ADVERTISEMENT

ಪೂರ್ವಿಕರ ಸಮಾಧಿ ಹುಡುಕಿ ನಂದಿಗಿರಿಧಾಮಕ್ಕೆ ಬಂದ ಬ್ರಿಟನ್ ಪ್ರಜೆಗಳು!

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 2:55 IST
Last Updated 11 ಸೆಪ್ಟೆಂಬರ್ 2025, 2:55 IST
<div class="paragraphs"><p>ಸೋಫಿಯಾ ಗ್ಯಾರೆಟ್ ಅವರ ಸಮಾಧಿ ಮೇಲಿನ ಬರಹ ಓದುತ್ತಿರುವ ಅವರ ಸಂಬಂಧಿ</p></div>

ಸೋಫಿಯಾ ಗ್ಯಾರೆಟ್ ಅವರ ಸಮಾಧಿ ಮೇಲಿನ ಬರಹ ಓದುತ್ತಿರುವ ಅವರ ಸಂಬಂಧಿ

   

ಚಿಕ್ಕಬಳ್ಳಾಪುರ: ತಮ್ಮ ಪೂರ್ವಿಕರ ಸಮಾಧಿ ಹುಡುಕಾಟದಲ್ಲಿದ್ದ ಬ್ರಿಟಿಷ್ ಪ್ರಜೆಗಳಿಗೆ ತಾಲ್ಲೂಕಿನ ನಂದಿಗಿರಿಧಾಮದಲ್ಲಿ ಕೊನೆಗೂ ಸಮಾಧಿ ಪತ್ತೆ ಆಗಿದೆ! ಒಂದೂವರೆ ಶತಮಾನದ ಹಿಂದೆ ಇಲ್ಲಿ ಸಮಾಧಿಯಾಗಿದ್ದ ತಮ್ಮ ಪೂರ್ವಿಕರಿಗೆ ಈಗ ಕಂಬನಿ ಮಿಡಿದಿದ್ದಾರೆ. 

ಬ್ರಿಟಿಷರ ಆಡಳಿತದಲ್ಲಿ ಶಿಕ್ಷಣ ಇಲಾಖೆ ನಿರ್ದೇಶಕರಾಗಿದ್ದ ಜಾನ್ ಗ್ಯಾರೆಟ್ ಅವರ ಪತ್ನಿ ಸೋಫಿಯಾ ಗ್ಯಾರೆಟ್ ಅವರ ಸಮಾಧಿ ಗಿರಿಧಾಮದ ಬ್ಯಾಂಬೂ ಹೌಸ್ ಪ್ರದೇಶದ ಒಂದು ಮೂಲೆಯಲ್ಲಿದೆ. ಈ ಸಮಾಧಿಯನ್ನು ಹುಡುಕಿ ಅವರ ಕುಟುಂಬ ಸದಸ್ಯರು, ಸಂಬಂಧಿಕರು ಗಿರಿಧಾಮಕ್ಕೆ ಭೇಟಿ ನೀಡಿದ್ದರು.

ADVERTISEMENT

ಕೆಲವು ತಿಂಗಳ ಹಿಂದೆಯೂ ಗಿರಿಧಾಮಕ್ಕೆ ಬಂದಿದ್ದ ಗ್ಯಾರೆಟ್ ಕುಟುಂಬದವರು  ಸೋಫಿಯಾ ಸಮಾಧಿ ಹುಡುಕಿದ್ದರು. ಆದರೆ ಪತ್ತೆ ಆಗಿರಲಿಲ್ಲ. ಆದರೆ ಈ ಬಾರಿಯ ಭೇಟಿಯಲ್ಲಿ ಸಮಾಧಿ ಪತ್ತೆಯಾಗಿದೆ.

‘ನಂದಿದುರ್ಗದಲ್ಲಿ ಏಪ್ರಿಲ್ 10, 1867 ರಂದು ನಿಧನರಾದ ಜಾನ್ ಗ್ಯಾರೆಟ್‌ರ ಪ್ರಿಯ ಪತ್ನಿ ಸೋಫಿಯಾ ಗ್ಯಾರೆಟ್ ಅವರ ನೆನಪಿನಲ್ಲಿ’ ಎಂದು ಸಮಾಧಿಯ ಫಲಕದ ಮೇಲೆ ಬರೆಯಲಾಗಿದೆ.

ಗ್ಯಾರೆಟ್ ದಂಪತಿ ತಮ್ಮ ಮಗಳು ಮತ್ತು ಅಳಿಯನ ಜೊತೆಯಲ್ಲಿ ನಂದಿಬೆಟ್ಟದ ಮೇಲಿನ ತಮ್ಮ ಮನೆಯಲ್ಲಿ ತಂಗುತ್ತಿದ್ದರು. ಗ್ಯಾರೆಟ್ ದಂಪತಿಯ ಅಳಿಯ ಬಿ.ಎಲ್. ರೈಸ್ ಶಾಸನ ಪಿತಾಮಹ ಎಂದೇ ಹೆಸರಾದವರು.

1791 ರಿಂದ 1881 ರವರೆಗೆ ನಂದಿಬೆಟ್ಟ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತ್ತು. ಬ್ರಿಟಿಷರ ಪಾಲಿಗಿದು ‘ಲಿಟಲ್ ಇಂಗ್ಲೆಂಡ್’ ಎನಿಸಿತ್ತು. ಬ್ರಿಟಿಷರು ತಂಗಲು ಇಲ್ಲಿ ಬಂಗಲೆಗಳನ್ನು ನಿರ್ಮಿಸಿದ್ದರು. ‌‌‌‌‌‌ನಂದಿಗಿರಿಧಾಮದ ತಪ್ಪಲಿನಲ್ಲಿರುವ ಸುಲ್ತಾನಪೇಟೆ ಗ್ರಾಮದ ಬಳಿ ಬ್ರಿಟ್ರಿಷರ ಸಮಾಧಿಗಳೂ ಇವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.