ADVERTISEMENT

ಉಪ ಚುನಾವಣೆ | ಮಂಕುಬೂದಿ ಬಗ್ಗೆ ಎಚ್ಚರ ವಹಿಸಿ: ಶಾಸಕ ಕೃಷ್ಣ ಭೈರೇಗೌಡ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 17:25 IST
Last Updated 20 ನವೆಂಬರ್ 2019, 17:25 IST
ಕಾರ್ಯಕ್ರಮದಲ್ಲಿ ಶಾಸಕ ಕೃಷ್ಣ ಭೈರೇಗೌಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಕೃಷ್ಣ ಭೈರೇಗೌಡ ಮಾತನಾಡಿದರು.   

ಚಿಕ್ಕಬಳ್ಳಾಪುರ: ‘ಜಿಲ್ಲೆಯಲ್ಲಿ ಕಳೆದ ಆರು ವರ್ಷಗಳಿಂದ ಏನಾದರೂ ಅಭಿವೃದ್ಧಿ ಕೆಲಸ ಆಗಿದೆ ಎಂದರೆ ಅದು ಕಾಂಗ್ರೆಸ್ ಆಡಳಿತದಲ್ಲಿ ಮಾತ್ರ. ಬಿಜೆಪಿ ಸರ್ಕಾರದಲ್ಲಿ ಈ ಕ್ಷೇತ್ರಕ್ಕೆ ಒಂದು ನಯಾಪೈಸೆ ಕೊಟ್ಟಿಲ್ಲ. ಆದರೆ ಇವತ್ತು ಇಲ್ಲಿನ ಅನರ್ಹ ಶಾಸಕ ವೈದ್ಯಕೀಯ ಕಾಲೇಜಿನ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಜನ ಎಚ್ಚರಿಕೆ ವಹಿಸಬೇಕು’ ಎಂದು ಶಾಸಕ ಕೃಷ್ಣ ಭೈರೇಗೌಡ ಹೇಳಿದರು.

ನಗರದಲ್ಲಿ ಬುಧವಾರ ನಡೆದ ಉಪ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಜನ ಕಳುಹಿಸಿದರೆ ಮಾತ್ರ ನಾವು ವಿಧಾನಸೌಧ ಮೆಟ್ಟಿಲು ಹತ್ತಲು ಸಾಧ್ಯ. ಆದರೆ ಆಶೀರ್ವಾದ ಮಾಡಿ ವಿಧಾನಸೌಧಕ್ಕೆ ಕಳುಹಿಸಿದ ಜನರ ತೀರ್ಪು ತಿರಸ್ಕರಿಸಿ ಸುಧಾಕರ್ ಅವರು ಈ ಕ್ಷೇತ್ರದ ಜನರಿಗೆ ದ್ರೋಹ ಮಾಡಿದ್ದಾರೆ. ಅನರ್ಹ ಶಾಸಕರೇ ಕಾಂಗ್ರೆಸ್‌ಗೆ ದ್ರೋಹ ಬಗೆದಿದ್ದಾರೆ ವಿನಾ ಪಕ್ಷ ಅವರಿಗೆ ಅನ್ಯಾಯ ಮಾಡಿಲ್ಲ’ ಎಂದು ತಿಳಿಸಿದರು.

‘ಸುಪ್ರೀಂ ಕೋರ್ಟ್ ಸಹ ಇವರು ಅನರ್ಹರು ಎಂದು ತೀರ್ಪು ನೀಡಿ ಕೊನೆಗೆ ಜನತಾ ನ್ಯಾಯಾಲಯಕ್ಕೆ ಕಳುಹಿಸಿದೆ. ಈ ಸಂದರ್ಭದಲ್ಲಿ ಜನ ಅನರ್ಹ ಶಾಸಕರಿಗೆ ತಕ್ಕ ಪಾಠ ಕಲಿಸಬೇಕು. ಇವರನ್ನೇ ಮತ್ತೆ ಆಯ್ಕೆ ಮಾಡಿದರೆ ನಮ್ಮಂತಹ ಮೂರ್ಖರು ಮತ್ತೊಬ್ಬರು ಇರಲು ಸಾಧ್ಯವಿಲ್ಲ’ ಎಂದರು.

ADVERTISEMENT

ಉಪ ಚುನಾವಣೆ ವೀಕ್ಷಕ, ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ‘ನಾಳೆಯಿಂದ ನಮ್ಮ ಸ್ಥಳಿಯ ಕಾರ್ಯಕರ್ತರು ಅನರ್ಹ ಶಾಸಕರ ಪಕ್ಷಕ್ಕೆ ದ್ರೋಹ ಮಾಡಿದ ಬಗ್ಗೆ ಪ್ರತಿ ಮನೆಗೆ ಭೇಟಿ ನೀಡಿ ಅರಿವು ಮೂಡಿಸಬೇಕು. ಇದು ಬಹಳ ನಿರ್ಣಾಯಕವಾದ ಚುನಾವಣೆ ಕಾಟಾಚಾರದಲ್ಲ. ಪ್ರತಿ ಬೂತ್‌ನಲ್ಲಿ ಕಾರ್ಯಕರ್ತರು ಜವಾಬ್ದಾರಿ ತೆಗೆದುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು’ ಎಂದು ಹೇಳಿದರು.

‘ನಾವು ಚುನಾವಣೆಯಲ್ಲಿ ಗೆಲ್ಲಬೇಕಾದರೆ ನಮ್ಮ ಕಾರ್ಯಕರ್ತರು ನಾವು ಎಲ್ಲಾ ಸೇರಿ ಕಷ್ಟ ಪಟ್ಟರೆ ಮಾತ್ರ ಪ್ರತಿಫಲ ಸಿಗುತ್ತದೆ. ಆದ್ದರಿಂದ, ನಾಳೆಯಿಂದ ಎಲ್ಲರೂ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಬೇಕು’ ಎಂದು ತಿಳಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಎಂ ಅಂಜನಪ್ಪ ಮಾತನಾಡಿ, ‘ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರು ಭ್ರಷ್ಟಾಚಾರವನ್ನೇ ಒಂದು ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ಐದು ವರ್ಷಗಳ ಹಿಂದೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ ಇವರು, ಇವತ್ತು ಸಾವಿರಾರು ಕೋಟಿ ಒಡೆಯರಾಗಿದ್ದಾರೆ. ಇವರಿಗೆ ಇಷ್ಟು ಹಣ ಎಲ್ಲಿಂದ ಬಂತು ಎಂದು ಜನ ಪ್ರಶ್ನಿಸಬೇಕು’ ಎಂದರು.

‘ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಎಚ್.ನರಸಿಂಹಯ್ಯ, ಸರ್.ಎಂ.ವಿಶ್ವೇಶ್ವರಯ್ಯ ಅವರಂತಹ ಮಹನೀಯರು ಮೇರು ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದರು. ಆದರೆ ಈಗ ಅನರ್ಹ ಶಾಸಕ ಚಿಕ್ಕಬಳ್ಳಾಪುರಕ್ಕೆ ಕಳಂಕ ತಂದಿದ್ದಾರೆ. ಅನರ್ಹ ಶಾಸಕರಿಗೆ ಸ್ವಾಭಿಮಾನ ಇಲ್ಲ. ಹಣ, ಅಧಿಕಾರ ಅಂದರೆ ಓಡಿ ಬರುತ್ತಾರೆ. ಮೋಸ ಮಾಡುವುದು ಅವರ ಹುಟ್ಟುಗುಣ’ ಎಂದು ಹೇಳಿದರು.

ಮುಖಂಡ ಯಲುವಳ್ಳಿ ರಮೇಶ್ ಮಾತನಾಡಿ, ‘ಲೂಟಿ ಮಾಡಿ ಸಂಪಾದಿಸಿದ ಸಂಪತ್ತನ್ನು ರಕ್ಷಣೆ ಮಾಡಿಕೊಳ್ಳಲು ಹೆದರಿ ಅನರ್ಹ ಶಾಸಕರು ಐಟಿ, ಇಡಿ ದಾಳಿಗೆ ಹೆದರಿ ಬಿಜೆಪಿಗೆ ಹೋಗಿದ್ದಾರೆ’ ಎಂದು ಆರೋಪಿಸಿದರು.

ಉಪ ಚುನಾವಣೆ ವೀಕ್ಷಕ, ಶಾಸಕ ವಿ.ಮುನಿಯಪ್ಪ, ಮಾಜಿ ಶಾಸಕರಾದ ಸಂಪಂಗಿ, ವೆಂಕಟಸ್ವಾಮಿ, ಎಸ್.ಎಂ.ಮುನಿಯಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮುಖಂಡರಾದ ಜಿ.ಎಚ್.ನಾಗರಾಜ್, ಕೆ.ವಿ.ನವೀನ್ ಕಿರಣ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.