ADVERTISEMENT

ಶಿಡ್ಲಘಟ್ಟ: ರೈತರ ಫ್ರೀಡಂ ಪಾರ್ಕ್ ಹೋರಾಟಕ್ಕೆ ಬೆಂಬಲ

ಚನ್ನರಾಯಪಟ್ಟಣ ಹೋಬಳಿ ರೈತರಿಗೆ ಜೀವಿಕ ಸೇರಿ ವಿವಿಧ ಸಂಘಟನೆಗಳ ಬಲ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 13:42 IST
Last Updated 3 ಜುಲೈ 2025, 13:42 IST
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಸುಮಾರು 13 ಹಳ್ಳಿಗಳ ರೈತರ ಭೂಸ್ವಾಧೀನಕ್ಕೆ ಮುಂದಾದ ಸರ್ಕಾರದ ಕ್ರಮದ ವಿರುದ್ಧದ ಹೋರಾಟಕ್ಕೆ ಜೀವಿಕ ಹಾಗೂ ಕರ್ನಾಟಕ ಜೀತದಾಳುಗಳ ಕೃಷಿ ಕಾರ್ಮಿಕ ಒಕ್ಕೂಟವು ಬೆಂಬಲಿಸಿತು 
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಸುಮಾರು 13 ಹಳ್ಳಿಗಳ ರೈತರ ಭೂಸ್ವಾಧೀನಕ್ಕೆ ಮುಂದಾದ ಸರ್ಕಾರದ ಕ್ರಮದ ವಿರುದ್ಧದ ಹೋರಾಟಕ್ಕೆ ಜೀವಿಕ ಹಾಗೂ ಕರ್ನಾಟಕ ಜೀತದಾಳುಗಳ ಕೃಷಿ ಕಾರ್ಮಿಕ ಒಕ್ಕೂಟವು ಬೆಂಬಲಿಸಿತು    

ಶಿಡ್ಲಘಟ್ಟ: ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ವಿರೋಧದ ನಡುವೆಯೂ ಬಲವಂತವಾಗಿ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾದ ಸರ್ಕಾರದ ಕ್ರಮವು ಖಂಡನೀಯ ಎಂದು ಜೀವಿಕ ತಾಲ್ಲೂಕು ಸಂಚಾಲಕ ಶ್ರೀನಿವಾಸ್ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿಸಿ ಇದೇ 14ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಜೀವಿಕ ಮತ್ತು ಕರ್ನಾಟಕ ಜೀತದಾಳುಗಳ ಕೃಷಿ ಕಾರ್ಮಿಕ ಒಕ್ಕೂಟವು ಪಾಲ್ಗೊಳ್ಳಲಿದೆ’ ಎಂದರು.

ಕೆಐಎಡಿಬಿ ನಿರ್ಮಾಣ ಮಾಡುವ ಕೈಗಾರಿಕೆಗಳಿಂದ ಈ ಭಾಗದ ರೈತರಿಗೆ ಏನೂ ಉಪಯೋಗವಿಲ್ಲ. ಇದರಿಂದ ವಿದೇಶಿ ಹಾಗೂ ಕಾರ್ಪೊರೇಟ್ ಸಂಸ್ಥೆಗಳಿಗೆ ಲಾಭವಾಗಲಿದೆ. ರೈತಪರ ನಿಲ್ಲಬೇಕಾದ ಸರ್ಕಾರವು ಕಾರ್ಪೊರೇಟ್ ಸಂಸ್ಥೆಗಳ ಪರ ನಿಂತಿರುವುದು ದುರದೃಷ್ಟಕರ. ಇಡೀ ದೇಶಕ್ಕೆ ಅನ್ನ ನೀಡುವ ರೈತರು ತಮ್ಮ ಭೂಮಿ ಉಳಿಸಿಕೊಳ್ಳಲು ಉಪವಾಸ ಸತ್ಯಾಗ್ರಹಕ್ಕೆ ಕುಳಿತುಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ADVERTISEMENT

ರೈತರ ಹೆಸರಿನಲ್ಲೇ ಭೂಮಿಯನ್ನು ಉಳಿಸಿಕೊಂಡು ಕೈಗಾರಿಕೆಗಳನ್ನು ಸ್ಥಾಪಿಸಿಕೊಳ್ಳಬಹುದು. ಆದರೆ, ರೈತರ ಜಮೀನುಗಳನ್ನು ಬಲವಂತವಾಗಿ ಕಸಿದುಕೊಳ್ಳುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಈ ವೇಳೆ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದ ರಾಜ್ಯ ಗೌರವಾಧ್ಯಕ್ಷ ನರಸಿಂಹಪ್ಪ, ತಾಲ್ಲೂಕು ಅಧ್ಯಕ್ಷ ಜಿ.ಮುನಿಯಪ್ಪ, ಹೋಬಳಿ ಅಧ್ಯಕ್ಷ ಗುರುಮೂರ್ತಿ, ವಿನೋದ್, ನರಸಿಂಹಮೂರ್ತಿ, ರವಿ, ತಾಲ್ಲೂಕು ಗೌರವಾಧ್ಯಕ್ಷ ಮುನಿಕೃಷ್ಣಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.