ADVERTISEMENT

ಅನಿಷ್ಟ ಜಾತಿ ಪದ್ಧತಿ ವಿರುದ್ಧ ಜಾಗೃತರಾಗಿ-ಎಸ್.ಎನ್.ಸುಬ್ಬಾರೆಡ್ಡಿ

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2022, 3:13 IST
Last Updated 11 ಫೆಬ್ರುವರಿ 2022, 3:13 IST
ಬಾಗೇಪಲ್ಲಿ ತಾಲ್ಲೂಕಿನ ರಾಮನೊಡ್ಡಂಪಲ್ಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಲೆಮಾರಿ, ಅರೆಅಲೆಮಾರಿ ಸಮುದಾಯದ ಕಾಲೊನಿಯ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಚಾಲನೆ ನೀಡಿದರು
ಬಾಗೇಪಲ್ಲಿ ತಾಲ್ಲೂಕಿನ ರಾಮನೊಡ್ಡಂಪಲ್ಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಲೆಮಾರಿ, ಅರೆಅಲೆಮಾರಿ ಸಮುದಾಯದ ಕಾಲೊನಿಯ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಚಾಲನೆ ನೀಡಿದರು   

ಬಾಗೇಪಲ್ಲಿ: ಮೂಢನಂಬಿಕೆ, ಮೌಢ್ಯದ ಆಚರಣೆ, ಮಾಟ, ಮಂತ್ರ, ಜಾತಿ ಪದ್ಧತಿ ಇಂದಿಗೂ ಜೀವಂತವಾಗಿದ್ದು, ಪ್ರಜ್ಞಾವಂತ ಸಮಾಜ ತಲೆತಗ್ಗಿಸುವಂತಾಗಿದೆ. ಇದರ ವಿರುದ್ಧ ಜನರು ಎಚ್ಚೆತ್ತುಕೊಳ್ಳಬೇಕು ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಸಲಹೆ ನೀಡಿದರು.

ತಾಲ್ಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯಿತಿಯ ರಾಮನೊಡ್ಡಂಪಲ್ಲಿ ಗ್ರಾಮದಲ್ಲಿ ಬುಧವಾರ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯಿಂದ ಹಮ್ಮಿಕೊಂಡಿದ್ದ ಅಲೆಮಾರಿ, ಅರೆಅಲೆಮಾರಿ ಸಮುದಾಯದ ಕಾಲೊನಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು, ಹೆಣ್ಣುಮಕ್ಕಳನ್ನು ಮಾಸಿಕ ಋತುಚಕ್ರದ ಸಂದರ್ಭದಲ್ಲಿ ಗೊಲ್ಲರಹಟ್ಟಿಗಳಲ್ಲಿ ಹೊರಗೆ ಅಥವಾ ಗುಡಿಸಲುಗಳಲ್ಲಿ ಕೂರಿಸುವ ಅನಿಷ್ಟ ಪದ್ಧತಿ ಇದೆ. ಇದು ಹೆಣ್ಣುಮಕ್ಕಳ ಮೇಲಿನ ಶೋಷಣೆ ಹೊರತು ಬೇರೇನೂ ಅಲ್ಲ. ಈ ಅನಿಷ್ಟ ಪದ್ಧತಿ ದೂರ ಮಾಡಲು ಗೊಲ್ಲರಹಟ್ಟಿ, ಅಲೆಮಾರಿ, ಅರೆಅಲೆಮಾರಿ ಸಮುದಾಯದಲ್ಲಿ ಅರಿವು ಮೂಡಿಸಲು ಸರ್ಕಾರ ಮುಂದಾಗಿದೆ ಎಂದು
ಹೇಳಿದರು.

ADVERTISEMENT

ಸಮುದಾಯದ ಜನರಿಗೆ ಅಂಗನವಾಡಿ, ಆಶಾ, ಆರೋಗ್ಯ, ಪಿಡಿಒ, ಕಂದಾಯ ಇಲಾಖೆ ಅಧಿಕಾರಿಗಳು ಅರಿವು ಮೂಡಿಸಬೇಕು. ಶಾಲಾ ಮಕ್ಕಳಿಗೆ ವಿಶೇಷ ಪ್ರೋತ್ಸಾಹ ಧನ, ವಿದ್ಯಾಸಿರಿ ಯೋಜನೆಯಡಿ ಮೆರಿಟ್ ವಿದ್ಯಾರ್ಥಿವೇತನ, ಆಶ್ರಮ ಶಾಲೆ, ಸಮುದಾಯ ಭವನ ನಿರ್ಮಾಣ, ರಸ್ತೆ, ಕುಡಿಯುವ ನೀರು, ಚರಂಡಿ ನಿರ್ಮಾಣಗಳಿಗೆ ಸರ್ಕಾರ ವಿಶೇಷ ಅನುದಾನ ನೀಡಿದೆ. ತಾಲ್ಲೂಕಿನಲ್ಲಿ ಇದುವರೆವಿಗೂ 500 ಅಲೆಮಾರಿ ಸಮುದಾಯದವರಿಗೆ ಉಚಿತವಾಗಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ವಿವರಿಸಿದರು.

ರಾಜ್ಯ ಸರ್ಕಾರದಲ್ಲಿ ಬಿಜೆಪಿ ಶಾಸಕರಿಗೆ ಕೋಟ್ಯಂತರ ಅನುದಾನ ನೀಡಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಬಿಡಿಕಾಸು ಕೊಟ್ಟಿಲ್ಲ. ಇದರಿಂದ ಕ್ಷೇತ್ರದ ಪ್ರಗತಿಯಲ್ಲಿ ಕೊಂಚ ಹಿನ್ನಡೆ ಆಗಿದೆ. ಆದರೂ, ಗ್ರಾಮೀಣ ಪ್ರದೇಶಗಳನ್ನು ಸಂಪರ್ಕಿಸುವ ರಸ್ತೆಗಳನ್ನು ಹಂತ ಹಂತವಾಗಿ ಡಾಂಬರೀಕರಣ ಮಾಡುತ್ತಿದ್ದೇವೆ ಎಂದರು.

ನಾರಾಯಣಸ್ವಾಮಿ ಕೋಟೆ ಗ್ರಾಮದ ಬಳಿ 10 ಎಕರೆ ಪ್ರದೇಶದಲ್ಲಿ ₹ 12 ಕೋಟಿ ವೆಚ್ಚದಲ್ಲಿ ಬಿಸಿಎಂ ವಿದ್ಯಾರ್ಥಿನಿಲಯ, ಭದ್ರಂಪಲ್ಲಿ ಗ್ರಾಮದ ಬಳಿ ₹ 8 ಕೋಟಿ ವೆಚ್ಚದಲ್ಲಿ ಸರ್ಕಾರಿ ಆರೋಗ್ಯ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸಿರಿಧಾನ್ಯ, ತರಕಾರಿ, ಮೊಟ್ಟೆ ಸೇರಿದಂತೆ ಪೌಷ್ಟಿಕ ಆಹಾರದ ವಸ್ತು ಪ್ರದರ್ಶನ ನಡೆಯಿತು. ಫಲಾನುಭವಿಗಳಿಗೆಭಾಗ್ಯಲಕ್ಷ್ಮೀ ಬಾಂಡ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಚ್.ಎನ್. ಮಂಜುನಾಥಸ್ವಾಮಿ, ಮಾಜಿ ಅಧ್ಯಕ್ಷ ನರೇಂದ್ರಬಾಬು, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಸಿದ್ದಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮೀನರಸಿಂಹಪ್ಪ, ಸಬ್ ಇನ್‌ಸ್ಪೆಕ್ಟರ್ ಗೋಪಾಲರೆಡ್ಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ವಿ. ನಾಗರಾಜ್, ಜಿಲ್ಲಾ ಪಂಚಾಯಿತಿಯ ಪ್ರಭಾರ ಎಇಇ ಬಿ. ವಿಜಯ್ ಕುಮಾರ್, ಕೃಷಿ ಅಧಿಕಾರಿ ಮಂಜುನಾಥ್, ರೇಷ್ಮೆ ಅಧಿಕಾರಿ ಡಾ.ಚಿನ್ನಕೈವಾರಮಯ್ಯ, ಕೊತ್ತಕೋಟೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಾಬುಸಾಹೇಬ್, ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಕುಮಾರಿ, ಸದಸ್ಯ ರವೀಂದ್ರಬಾಬು, ಜಿಲ್ಲಾ ಅಲೆಮಾರಿ, ಅರೆಅಲೆಮಾರಿ ಸಲಹಾ ಸಮಿತಿಯ ನಾಮನಿದೇರ್ಶಿತ ಸದಸ್ಯ ಸೂರ್ಯನಾರಾಯಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.