ಚಿಂತಾಮಣಿ: ತಾಲ್ಲೂಕಿನ ದೊಡ್ಡಗಂಜೂರು–ಆನೂರು ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಶಿಕ್ಷಕಿಯನ್ನು ಅಡ್ಡಗಟ್ಟಿದ ಆರೋಪಿಗಳು, ಮಾಂಗಲ್ಯ ಸರ ಕಿತ್ತು ಪರಾರಿಯಾದ ಘಟನೆ ಗುರುವಾರ ನಡೆದಿದೆ.
ಶಿಕ್ಷಕಿ ಮೇಘನಾ ಹೆಗಡೆ ಮಾಂಗಲ್ಯ ಸರ ಕಳೆದುಕೊಂಡ ಶಿಕ್ಷಕಿ. ಅವರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಮತ್ತೊಂದು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ಆರೋಪಿಗಳು, ಕೋಡಿಹಳ್ಳಿ ತಿರುವಿನಲ್ಲಿ ಶಿಕ್ಷಕಿಯ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿದ್ದಾರೆ. ಜೊತೆಗೆ ಶಿಕ್ಷಕಿಯ ಕುತ್ತಿಗೆಗೆ ಕೈಹಾಕಿ ಬಂಗಾರದ ಸರ ಎಳೆದಿದ್ದಾರೆ. ಈ ವೇಳೆ ಶಿಕ್ಷಕಿಯು ಪ್ರತಿರೋಧ ಒಡ್ಡಿ, ಜೋರಾಗಿ ಕೂಗಿಕೊಂಡಿದ್ದಾರೆ. ಇದರಿಂದ ಆತಂಕಗೊಂಡ ಆರೋಪಿಗಳು, ತಮ್ಮ ಕೈಗೆ ಬಂದ ಅರ್ಧ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಆರೋಪಿಗಳು ಬಂದಿದ್ದ ಬೈಕ್‌ಗೆ ನೋಂದಣಿ ಸಂಖ್ಯೆ ಇರಲಿಲ್ಲ. ಜೊತೆಗೆ ಇಬ್ಬರೂ ಮುಖ ಕಾಣದಂತೆ ಹೆಲ್ಮೆಟ್ ಧರಿಸಿದ್ದರು. ಇದರಿಂದಾಗಿ ಅವರನ್ನು ಗುರುತಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಬಂದ ಗ್ರಾಮಾಂತರ ಠಾಣೆ ಪೊಲೀಸರು, ಸ್ಥಳ ಪರಿಶೀಲನೆ ಮಾಡಿದರು. ಸುತ್ತಮುತ್ತಲಿರುವ ಸಿ.ಸಿ. ಕ್ಯಾಮೆರಾ ಫುಟೆಜ್‌ಗಳನ್ನು ಸಂಗ್ರಹಿಸಿ, ಕಳ್ಳರ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.