ, ಉಷಾ, ಸುಷ್ಮಾ ಶ್ರೀನಿವಾಸ್, ಆಯಿಶಾ ಸುಲ್ತಾನ, ಜಿ.ಜಿ.ಹಳ್ಳಿ ನಾರಾಯಣಸ್ವಾಮಿ, ಪ್ರಭಾ ನಾರಾಯಣಗೌಡ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.