ಗೌರಿಬಿದನೂರು: ನಗರದ ಬೈಪಾಸ್‌ನಲ್ಲಿ ಪ್ರತಿಷ್ಠಾಪಿಸಿದ್ದ ರುದ್ರ ಮಹಾಗಣಪತಿಯ ವಿಸರ್ಜನೆ ‘ಗಂಗಾ ವಿಲೀನ’ವು ಭಾನುವಾರ ಅಪಾರ ಭಕ್ತರ ನಡುವೆ ಅದ್ದೂರಿಯಾಗಿ ನಡೆಯಿತು.
ಬೈಪಾಸ್ ಗಣೇಶ ಎಂದೇ ಪ್ರಸಿದ್ಧಿ ಪಡೆದಿರುವ ಈ ಗಣೇಶ ಮೂರ್ತಿಯನ್ನು ಕಳೆದ 22 ವರ್ಷದಿಂದ ಪ್ರತಿಷ್ಠಾಪಿಸಲಾಗುತ್ತಿದೆ. ಈ ಬಾರಿ 22ನೇ ವರ್ಷದ ಉತ್ಸವವಾದ ಕಾರಣ 22 ಅಡಿ ಎತ್ತರದ ಪ್ರಣವ ರುದ್ರ ಮಹಾ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿತ್ತು.
ಭಾನುವಾರ ನಗರದ ಪ್ರಮುಖ ಬೀದಿಗಳಲ್ಲಿ ವಿಸರ್ಜನಾ ಮೆರವಣಿಗೆ ಪ್ರಾರಂಭ ಆಗುತ್ತಿದ್ದಂತೆ ಅಪಾರ ಸಂಖ್ಯೆಯ ಭಕ್ತರು ಹರಿದು ಬಂದರು. ಚಿಕ್ಕಬಳ್ಳಾಪುರ ರಸ್ತೆಯ ದರ್ಗಾ ಮುಂಭಾಗ, ಗಾಂಧಿ ವೃತ್ತ, ಬಿ.ಆರ್ ಅಂಬೇಡ್ಕರ್ ವೃತ್ತ, ಬಿ.ಎಚ್. ರಸ್ತೆ, ನಾಗಯ್ಯರೆಡ್ಡಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ನಾಗಪ್ಪ ಬ್ಲಾಕ್, ಬೈಪಾಸ್‌ನಲ್ಲಿ ಮೆರವಣಿಗೆ ಸಾಗಿತು.
ಸಹಸ್ರಾರು ಜನರು ರಸ್ತೆಗಳಲ್ಲಿ ಕಿಕ್ಕಿರಿದು ಸೇರಿದ್ದರು. ಗಣೇಶನ ಘೋಷಣೆಗಳನ್ನು ಕೂಗುತ್ತಾ ಕುಣಿದು ಕುಪ್ಪಳಿಸಿದರು. ವಿಶೇಷವಾಗಿ ಕಾಲೇಜು ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ಅವರ ನೃತ್ಯ ನೋಡುಗರ ಕಣ್ಮನ ಸೆಳೆಯಿತು. ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರುಗು ತುಂಬಿದವು.
ದರ್ಗಾ ಮತ್ತು ಮಸೀದಿ ಮುಂಭಾಗ ಗಣೇಶನ ಮೆರವಣಿಗೆ ತಲುಪುತ್ತಿದ್ದಂತೆ ಮುಸ್ಲಿಮರು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಮೆರವಣಿಗೆಯಲ್ಲಿ ಶಾಸಕ ಕೆ.ಎಚ್ ಪುಟ್ಟಸ್ವಾಮಿ ಗೌಡ ಮತ್ತು ಸಂಸದ ಡಾ.ಕೆ. ಸುಧಾಕರ್, ಬಿಜೆಪಿ ಮುಖಂಡ ರವಿನಾರಾಯಣ ರೆಡ್ಡಿ, ಜೆಡಿಎಸ್ ಮುಖಂಡ ನರಸಿಂಹ ಮೂರ್ತಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಲಡ್ಡು ಹರಾಜು: ಗಂಗಾ ವಿಲೀನಾ ಕಾರ್ಯಕ್ರಮಕ್ಕೂ ಮುನ್ನ ಗಣೇಶ ಲಡ್ಡು ಹರಾಜು ಪ್ರಕ್ರಿಯೆ ನಡೆಯಿತು. ತೊಂಡೇಬಾವಿ ಗ್ರಾಮದ ಕೃಷ್ಣಾರೆಡ್ಡಿ, ದಾಖಲೆಯ 4.10 ಲಕ್ಷಕ್ಕೆ ಹರಾಜು ಕೂಗಿ ಲಡ್ಡುವನ್ನು ತಮ್ಮದಾಗಿಸಿಕೊಂಡರು.
ಮದ್ಯದಂಗಡಿ ಬಂದ್: ಮುನ್ನೆಚ್ಚರಿಕೆ ಕ್ರಮವಾಗಿ ಭಾನುವಾರ ಬೆಳಿಗ್ಗೆ 6ರಿಂದ ಸೋಮವಾರ ಬೆಳಿಗ್ಗೆ 6ರವರೆಗೂ ನಗರಸಭೆ ವ್ಯಾಪ್ತಿಯಲ್ಲಿನ ಎಲ್ಲಾ ಮದ್ಯದಂಗಡಿಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.