ADVERTISEMENT

ನಿರ್ಭಯಾ ಅಪರಾಧಿಗಳಿಗೆ ಮರಣದಂಡನೆ ಜಾರಿ, ನಗರದಲ್ಲಿ ಸಂಭ್ರಮಾಚರಣೆ

‘ನಿರ್ಭಯಾ’ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ತಪ್ಪಿತಸ್ಥರಿಗೆ ಗಲ್ಲು, ವಿವಿಧ ಸಂಘಟನೆ ಮುಖಂಡರಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 12:35 IST
Last Updated 20 ಮಾರ್ಚ್ 2020, 12:35 IST
ಸಾಮಾಜಿಕ ಕಾರ್ಯಕರ್ತ ನಂದಿ ಪುರುಷೋತ್ತಮ್ ಅವರು ಸಿಹಿ ಹಂಚಿದರು.
ಸಾಮಾಜಿಕ ಕಾರ್ಯಕರ್ತ ನಂದಿ ಪುರುಷೋತ್ತಮ್ ಅವರು ಸಿಹಿ ಹಂಚಿದರು.   

ಚಿಕ್ಕಬಳ್ಳಾಪುರ: ‘ನಿರ್ಭಯಾ’ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ತಪ್ಪಿತಸ್ಥರನ್ನು ಶುಕ್ರವಾರ ಬೆಳಿಗ್ಗೆ ಗಲ್ಲಿಗೇರಿಸಿದ್ದನ್ನುಸ್ವಾಗತಿಸಿ ನಗರದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಮತ್ತು ನಾಗರಿಕರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.

ಈ ವೇಳೆ ಮಾತನಾಡಿದ ಹಿರಿಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್, ‘ಸುಪ್ರೀಂ ಕೋರ್ಟ್‌ನ ಈ ತೀರ್ಪು ಕಾಮುಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು, ಕಾನೂನಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಮುಂದೆ ಯಾವತ್ತೂ ದೇಶದಲ್ಲಿ ಇಂತಹ ಕೃತ್ಯಗಳು ಮರುಕಳುಹಿಸಬಾರದು’ ಎಂದು ಹೇಳಿದರು.

‘2012ರ ಡಿಸೆಂಬರ್‌ 16ರ ರಾತ್ರಿ ದೆಹಲಿಯ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಹಲ್ಲೆ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಮುಕೇಶ್‌ ಸಿಂಗ್‌, ಪವನ್‌ ಗುಪ್ತಾ, ವಿನಯ್‌ ಶರ್ಮಾ ಮತ್ತು ಅಕ್ಷಯ್‌ ಕುಮಾರ್‌ ಸಿಂಗ್‌ ಎಂಬುವರನ್ನು ತಪ್ಪಿತಸ್ಥರು ಎಂದು ಘೋಷಿಸಿದ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿತ್ತು. ಇದು ಎಲ್ಲರಿಗೂ ಪಾಠವಾಗಬೇಕು’ ಎಂದು ತಿಳಿಸಿದರು.

ADVERTISEMENT

‘ಅತ್ಯಾಚಾರದ ಘಟನೆ ನಡೆದ ಸಂದರ್ಭದಲ್ಲಿ ಜಿಲ್ಲಾ ಕೇಂದ್ರದಲ್ಲಿ ಟೈರ್‌ ಸುಟ್ಟು ಪ್ರತಿಭಟನೆ ನಡೆಸಿದ ಹೋರಾಟಗಾರರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಅನೇಕ ಮುಖಂಡರು ಇಂದಿಗೂ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದಾರೆ. ಆದರೆ, ವಿದ್ಯಾರ್ಥಿನಿಯೊಂದಿಗೆ ಅಮಾನವೀಯವಾಗಿ ವರ್ತಿಸಿದ ಕಾಮುಕರಿಗೆ ಗಲ್ಲಿಗೇರಿಸಿದ್ದು ನಮಗೆ ಸಂತಸ ಉಂಟು ಮಾಡಿದೆ’ ಎಂದರು.

‘ಸುಪ್ರೀಂ ಕೋರ್ಟ್‌ನ ತೀರ್ಪಿನಿಂದಾಗಿ ಇಡೀ ದೇಶವೇ ಇಂದು ಸಂತಸದಲ್ಲಿ ಮುಳುಗಿದೆ. ಅತ್ಯಾಚಾರದಂತಹ ಪ್ರಕರಣಗಳನ್ನು ನ್ಯಾಯಾಲಯಗಳು ತುರ್ತಾಗಿ ವಿಚಾರಣೆ ನಡೆಸಿ, ಇಂತಹ ಉಗ್ರ ಶಿಕ್ಷೆಯನ್ನು ನೀಡಬೇಕು. ಆಗಷ್ಟೇ ದೇಶದಲ್ಲಿ ಮುಂದೆ ಯಾರೂ ಇಂತಹ ಕೃತ್ಯಗಳನ್ನು ಮಾಡದಂತೆ ನಾಂದಿ ಹಾಡಬಹುದು’ ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತ ನಂದಿ ಪುರುಷೋತ್ತಮ್ ಮಾತನಾಡಿ, ‘ಇವತ್ತು ದೇಶದಲ್ಲಿ ಸಂವಿಧಾನಕ್ಕೆ ನಿಜವಾದ ಬೆಲೆ ಬಂದಿದೆ. ಭವಿಷ್ಯದಲ್ಲಿ ಎಂದೂ ಇಂತಹ ಹೀನ ಕೃತ್ಯಗಳು ದೇಶದಲ್ಲಿ ನಡೆಯಬಾರದು. ಕಾಮುಕರಿಗೆ ಇದೊಂದು ಖಡಕ್‌ ಎಚ್ಚರಿಕೆಯ ಸಂದೇಶವಾಗಿದೆ. ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರಗಳು ಮುಂದಾಗಬೇಕು’ ಎಂದು ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಚಲಪತಿ, ಯುವಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀರಾಮೇಗೌಡ, ಕಾರ್ಯಾಧ್ಯಕ್ಷ ಬಾಲು, ಮುಖಂಡರಾದ ಅಂಬರೀಶ್, ತಿಲಕ್‌ ಕುಮಾರ್, ರವಿರಾಜ್, ಮು.ಪಾಪಣ್ಣ, ಮುನೇಗೌಡ, ಆಂತೋಣಿರಾಜ್, ನಯಾಜ್, ಅನ್ವರ್, ವಿಜಯಕುಮಾರ್, ಸೋಮು, ನಂದೀಶ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.