ADVERTISEMENT

ಬೀಚಗಾನಹಳ್ಳಿ ಕ್ರಾಸ್ ಬಳಿ ಬಸ್‌ ನಿಲುಗಡೆಗೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 5:45 IST
Last Updated 2 ಡಿಸೆಂಬರ್ 2021, 5:45 IST
ಗುಡಿಬಂಡೆ ತಾಲ್ಲೂಕಿನ ಹೆದ್ದಾರಿ 7ರ ಬೀಚಗಾನಹಳ್ಳಿ ಕ್ರಾಸ್ ಮೇಲುಸೇತುವೆ ಬಳಿ ಸಾರಿಗೆ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ರಸ್ತೆತಡೆ ನಡೆಸಿದರು
ಗುಡಿಬಂಡೆ ತಾಲ್ಲೂಕಿನ ಹೆದ್ದಾರಿ 7ರ ಬೀಚಗಾನಹಳ್ಳಿ ಕ್ರಾಸ್ ಮೇಲುಸೇತುವೆ ಬಳಿ ಸಾರಿಗೆ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ರಸ್ತೆತಡೆ ನಡೆಸಿದರು   

ಗುಡಿಬಂಡೆ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲಾ ಕಾಲೇಜುಗಳಿಗೆ ಹೋಗಲು ಸರಿಯಾದ ಬಸ್ ಸೌಲಭ್ಯವಿಲ್ಲದೆ ಕಂಗಾಲಾಗಿದ್ದಾರೆ. ಸಮರ್ಪಕ ಸಾರಿಗೆ ಸೌಲಭ್ಯ ಕಲ್ಪಿಸುವಂತೆ‌ ಒತ್ತಾಯಿಸಿ ತಾಲ್ಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿ ವಿದ್ಯಾರ್ಥಿಗಳು ರಸ್ತೆತಡೆದು ಪ್ರತಿಭಟನೆ ನಡೆಸಿದರು.

ಹೆದ್ದಾರಿ 7ರ ಮಾರ್ಗದಲ್ಲಿ ಸಂಚರಿಸುವ ಕೆಎಸ್ಆರ್‌ಟಿಸಿ ಬಸ್‌ ಬೀಚಗಾನಹಳ್ಳಿ ಕ್ರಾಸ್ ಬಳಿ ನಿಲುಗಡೆ ಮಾಡುತ್ತಿಲ್ಲ. ಚಿಕ್ಕಬಳ್ಳಾಪುರ ಹಾಗೂ ಬಾಗೇಪಲ್ಲಿ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಈ ವಿಚಾರವಾಗಿ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನೆ ಅಗಿಲ್ಲ. ಕೆಲವು ಚಾಲಕರು ವಿದ್ಯಾರ್ಥಿ­ಗಳನ್ನು ನೋಡಿ ನಿಲುಗಡೆ ಮಾಡುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಸಮಯಕ್ಕೆ ಸರಿಯಾಗಿ ಹೋಗಲು ಸಾಧ್ಯವಾಗದೇ ಪಾಠಪ್ರವಚನಗಳಿಗೆ ಅಡಚಣೆಯಾಗುತ್ತಿದೆ. ಅವ್ಯವಸ್ಥೆ ಸರಿಪಡಿಸದಿದ್ದರೆ ಘಟಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ವಿದ್ಯಾರ್ಥಿನಿ ಸಹನಾ ರೆಡ್ಡಿ ಎಚ್ಚರಿಸಿದರು.

ADVERTISEMENT

ವಿದ್ಯಾರ್ಥಿ ಡಿನ್ನಹಳ್ಳಿ ನವೀನ್ ಮಾತನಾಡಿ, ಹಲವಾರು ವರ್ಷಗಳಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಶಿಕ್ಷಣ ಪಡೆದು ಉನ್ನತ ಹುದ್ದೆಗೇರಬೇಕೆಂಬ ಹಲವಾರು ಹಳ್ಳಿಗಳ ಪ್ರತಿಭಾವಂತ ವಿದ್ಯಾರ್ಥಿಗಳ ಆಸಕ್ತಿ ಸರ್ಕಾರದ ಅಸಮರ್ಪಕ ಬಸ್ ಸೌಲಭ್ಯದಿಂದ ಕಮರುತ್ತಿದೆ ಎಂದರು.

ವಿದ್ಯಾರ್ಥಿ ಮುಖಂಡರಾದ ಪ್ರಮೋದ್, ಶಿಲ್ಪಾ, ಮೌನಿಕಾ, ಅಮೃತಾ, ಶ್ವೇತಾ, ಸ್ವಾತಿ, ಭರತ್, ಅಶೋಕ್, ವೆಂಕಟೇಶ್, ಅಮರ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.