ADVERTISEMENT

ಚಿಕ್ಕಬಳ್ಳಾಪುರ: ಕಡ್ಡಾಯವಾಗಿ ರಾಸುಗಳಿಗೆ ವಿಮೆ ಮಾಡಿಸಿ

ಕೋಚಿಮುಲ್ ಚಿಕ್ಕಬಳ್ಳಾಪುರ ಶಿಬಿರ ಕಚೇರಿ ಕಟ್ಟಡ ನವೀಕರಣ ಕಾಮಗಾರಿಗೆ ಗುದ್ದಲಿ ಪೂಜೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 11:02 IST
Last Updated 16 ಜೂನ್ 2020, 11:02 IST
ನಗರದ ಎಪಿಎಂಸಿ ಆವರಣದಲ್ಲಿರುವ ಕೋಚಿಮುಲ್ ಚಿಕ್ಕಬಳ್ಳಾಪುರ ಶಿಬಿರ ಕಚೇರಿ ಆವಣದಲ್ಲಿ ನಿರ್ದೇಶಕ ಎನ್.ಸಿ.ವೆಂಕಟೇಶ್ ಅವರು ಕಟ್ಟಡ ನವೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ನಗರದ ಎಪಿಎಂಸಿ ಆವರಣದಲ್ಲಿರುವ ಕೋಚಿಮುಲ್ ಚಿಕ್ಕಬಳ್ಳಾಪುರ ಶಿಬಿರ ಕಚೇರಿ ಆವಣದಲ್ಲಿ ನಿರ್ದೇಶಕ ಎನ್.ಸಿ.ವೆಂಕಟೇಶ್ ಅವರು ಕಟ್ಟಡ ನವೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.   

ಚಿಕ್ಕಬಳ್ಳಾಪುರ: ‘ಪ್ರತಿಯೊಬ್ಬ ರೈತರು ತಮ್ಮ ರಾಸುಗಳಿಗೆ ಜೀವ ವಿಮೆ ಮಾಡಿಸುವ ಮೂಲಕ ಆಕಸ್ಮಿಕವಾಗಿ ಜರುಗುವ ರಾಸುಗಳ ಜೀವ ಹಾನಿಯಿಂದ ಉಂಟಾಗುವ ಆರ್ಥಿಕ ನಷ್ಟದ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕು’ ಎಂದು ಕೋಲಾರ–ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ನಿರ್ದೇಶಕ ಎನ್.ಸಿ.ವೆಂಕಟೇಶ್ ತಿಳಿಸಿದರು.

ನಗರದ ಎಪಿಎಂಸಿ ಆವರಣದಲ್ಲಿರುವ ಕೋಚಿಮುಲ್ ಚಿಕ್ಕಬಳ್ಳಾಪುರ ಶಿಬಿರ ಕಚೇರಿ ಕಟ್ಟಡವನ್ನು ₹59 ಲಕ್ಷ ವೆಚ್ಚದಲ್ಲಿ ನವೀಕರಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಗುಣಮಟ್ಟದ ಹಾಲು ಉತ್ಪಾದನೆ ಹಾಗೂ ರಾಸು ವಿಮೆಯಲ್ಲಿ ಜಿಲ್ಲೆಯು ಮೊದಲ ಸ್ಥಾನದಲ್ಲಿದೆ. ಈ ಸ್ಥಾನವನ್ನು ಕಾಯ್ದುಕೊಂಡು ಹೋಗುವ ನಿಟ್ಟಿನಲ್ಲಿ ರೈತರು, ಹಾಲು ಉತ್ಪಾದಕರ ಸಹಕಾರ ಸಂಘಗಳು ಒಕ್ಕೂಟಕ್ಕೆ ಸಹಕಾರ ನೀಡಬೇಕು. ವಿಮೆಯ ಪ್ರಿಮಿಯಂ ಹಣದಲ್ಲಿ ರೈತರು ಶೇ 50ರಷ್ಟು ನೀಡಿದರೆ ಸಾಕು, ಉಳಿದದ್ದು ಒಕ್ಕೂಟ ಭರಿಸುತ್ತದೆ’ ಎಂದು ಹೇಳಿದರು.

ADVERTISEMENT

‘ಈಗಾಗಲೇ ರಾಸು ವಿಮೆ ಅಭಿಯಾನ ಶುರುವಾಗಿದೆ. ವಿಮೆ ಮಾಡಿಸಲು ಓರಿಯೆಂಟಲ್ ವಿಮಾ ಕಂಪನಿ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಒಂದು ಹಸು ಮೃತಪಟ್ಟರೆ ಗರಿಷ್ಠ ₹70 ಸಾವಿರ ವರೆಗೆ ವಿಮೆ ಪರಿಹಾರ ಸಿಗುತ್ತದೆ. ವಿಮೆ ಮಾಡಿಸಲು ಜುಲೈ 30 ಕೊನೆಯ ದಿನವಾಗಿದೆ’ ಎಂದರು.

‘ಜಿಲ್ಲೆಯಲ್ಲಿ ಇವತ್ತು ಹೈನುಗಾರರು ಸಾಕಷ್ಟು ಸಮಸ್ಯೆಗಳಿಂದಾಗಿ ಜಾನುವಾರ ನಿರ್ವಹಣೆಗೆ ಕಷ್ಟಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಯೋಜನೆ ಜಾರಿಯಾಗಿರುವುದು ಹೈನುಗಾರರಿಗೆ ವರದಾನವಾಗಿದ್ದು, ಪ್ರತಿಯೊಬ್ಬ ಹೈನುಗಾರರು ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಯೋಜನೆ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

‘ಶಿಬಿರ ಕಚೇರಿ ನವೀಕರಣ ಕಾರ್ಯವನ್ನು ಗುತ್ತಿಗೆದಾರರು ಆರು ತಿಂಗಳಲ್ಲಿ ಪೂರ್ಣಗೊಳಿಸಿ ಹಸ್ತಾಂತರಿಸಬೇಕು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಸಕಾಲಕ್ಕೆ ಕೆಲಸ ಮುಗಿಸಲು ಆದ್ಯತೆ ನೀಡಬೇಕು’ ಎಂದು ಹೇಳಿದರು.

ಕೋಚಿಮುಲ್ ಚಿಕ್ಕಬಳ್ಳಾಪುರ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಪಾಪೇಗೌಡ ಮಾತನಾಡಿ, ‘ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಯೋಜನೆ ಅಡಿ ಈಗಾಗಲೇ ರೈತರಿಗೆ ಸಾಲ ಮಂಜೂರಾಗಿದೆ. ಹಸು ಇಲ್ಲದವರೂ ಈ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಲು ಜುಲೈ 30 ರ ವರೆಗೆ ಅವಕಾಶವಿದೆ. ಬಳಿಕ ಹಸು ಖರೀದಿಸಿ, ಪೂರಕ ದಾಖಲೆಗಳನ್ನು ಒದಗಿಸಿದರೆ ಸಾಲ ಮಂಜೂರಾಗುತ್ತದೆ ಎಂದು ಹೇಳಿದರು.

‘ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು ರೈತರಿಗೆ ಈ ಅರಿವು ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಾಲದ ಪ್ರಯೋಜನ ತಲುಪುವಂತೆ ನೋಡಿಕೊಳ್ಳಬೇಕು. ಅರ್ಜಿಯನ್ನು ಇಂಗ್ಲಿಷ್‍ನಲ್ಲಿ ಭರ್ತಿ ಮಾಡಬೇಕಾಗಿರುವುದರಿಂದ ರೈತರಿಗೆ ಅರ್ಜಿ ಸಲ್ಲಿಸಲು ಸಹಾಯ ಮಾಡಬೇಕು. ನೀವೇ ಅರ್ಜಿ ಭರ್ತಿ ಮಾಡಿ ಬ್ಯಾಂಕಿಗೆ ಅರ್ಜಿ ಸಲ್ಲಿಸಿ ಸ್ವೀಕೃತಿ ಪತ್ರ ಪಡೆಯಬೇಕು’ ಎಂದರು.

ಕರ್ನಾಟಕ ಪ್ರಾಂತ ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ಗುತ್ತಿಗೆದಾರ ನರಸಿಂಹಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.