ADVERTISEMENT

ಜಾತಿ ನಿಂದನೆ: ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2022, 4:29 IST
Last Updated 28 ಆಗಸ್ಟ್ 2022, 4:29 IST

ಚಿಕ್ಕಬಳ್ಳಾಪುರ: ವ್ಯಕ್ತಿಯೊಬ್ಬರಿಗೆ ಜಾತಿನಿಂದನೆ ಮಾಡಿದ ಆರೋಪದ ಮೇಲೆ ಚಿಕ್ಕಬಳ್ಳಾಪುರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಅನಿಲ್ ಮತ್ತು ರುದ್ರಪ್ಪ ಬಂಧಿತರು. ಅನಿಲ್ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದರೆ ರುದ್ರಪ್ಪ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ.

ಪ್ರಕರಣದ ಹಿನ್ನೆಲೆ: ತಾಲ್ಲೂಕಿನ ಶೆಟ್ಟಿಗೆರೆ ಗ್ರಾಮದ ಶ್ರೀನಿವಾಸ್ ಖಾಸಗಿ ಹಣಕಾಸು ಸಂಸ್ಥೆಯೊಂದರಿಂದ ಬೈಕ್ ಸಾಲ ಪಡೆದಿದ್ದರು. ಇನ್ನು ಎರಡು ಸಾಲದ ಕಂತುಗಳ ಪಾವತಿ ಮಾತ್ರ ಬಾಕಿ ಇದ್ದವು. ಈ ನಡುವೆ ಅವರಿಗೆ ಕರೆ ಮಾಡಿದ ರುದ್ರಪ್ಪ ಎಂಬುವವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅನಿಲ್ ಎನ್ನುವ ವಕೀಲರೊಬ್ಬರಿಗೆ ಕಾನ್ಪರೆನ್ಸ್ ಕಾಲ್ ಸಹ ಹಾಕಿದ್ದಾರೆ. ಅವರು ಶ್ರೀನಿವಾಸ್ ಅವರನ್ನು ಜಾತಿ ನಿಂದನೆ ಮಾಡಿದ್ದಾರೆ. ಈ ಸಂಭಾಷಣೆಯನ್ನು ಶ್ರೀನಿವಾಸ್ ರೆಕಾರ್ಡ್ ಮಾಡಿಕೊಂಡಿದ್ದಾರೆ.

ADVERTISEMENT

ನಂತರ ಶ್ರೀನಿವಾಸ್, ರುದ್ರಪ್ಪ ಮತ್ತು ಅನಿಲ್ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದರು. ಆರೋಪಿಗಳ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಬೆಂಗಳೂರಿನಲ್ಲಿ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಈ ಇಬ್ಬರನ್ನು ಬಂಧಿಸಿದ್ದಾರೆ.

‘ನಾನು ತಮಟೆ ಬಾರಿಸುವ ಕೆಲಸ ಮಾಡುತ್ತೇನೆ. ಬೈಕ್ ಸಾಲ ಪಡೆದಿದ್ದೆ. ಎರಡು ಕಂತುಗಳು ಮಾತ್ರ ಬಾಕಿ ಇದ್ದವು. ಒಂದು ಚೆಕ್‌ಬೌನ್ಸ್ ಆಗಿತ್ತು. ಒಟ್ಟು ₹ 11 ಸಾವಿರ ಪಾವತಿಸಬೇಕಾಗಿತ್ತು. ಈ ನಡುವೆ ರುದ್ರಪ್ಪ ಎಂಬುವವರು ಪೊಲೀಸ್ ಠಾಣೆಯಿಂದ ಎಂದು ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದರು. ನಂತರ ವಕೀಲರು ಎಂದು ಅನಿಲ್ ಎಂಬುವವರಿಗೆ ಕಾನ್ಪರೆನ್ಸ್ ಕಾಲ್ ಮಾಡಿದರು. ಅವರು ಜಾತಿ ನಿಂದನೆ ಮಾಡಿದರು’ ಎಂದು ದೂರುದಾರ ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

ಹಣ ಪಾವತಿಸುತ್ತೇನೆ ಎಂದು ಸಮಯ ಪಡೆದಿದ್ದೆ. ‌ಅಷ್ಟರಲ್ಲಿ ಅವರು ಅವಾಚ್ಯವಾಗಿ ಬೈದರು. ಆ ಸಂಭಾಷಣೆಗಳೆಲ್ಲವೂ ನನ್ನ ಬಳಿ ಇದ್ದವು. ಜಾತಿ ನಿಂದನೆ ಮಾಡಿದ್ದು ನನ್ನ ಮನಸ್ಸಿಗೆ ಘಾಸಿ ಆಯಿತು. ಆ ಸಂಸ್ಥೆ ಸಿಬ್ಬಂದಿ ಕರೆ ಮಾಡಿ ಕ್ಷಮೆ ಕೇಳುತ್ತೇವೆ. ದೂರು ವಾಪಸ್ ಪಡೆಯಿರಿ ಎಂದರು. ಆದರೆ ನನ್ನ ಮನಸ್ಸಿಗೆ ಆದ ನೋವು ಹೆಚ್ಚು. ಪ್ರಕರಣದ ಬಗ್ಗೆ ನಾವು ಡಿವೈಎಸ್‌ಪಿ ವಿ.ಕೆ.ವಾಸುದೇವ್ ಅವರಿಗೆ ದೂರು ಸಲ್ಲಿಸಿದ್ದೆವು. ಅವರು ಈ ಬಗ್ಗೆ ಸ್ಪಂದಿಸಿದ್ದು ನ್ಯಾಯ ದೊರೆತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.