ADVERTISEMENT

ವರ್ಷದ ನಂತರ ಸುಧಾಕರ್–ವಿಜಯೇಂದ್ರ ಭೇಟಿ

ಪರಸ್ಪರ ತೀವ್ರ ಟೀಕೆಯಿಂದ ದೂರವಾಗಿದ್ದ ನಾಯಕರು

ಡಿ.ಎಂ.ಕುರ್ಕೆ ಪ್ರಶಾಂತ
Published 11 ನವೆಂಬರ್ 2025, 5:19 IST
Last Updated 11 ನವೆಂಬರ್ 2025, 5:19 IST
ಸುಧಾಕರ್ ಮತ್ತು ವಿಜಯೇಂದ್ರ ಭೇಟಿಯ ಕ್ಷಣ
ಸುಧಾಕರ್ ಮತ್ತು ವಿಜಯೇಂದ್ರ ಭೇಟಿಯ ಕ್ಷಣ   

ಚಿಕ್ಕಬಳ್ಳಾಪುರ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಸಂಸದ ಡಾ.ಕೆ.ಸುಧಾಕರ್ ಸರಿಸುಮಾರು ಒಂದು ವರ್ಷದ ನಂತರ ಪರಸ್ಪರ ಭೇಟಿ ಆಗಿದ್ದಾರೆ. ಈ ಭೇಟಿಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 

‍ಪರಸ್ಪರ ತೀವ್ರ ಟೀಕೆಯ ಕಾರಣ ಈ ಇಬ್ಬರೂ ನಾಯಕರು ದೂರವಿದ್ದರು. ವಿಜಯೇಂದ್ರ ಹಲವು ಬಾರಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಭೇಟಿ ನೀಡಿದ್ದರೂ ಆ ಕಾರ್ಯಕ್ರಮಗಳಲ್ಲಿ ಸುಧಾಕರ್ ದೂರವುಳಿದಿದ್ದರು. ಈಗ ಈ ಇಬ್ಬರು ನಾಯಕರ ಭೇಟಿ ಕಾರ್ಯಕರ್ತರಲ್ಲಿ ಸಂಚಲನಕ್ಕೆ ಕಾರಣವಾಗಿದೆ. 

ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಅವರ ಸಿಂಡಿಕೇಟ್ ಡಾ.ಕೆ.ಸುಧಾಕರ್‌ ಅವರಿಗೆ ಲೋಕಸಭೆ ಚುನಾವಣೆ ಟಿಕೆಟ್ ನೀಡಲು ಅಡ್ಡಿಯಾಗಿತ್ತು. ಯಲಹಂಕ ಶಾಸಕ ಎಸ್‌.ಆರ್.ವಿಶ್ವನಾಥ್ ಅವರ ಪುತ್ರ ಅಲೋಕ್‌ಗೆ ಟಿಕೆಟ್ ನೀಡಲು ಪ್ರಯತ್ನಿಸಿತ್ತು. ಲೋಕಸಭೆ ಚುನಾವಣೆಯ ಟಿಕೆಟ್ ವಿಚಾರವಾಗಿ ವಿಜಯೇಂದ್ರ, ಡಾ.ಕೆ.ಸುಧಾಕರ್ ವಿರುದ್ಧವಿದ್ದರು. ಆಗ ಚಿಕ್ಕಬಳ್ಳಾಪುರ ಜಿಲ್ಲೆಯ ಬಿಜೆಪಿಯಲ್ಲಿ ಇದು ತೀವ್ರ ಚರ್ಚೆಗೆ ಕಾರಣವೂ ಆಗಿತ್ತು. 

ADVERTISEMENT

ಆದರೆ ಸುಧಾಕರ್ ಅವರ ಸಂಘಟನಾ ಶಕ್ತಿ ಮತ್ತು ಬಸವರಾಜ ಬೊಮ್ಮಾಯಿ ಅವರು ಸುಧಾಕರ್ ಪರವಾಗಿ ನಿಲುವು ತಾಳಿದ ಕಾರಣ ಅಂದು ಸುಧಾಕರ್ ಅವರಿಗೆ ಟಿಕೆಟ್ ದೊರೆಯಿತು. ವಿಜಯೇಂದ್ರ ತಂಡಕ್ಕೆ ಹಿನ್ನಡೆ ಆಯಿತು. ಚುನಾವಣೆಯಲ್ಲಿ ಸುಧಾಕರ್ ಗೆಲುವು ಸಹ ಸಾಧಿಸಿ ತಮ್ಮ ಸಾಮರ್ಥ್ಯ ತೋರಿದರು.

ಈ ನಡುವೆ ಬಿಜೆಪಿ ಜಿಲ್ಲಾ ಅಧ್ಯಕ್ಷರ ಆಯ್ಕೆ ಈ ಇಬ್ಬರು ನಾಯಕರ ನಡುವೆ ಮತ್ತೊಂದು ಸಮರಕ್ಕೂ ಕಾರಣವಾಯಿತು.

2025ರ ಜ.29ರಂದು ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಯುವ ಮುಖಂಡ ಸಂದೀಪ್ ರೆಡ್ಡಿ ಅವರನ್ನು ಪಕ್ಷವು ನೇಮಿಸಿತ್ತು. ಡಾ.ಕೆ.ಸುಧಾಕರ್, ಸಂದೀಪ್ ರೆಡ್ಡಿ ನೇಮಕಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದರು. ವಿಜಯೇಂದ್ರ ಕಾರ್ಯವೈಖರಿಯನ್ನು ಖಂಡಿಸಿದರು.

ಬಿಜೆಪಿ ಕೇಂದ್ರ ನಾಯಕರಿಗೆ ದೂರು ಸಹ ನೀಡಿದರು. ಇದಕ್ಕೆ ಪ್ರತಿಯಾಗಿ ವಿಜಯೇಂದ್ರ ಬಣದ ನಾಯಕರು ಸಹ ಸುಧಾಕರ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು.  

ನಂತರ ಫೆ.10ರಂದು ವರಿಷ್ಠರು ಜಿಲ್ಲಾ ಅಧ್ಯಕ್ಷರ ನೇಮಕಕ್ಕೆ ತಡೆ ನೀಡಿದ್ದರು. ಜಿಲ್ಲಾಧ್ಯಕ್ಷರ ಆಯ್ಕೆಗೆ ತಡೆ ನೀಡಿದ ಆದೇಶದ ಪ್ರತಿಯನ್ನು ಸುಧಾಕರ್‌ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ವಿಜಯೇಂದ್ರ ವಿರುದ್ಧ ಸುಧಾಕರ್ ಅವರಿಗೆ ದೊರೆತ ಜಯ ಎಂಬಂತೆಯೇ ಬಿಂಬಿಸಿ, ಸಂಭ್ರಮಿಸಿದರು. 

ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ನೇತೃತ್ವದಲ್ಲಿ ಸಂಘಟಿಸಿದ ಜನಾಕ್ರೋಶ ಯಾತ್ರೆಯಲ್ಲಿಯೂ ಸುಧಾಕರ್ ಅವರು ಭಾಗಿ ಆಗಲಿಲ್ಲ. ಇದಿಷ್ಟೇ ಅಲ್ಲ ವಿಜಯೇಂದ್ರ ಚಿಂತಾಮಣಿ ಮತ್ತು ಬಾಗೇಪಲ್ಲಿಗೆ ಭೇಟಿ ನೀಡಿದ ಸಮಯದಲ್ಲಿ ಜಿಲ್ಲೆಯ ಎಲ್ಲ ಬಿಜೆಪಿ ನಾಯಕರೂ ಅವರ ಜೊತೆಯಲ್ಲಿದ್ದರು. ಆದರೆ ಡಾ.ಕೆ.ಸುಧಾಕರ್ ಮಾತ್ರ ವಿಜಯೇಂದ್ರ ಅವರಿಂದ ಅಂತರ ಕಾಯ್ದುಕೊಂಡರು. 

ಹೀಗೆ ಸುಮಾರು ಒಂದು ವರ್ಷದಿಂದ ಸುಧಾಕರ್ ಮತ್ತು ವಿಜಯೇಂದ್ರ ಪರಸ್ಪರ ಮುಖಾಮುಖಿ ಆಗಿರಲಿಲ್ಲ. ಈಗ ವಿಜಯೇಂದ್ರ ಜನ್ಮದಿನಕ್ಕೆ ಶುಭಕೋರಲು ‌ಸುಧಾಕರ್ ಅವರು ವಿಜಯೇಂದ್ರ ಅವರನ್ನು ಭೇಟಿ ಆಗಿದ್ದಾರೆ. ಈ ಭೇಟಿ ಕಾರ್ಯಕರ್ತರ ನಡುವೆ ಚರ್ಚೆಗೆ ಕಾರಣವಾಗಿದೆ. 

ಈ ಭೇಟಿಯ ಚಿತ್ರವನ್ನು ವಿಜಯೇಂದ್ರ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆ ಚಿತ್ರಗಳು ಚಿಕ್ಕಬಳ್ಳಾಪುರ ಬಿಜೆಪಿಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. 

ಬಯಲು ಸೀಮೆ; ಸುಧಾಕರ್ ಬಲ

ಬಯಲು ಸೀಮೆಯ ಕೋಲಾರ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಡಾ.ಕೆ.ಸುಧಾಕರ್ ತನ್ನದೇ ಆದ ಹಿಡಿತ ಮತ್ತು ಬೆಂಬಲಿಗರನ್ನು ಹೊಂದಿದ್ದಾರೆ. ಸಂಪನ್ಮೂಲ ಮತ್ತು ಸಂಘಟನೆಯ ಕಾರಣಕ್ಕೆ ಸುಧಾಕರ್ ಈ ಜಿಲ್ಲೆಗಳಲ್ಲಿ ಬಿಜೆಪಿಗೆ ಅಗ್ರ ನಾಯಕ ಎನಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.