ADVERTISEMENT

ಗೌರಿಬಿದನೂರು: ಬಸ್‌ ತಂಗುದಾಣ ಭಾರೀ ಅಧ್ವಾನ

ಕೆ.ಎನ್‌.ನರಸಿಂಹಮೂರ್ತಿ
Published 7 ಜುಲೈ 2025, 5:57 IST
Last Updated 7 ಜುಲೈ 2025, 5:57 IST
ಪೋತೇನಹಳ್ಳಿ ತಂಗುದಾಣದ ಸ್ಥಿತಿ
ಪೋತೇನಹಳ್ಳಿ ತಂಗುದಾಣದ ಸ್ಥಿತಿ   

ಗೌರಿಬಿದನೂರು: ನಗರದಿಂದ ಬೆಂಗಳೂರಿಗೆ ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣಿಕರಿಗಾಗಿ ನಿರ್ಮಿಸಿರುವ ತಂಗುದಾಣಗಳು ನಿರ್ಲಕ್ಷ್ಯದಿಂದ ಅವಸಾನದತ್ತ ಸಾಗಿವೆ.

ಸಾರಿಗೆ ಬಸ್‌ಗಳಲ್ಲಿ ಗ್ರಾಮಗಳಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಬಿಸಿಲು ಮತ್ತು ಮಳೆಗಾಲದಲ್ಲಿ ರಕ್ಷಣೆ ಹಾಗೂ ವಿಶ್ರಾಂತಿ ಪಡೆಯಲು ಆಶ್ರಯವಾಗಬೇಕಿದ್ದ ತಂಗುದಾಣಗಳು ನಿರ್ವಹಣೆ ಕೊರತೆಯಿಂದ ಪ್ರಯಾಣಿಕರ ಪ್ರಯೋಜನಕ್ಕೆ ಬಾರದೆ ಪಾಳು ಬಿದ್ದಿವೆ.

ತಂಗುದಾಣಗಳಲ್ಲಿ ಗಿಡಗಂಟಿಗಳು ಬೆಳೆದಿವೆ. ತ್ಯಾಜ್ಯ ತುಂಬಿ ವರ್ಷಗಳೇ ಕಳೆದಿದೆ. ಕುಳಿತುಕೊಳ್ಳುವ ಆಸನಗಳು ತುಕ್ಕು ಹಿಡಿಯುತ್ತಿವೆ. ಕೆಲವೆಡೆ ಇದ್ದೂ ಇಲ್ಲದಂತಾಗಿವೆ. ಆದರೂ ಸಂಬಂಧಪಟ್ಟವರು ಸೂಕ್ತ ನಿರ್ವಹಣೆ ಮಾಡಿಲ್ಲ. ಇದರಿಂದ ತಂಗುದಾಣಗಳು ಸಂಪೂರ್ಣ ಶಿಥಿಲವಾಗಿ, ಪ್ರಯಾಣಿಕರು ಕೂರಲು ಆಸನಗಳಿಲ್ಲದ ಹಾಗೂ ದುರ್ನಾತಕ್ಕೆ ನಿಲ್ಲಲು ಸಹ ಆಗದ ಸ್ಥಿತಿ ಇದೆ.

ADVERTISEMENT

ತಾಲ್ಲೂಕಿನ ಗಡಿ‌ಭಾಗವಾದ ತಿಪ್ಪಗಾನಹಳ್ಳಿಯಿಂದ ಆಂಧ್ರದಗಡಿ ಪ್ರದೇಶ ಕುಡುಮಲಕುಂಟೆಯವರೆಗೆ ರಾಜ್ಯ ಹೆದ್ದಾರಿ ಪ್ರಾಧಿಕಾರದಿಂದ ಸುಸಜ್ಜಿತ ರಸ್ತೆ ನಿರ್ಮಿಸಲಾಗಿದೆ. ಈ ರಸ್ತೆ ಮಾರ್ಗದಲ್ಲಿ ಬರುವ ಗ್ರಾಮಗಳ‌ ಬಳಿ ಪ್ರಾಧಿಕಾರದಿಂದ ನಿರ್ಮಾಣವಾಗಿರುವ ತಂಗುದಾಣಗಳು ತೀರಾ ಅಧ್ವಾನ ಎನಿಸಿವೆ. ಕೆಲವು ಕಡೆಗಳಲ್ಲಿ ಬಳಕೆಗೆ ಬಾರದೆ ಅನೈತಿಕ ಚಟುವಟಿಕೆ ತಾಣವಾಗಿವೆ.

ತಾಲ್ಲೂಕಿನ ಗಡಿ‌ಭಾಗದಿಂದ ಆರಂಭವಾಗಿರುವ ರಸ್ತೆಯು ಗೌರಿಬಿದನೂರು ನಗರದ ಮೂಲಕ ಹಾದು ಹೋಗಿ‌ ನೆರೆಯ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತವೆ. ಈ ರಸ್ತೆ ಸುಮಾರು 32 ಕಿ.ಮೀ ಇದೆ.

ರಸ್ತೆಯಲ್ಲಿ ತಿಪ್ಪಗಾನಹಳ್ಳಿ, ಬಂದಾರ್ಲಹಳ್ಳಿ, ಕಲ್ಲಿನಾಯಕನಹಳ್ಳಿ, ‌ಬಸವಾಪುರ, ಅಲೀಪುರ ಕ್ರಾಸ್, ತೊಂಡೇಬಾವಿ ರೈಲ್ವೆ ನಿಲ್ದಾಣ, ಕಾಮಲಾಪುರ, ಪೋತೇನಹಳ್ಳಿ, ಹುಸೇನ್ ಪುರ ಗೇಟ್, ಅಲಕಾಪುರ ಗೇಟ್, ಮಿನಿವಿಧಾನಸೌಧ, ಸಕ್ಕರೆ ಕಾರ್ಖಾನೆ, ಎಪಿಎಂಸಿ ಮಾರುಕಟ್ಟೆ, ಗೌರಿಬಿದನೂರು ‌ನಗರ, ಕಲ್ಲೂಡಿ, ಹಳೆ ಆರ್‌ಟಿಒ ಕಚೇರಿ, ಚಿಕ್ಕಕುರುಗೋಡು, ವಿದುರಾಶ್ವತ್ಥ, ದೊಡ್ಡಕುರುಗೋಡು ಮತ್ತು ಕುಡುಮಲಕುಂಟೆ ಸೇರಿದಂತೆ ಸುಮಾರು 20 ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗಗಳಿವೆ.

ಈ‌ ಪ್ರದೇಶಗಳಲ್ಲಿ ಸ್ಥಳೀಯ ‌ಪ್ರಯಾಣಿಕರ ಅನುಕೂಲಕ್ಕಾಗಿ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಆದರೆ ಇವು ಇದ್ದೂ ಇಲ್ಲದಂತಿವೆ. ಪ್ರಯಾಣಿಕರ ಬಳಕೆಗೆ ಬಾರದಂತೆ ಇವೆ.

ಇದಿಷ್ಟೇ ಅಲ್ಲ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ನಿರ್ಮಿಸಿರುವ ತಂಗುದಾಣಗಳು ಸಹ ಇದೇ ಸ್ಥಿತಿಯಲ್ಲಿದೆ. ಈ ತಂಗುದಾಣಗಳಲ್ಲಿ ಪೋಸ್ಟರ್ ಅಂಟಿಸುವುದು, ಮದ್ಯಪಾನ, ದೂಮಪಾನಕ್ಕೆ ಬಳಕೆ ಆಗುತ್ತಿವೆ. 

ತೊಂಡೇಬಾವಿ ತಂಗುದಾಣದ ಸ್ಥಿತಿ
ತ್ಯಾಜ್ಯದ ಸ್ಥಳವಾಗಿದೆ
ತೊಂಡೇಬಾವಿ ಬಳಿ ನಿರ್ಮಿಸಿರುವ ತಂಗುದಾಣ ಕೇಂದ್ರ ಸ್ಥಾನದಿಂದ ದೂರದಲ್ಲಿದೆ. ಅಲ್ಲಿ ಯಾವುದೇ ಬಸ್ ನಿಲ್ಲಿಸುವುದಿಲ್ಲ. ಅಲ್ಲಿಗೆ ಯಾವುದೇ ಪ್ರಯಾಣಿಕರು ಹೋಗುವುದಿಲ್ಲ. ಈಗ ತ್ಯಾಜ್ಯ ಎಸೆಯುವ ಸ್ಥಳವಾಗಿದೆ. -ಸಂದೀಪ್ ತೊಂಡೇಬಾವಿ 
ಪಾಳು ಬೀಳುತ್ತಿವೆ
ಅಧಿಕಾರಿಗಳು ಬಹುತೇಕ ಕಡೆಗಳಲ್ಲಿ ಸರಿಯಾದ ಜಾಗದಲ್ಲಿ ತಂಗುದಾಣ ನಿರ್ಮಾಣ ಮಾಡಿಲ್ಲ. ಪ್ರಯಾಣಿಕರು ತಂಗುದಾಣದ ಕಡೆ ತಲೆ ಕೂಡ ಹಾಕುತ್ತಿಲ್ಲ. ಜನ ಓಡಾಡದ ಮತ್ತು ದೂರದಲ್ಲಿ ನಿರ್ಮಾಣ ಮಾಡಿರುವುದರಿಂದ ತಂಗುದಾಣಗಳು ಪಾಳು ಬೀಳುತ್ತಿವೆ-ಚಿಕ್ಕಣ್ಣ, ತೊಂಡೇಬಾವಿ
ನಿಲ್ದಾಣದಿಂದ ದೂರ
ಕೆಲವು ಗ್ರಾಮಗಳ‌ ಬಳಿ‌‌ ಬಸ್ ನಿಲ್ದಾಣದಿಂದ 150 ರಿಂದ 200 ಮೀ‌ಟರ್ ದೂರದಲ್ಲಿ ತಂಗುದಾಣ ನಿರ್ಮಿಸಲಾಗಿದೆ. ತಂಗುದಾಣಗಳು ಬಳಕೆಯಿಂದ ದೂರ ಉಳಿದಿರುವ ಕಾರಣ ಅವು ಕಸದ ತೊಟ್ಟಿಗಳಾಗಿವೆ. ದೂಮಪಾನ ಮತ್ತು‌ ಮದ್ಯಪಾನ ಮಾಡುವವರು ಇಲ್ಲಿ ಕಾಯಂ ಇರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.