ADVERTISEMENT

ಗೌರಿಬಿದನೂರು: ಬಿಜೆಪಿಯಲ್ಲಿ ಬಣ ಜಗಳ

ಗ್ರಾಮಾಂತರ ಮತ್ತು ನಗರ ಘಟಕದ ಅಧ್ಯಕ್ಷರ ಆಯ್ಕೆಯ ಕಗ್ಗಂಟು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 6:20 IST
Last Updated 8 ನವೆಂಬರ್ 2025, 6:20 IST
   

ನರಸಿಂಹಮೂರ್ತಿ ಕೆ.ಎನ್

ಗೌರಿಬಿದನೂರು: ಗೌರಿಬಿದನೂರು ತಾಲ್ಲೂಕು ಬಿಜೆಪಿ ಈಗ ಒಡೆದ ಮನೆಯಾಗಿದೆ. ಬಿಜೆಪಿ ನಗರ ಮತ್ತು ಗ್ರಾಮಾಂತರ ಘಟಕದ ಅಧ್ಯಕ್ಷರ ಆಯ್ಕೆ ವಿಚಾರವು ಚರ್ಚೆಗೆ ಬಂದಿರುವ ಈ ಹೊತ್ತಿನಲ್ಲಿ ಮುಖಂಡರ ನಡುವೆ ಮುಸುಕಿನ ಗುದ್ದಾಟವಷ್ಟೇ ಅಲ್ಲದೆ ಬಹಿರಂಗ ಹೇಳಿಕೆಗಳು ಜೋರಾಗಿವೆ.

ಅಧ್ಯಕ್ಷರ ನೇಮಕಕ್ಕೆ ಎರಡು ಬಣಗಳು ಬಿಜೆಪಿ ‘ಎ’ ಮತ್ತು ಬಿಜೆಪಿ ‘ಬಿ’ ಎಂದು ಪ್ರತ್ಯೇಕ ತಂಡಗಳೇ ಆಗಿವೆ. ಗುರುವಾರ ನಡೆದ ಬಿಜೆಪಿ ಸಭೆಯಲ್ಲಿ ಮುಖಂಡ ರವಿನಾರಾಯಣ ರೆಡ್ಡಿ, ನಗರ ಘಟಕದ ಅಧ್ಯಕ್ಷರಾಗಿ ತಮ್ಮ ಪುತ್ರ ಭರತ್ ರೆಡ್ಡಿ ಮತ್ತು ಗ್ರಾಮಾಂತರ ಭಾಗಕ್ಕೆ ಜಯಣ್ಣ ಅವರ ಹೆಸರನ್ನು ಸೂಚಿಸಿದ್ದರು.

ADVERTISEMENT

‘ಬಿಜೆಪಿಯನ್ನು ತಾಲ್ಲೂಕಿನಲ್ಲಿ ಬೆಳೆಸಲು ಪಟ್ಟ ಶ್ರಮ ಮತ್ತು ತಾವು ಅನುಭವಿಸಿದ ಅವಮಾನಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು. ನಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ನಗರ ಮತ್ತು ಗ್ರಾಮಾಂತರ ಅಧ್ಯಕ್ಷ ಸ್ಥಾನ ನೀಡದೆ ಹೋದರೆ ಬಿಜೆಪಿಯಲ್ಲಿ ಬಂಡಾಯ ಸೃಷ್ಟಿ ಆಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದರು 

ಮತ್ತೊಂದು ಕಡೆ ನಗರದ ಕಲ್ಲಂತಾರಾಯನಗುಟ್ಟೆಯಲ್ಲಿ ಶುಕ್ರವಾರ ಸಭೆಯೊಂದು ನಡೆದಿದೆ. ತಮ್ಮ ಬಣದ ಮುಂಚೂಣಿ ಕಾರ್ಯಕರ್ತರಿಗೆ ಅಧ್ಯಕ್ಷ ಸ್ಥಾನ ಕೊಡಬೇಕು ಎನ್ನುವುದು ಈ ಸಭೆಯ ಕೂಗು. ನಗರ ಘಟಕಕ್ಕೆ ವೇಣು ಮಾಧವ್, ಹರೀಶ್ ಮತ್ತು ಗ್ರಾಮಾಂತರಕ್ಕೆ ಕೋಡಿರ್ಲಪ್ಪ, ಮಧು ಸೂದನ್ ರೆಡ್ಡಿ, ಆಕಾಂಕ್ಷೆಗಳಾಗಿದ್ದಾರೆ. ಇದಕ್ಕೆ ಬಿಜೆಪಿ ವರಿಷ್ಠರ ಬೆಂಬಲ ಇದೆ ಎಂದು ಸಭೆಯಲ್ಲಿ ಅಭಿಮತ ವ್ಯಕ್ತವಾಯಿತು. 

ಒಂದು ಬಣದಲ್ಲಿ ರವಿನಾರಾಯಣ ರೆಡ್ಡಿ, ಡಾ. ಶಶಿಧರ್, ಭರತ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಂಗನಾಥ್, ವೇಮರೆಡ್ಡಿ, ಮುಂತಾದವರು ಇದ್ದರೆ ಮತ್ತೊಂದು ಬಣದಲ್ಲಿ ನಗರ ಘಟಕದ ಅಧ್ಯಕ್ಷ ಮಾರ್ಕೆಟ್ ಮೋಹನ್, ಕೋಡಿರ್ಲಪ್ಪ, ರಮೇಶ್ ರಾವ್ ಶೆಲ್ಕೆ ಮತ್ತಿತರರು ಗುರುತಿಸಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿಜೆಪಿಗೆ ಗ್ರಾಮೀಣ ಭಾಗಗಳಲ್ಲಿಯೂ ನೆಲೆ ಇರುವ ಕ್ಷೇತ್ರಗಳಲ್ಲಿ ಗೌರಿಬಿದನೂರು ಪ್ರಮುಖವಾಗಿದೆ. ಇಡೀ ಜಿಲ್ಲೆಯಲ್ಲಿ ಕಮಲಕ್ಕೆ ಬಲವೇ ಇಲ್ಲ ಎನ್ನುವಂತಹ ಸಂದರ್ಭದಲ್ಲಿ ಅತೀ ಹೆಚ್ಚು ಮತವನ್ನು ಬಿಜೆಪಿಗೆ ನೀಡಿದ ಕ್ಷೇತ್ರ ಗೌರಿಬಿದನೂರು. 

ಈ ಹಿಂದಿನ ಎರಡು ವಿಧಾನಸಭೆ ಚುನಾವಣೆಗಳನ್ನು ಗಮನಿಸಿದರೆ ಇದು ತಿಳಿಯುತ್ತದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎನ್.ಎಂ.ರವಿನಾರಾಯಣ ರೆಡ್ಡಿ 31,840 ಮತ್ತು 2018ರ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಕೆ.ಜೈಪಾಲ್ ರೆಡ್ಡಿ 34,759 ಮತಗಳನ್ನು ಪಡೆದಿದ್ದಾರೆ. ಈ ಎರಡೂ ಚುನಾವಣೆಗಳಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಹೆಚ್ಚು ಮತಗಳನ್ನು ಪಡೆದ ಕ್ಷೇತ್ರವೆಂದರೆ ಅದು ಗೌರಿಬಿದನೂರು.

2023ರ ವಿಧಾನಸಭೆ ಚುನಾವಣೆಯಲ್ಲಿ ಗೌರಿಬಿದನೂರಿನ ಮಾನಸ ಆಸ್ಪತ್ರೆಯ ವೈದ್ಯ ಡಾ.ಎಚ್.ಎಸ್ ಶಶಿಧರ್ ಬಿಜೆ‍ಪಿ ಅಭ್ಯರ್ಥಿಯಾಗಿದ್ದರು. ಅವರು 8,132
ಮತಗಳನ್ನಷ್ಟೇ ಪಡೆದಿದ್ದರು.

2013 ಮತ್ತು 2018ರ ವಿಧಾನಸಭಾ ಚುನಾವಣೆಗಳಲ್ಲಿ ಅಷ್ಟೇ ಅಲ್ಲ ಕಳೆದ ಮೂರು ಲೋಕಸಭಾ ಚುನಾವಣೆಗಳಲ್ಲಿಯೂ ಬಿಜೆಪಿಯು ಗೌರಿಬಿದನೂರು ತಾಲ್ಲೂಕಿನಲ್ಲಿ ಉತ್ತಮ ಸಾಧನೆಯನ್ನೇ ಮಾಡಿದೆ. ತನಗೆ ಅವಕಾಶಗಳು ಸಿಕ್ಕಾಗಲೆಲ್ಲಾ ಗೌರಿಬಿದನೂರು ಕ್ಷೇತ್ರದಲ್ಲಿ ಬಿಜೆ‍‍ಪಿ ತನ್ನ ನೆಲೆಯನ್ನು ಗಟ್ಟಿಗೊಳಿಸಿಕೊಳ್ಳುತ್ತಿದೆ. ಆದರೆ, ಈಗ ಪಕ್ಷದಲ್ಲಿನ ಬಣ ಬಡಿದಾಟವು ಕಾರ್ಯಕರ್ತರು ಕೈ ಹಿಸುಕಿಕೊಳ್ಳುವಂತೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.