ಚಿಂತಾಮಣಿ: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗದ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ವ್ಯಾಪ್ತಿಯಲ್ಲಿ ಬರುವ ವಿವಿಧ 101 ಜಾತಿಗಳ ಜನಗಣತಿ ಮೇ 5 ರಿಂದ ಆರಂಭವಾಗಲಿದೆ. ಮನೆ ಮನೆಗೆ ಬರುವ ಗಣತಿದಾರರಿಗೆ ತಪ್ಪದೆ ತಮ್ಮ ಜಾತಿಯ ಮಾಹಿತಿ ನೀಡಬೇಕು ಎಂದು ಮಾದಿಗ ದಂಡೋರ ಜಿಲ್ಲ ಘಟಕದ ಅಧ್ಯಕ್ಷ ಎಂ.ವಿ.ರಾಮಪ್ಪ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾದಿಗ ಸಮುದಾಯದ ಮುಖಂಡರು ಜನರಲ್ಲಿ ಜಾಗೃತಿ ಮೂಡಿಸಬೇಕು. ಪರಿಶಿಷ್ಟರಲ್ಲಿ ಮಾದಿಗ ಸಮುದಾಯ ಬಹುಸಂಖ್ಯಾತವಾಗಿದೆ. ಜನಸಂಖ್ಯೆಗೆ ತಕ್ಕಂತೆ ಮೀಸಲಾತಿ ಪಡೆಯುವಲ್ಲಿ ವಂಚಿತರಾಗಿದ್ದೇವೆ. ಮೀಸಲಾತಿಯ ತಾರತಮ್ಯದ ವಿರುದ್ಧ 30 ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಮಾದಿಗ ದಂಡೋರದ ಹೋರಾಟದ ಫಲವಾಗಿಯೇ ನ್ಯಾಯಮೂರ್ತಿ ಸದಾಶಿವ ಆಯೋಗ, ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ರಚನೆಯಾಗಿತ್ತು ಎಂದರು.
ಪರಿಶಿಷ್ಟ ಜಾತಿಯಲ್ಲಿ ಬರುವ ವಿವಿಧ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ವರ್ಗೀಕರಣ ಮಾಡುವ ಸಲುವಾಗಿಯೇ ಗಣತಿ ನಡೆಯುತ್ತಿದೆ. ಯಾರಿಗೂ ಅನ್ಯಾಯವಾಗದಂತೆ ಅವರವರ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ದೊರೆಯಬೇಕು ಎಂಬುದು ನಮ್ಮ ಹೋರಾಟವಾಗಿತ್ತು. ಅಂತಿಮ ಹಂತವಾಗಿ ಮೇ 5 ರಿಂದ 17ರವರೆಗೆ ಗಣತಿ ನಡೆಯುತ್ತದೆ. ಗಣತಿದಾರರು ಬಂದಾಗ ಕಾಲಂ ನಂ 61 ರಲ್ಲಿ ಮಾದಿಗ ಎಂದೇ ನಮೂದಿಸಬೇಕು. ಆದಿದ್ರಾವಿಡ, ಆದಿಕರ್ನಾಟಕ, ಆದಿ ಆಂದ್ರ, ಜಾಂಬುವರು, ಎಕೆ, ಎಡಿ ಎಂದು ಬರೆಸಬಾರದು. ಮಾದಿಗ ಎಂದು ಬರೆಸಬೇಕು ಎಂದರು.
ಇದರಿಂದ ಖಚಿತ ಜನಸಂಖ್ಯೆ, ಸಾಮಾಜಿಕ, ಆರ್ಥಿಕ, ರಾಜಕೀಯ ಶಕ್ತಿಯ ಸೌಲಭ್ಯಗಳು ದೊರೆಯುತ್ತವೆ ಎಂದು ತಿಳಿಸಿದರು.
ಕವಾಲಿ ವೆಂಕಟರವಣಪ್ಪ ಮಾತನಾಡಿ, ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಮೂರು ದಶಕಗಳ ಹೋರಾಟ ಕೊನೆಯ ಘಟ್ಟಕ್ಕೆ ಬಂದಿದೆ. ಉಪ ಗುಂಪುಗಳನ್ನು ನಮೂದಿಸದೆ ಸರಿಯಾದ ಮಾಹಿತಿಯನ್ನು ಗಣತಿಯ ಕಾಲಂಗಳಲ್ಲಿ ಭರ್ತಿ ಮಾಡಬೇಕು. ಒಗ್ಗಟ್ಟಿನಿಂದ ಎಲ್ಲರೂ ಮಾದಿಗ ಎಂದು ಬರೆಸಬೇಕು. ಜಾತಿಗಣತಿಯ ಅರಿವು ಮೂಡಿಸಲು ಸಮುದಾಯದ ಎಲ್ಲರೂ ಕಾಳಜಿ ವಹಿಸಬೇಕು. ಮೀಸಲಾತಿ ವರ್ಗೀಕರಣದ ಗೊಂದಲ ನಿವಾರಣೆ ಆಗಬೇಕಾದರೆ ಈ ಸಮೀಕ್ಷೆ ಮುಖ್ಯವಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.