ADVERTISEMENT

ಚೇಳೂರು: ಗಡುವು ಮುಗಿದರೂ ಈಡೇರದ ಭರವಸೆ; ಲಿತ ಸಂಘರ್ಷ ಸಮಿತಿ ಮುಖಂಡ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 5:36 IST
Last Updated 22 ಜನವರಿ 2026, 5:36 IST
ಚೇಳೂರಿನಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಯಿತು
ಚೇಳೂರಿನಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಯಿತು   

ಚೇಳೂರು: ತಾಲ್ಲೂಕಿನ ದಲಿತ ಸಮುದಾಯದ ದಶಕಗಳ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ಮತ್ತು ತಾಲ್ಲೂಕು ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಬುಧವಾರ ಪಟ್ಟಣದಲ್ಲಿ ತಮಟೆ ಚಳವಳಿ ಹಾಗೂ ಪ್ರತಿಭಟನಾ ಮೆರವಣಿಗೆ ನಡೆಸಿತು.

ಕಾರ್ಯಕರ್ತರು ಜಮಾಯಿಸಿ ಪಟ್ಟಣ ಎಪಿಎಂಸಿ ಮಾರುಕಟ್ಟೆಯಿಂದ ತಹಶೀಲ್ದಾರ್ ಕಚೇರಿಯವರೆಗೆ ಘೋಷಣೆ ಕೂಗುತ್ತ ಬೃಹತ್ ಮೆರವಣಿಗೆ ನಡೆಸಿದರು.  

ಸಂಘಟನೆಯ ಮುಖಂಡರು, ಕಳೆದ ಬಾರಿ ಹನ್ನೊಂದು ದಿನಗಳ ಕಾಲ ಧರಣಿ ನಡೆಸಿದಾಗ ಭರವಸೆ ನೀಡಿದ್ದ ಅಧಿಕಾರಿಗಳು ಈವರೆಗೂ ಯಾವುದೇ ಬೇಡಿಕೆಗಳನ್ನು ಈಡೇರಿಸಿಲ್ಲ, ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುಳ್ಳು ಭರವಸೆಗಳನ್ನು ಕೊಟ್ಟು ದಲಿತ ಸಂಘಟನೆಗಳ ದಿಕ್ಕು ತಪ್ಪಿಸಿದ್ದ ಆಡಳಿತ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವ ಎಚ್ಚರಿಕೆಯನ್ನೂ ನೀಡಿದರು.

ADVERTISEMENT

ದಸಂಸ ರಾಜ್ಯ ಸಂಚಾಲಕ ಕೆ.ಸಿ. ರಾಜಾಕಾಂತ್ ಮಾತನಾಡಿ, ದಲಿತರ ಭೂಮಿ ಹಕ್ಕು, ವಸತಿ ಸೌಲಭ್ಯ ಸೇರಿದಂತೆ ಮೂಲ ಸೌಕರ್ಯಗಳ ಬಗ್ಗೆ ಅಧಿಕಾರಿಗಳು  ನಿರ್ಲಕ್ಷ್ಯ ವಹಿಸಿದ್ದಾರೆ.

ಒಂದು ವರ್ಷದ ಹಿಂದೆ ಇದೇ ತಾಲ್ಲೂಕು ಕಚೇರಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕು ಕಚೇರಿಗಳ ಮುಂದೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹನ್ನೊಂದು ದಿನಗಳ ಕಾಲ ಧರಣಿ ಮಾಡಿದ್ದೆವು. ಆಗ ಜಿಲ್ಲಾಧಿಕಾರಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿದ್ದರು ಎಂದರು.

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸುಮಾರು ಶೇ 60 ರಿಂದ 70 ರಷ್ಟು ಬೇಡಿಕೆಗಳನ್ನು ಈಡೇರಿಸಿದ್ದರು. ಆದರೆ ಚೇಳೂರು ತಾಲೂಕಿನಲ್ಲಿ ಮಾತ್ರ ಯಾವುದೇ ಬದಲಾವಣೆ ಆಗಿಲ್ಲ. ಈ ನಿಟ್ಟಿನಲ್ಲಿ 2ನೇ ಬಾರಿಗೆ ಧರಣಿ  ಹಮ್ಮಿಕೊಳ್ಳಲಾಗಿದೆ ಎಂದರು.

ತಾಲ್ಲೂಕು ಸಂಚಾಲಕ ಜಿ. ನರಸಿಂಹಪ್ಪ ಮಾತನಾಡಿ, ಸ್ಥಳೀಯ ಮಟ್ಟದ ಸಮಸ್ಯೆಗಳ ಬಗ್ಗೆ ಪಟ್ಟಿ ನೀಡಿದರೂ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದರು. ಕಲಾವಿದ ಮುನಿರೆಡ್ಡಿ  ಕ್ರಾಂತಿ ಗೀತೆಗಳನ್ನು ಹಾಡಿದರು.

ಸ್ಥಳಕ್ಕೆ ಬಂದ ತಹಶೀಲ್ದಾರ್ ಶ್ವೇತಾ ಬಿ.ಕೆ, ಒಂದು ವರ್ಷದ ಹಿಂದೆ ನೀವು ಪ್ರತಿಭಟನೆ ಮಾಡಿ ಸಲ್ಲಿಸಿದ್ದ 34 ಬೇಡಿಕೆಗಳನ್ನು ಪರಿಶೀಲಿಸಿದ್ದೇವೆ. ಈಗಾಗಲೇ ಶೇ 70 ರಷ್ಟು ಬೇಡಿಕೆಗಳನ್ನು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದರು.

ಶೇ 30 ರಷ್ಟು ಬೇಡಿಕೆಗಳಲ್ಲಿ 20 ರಷ್ಟು ಬೇಡಿಕೆಗಳು ಭೂಮಿ ವಿಚಾರದ್ದಾಗಿವೆ.  ಬಗರ್ ಹುಕುಂ ಆ್ಯಪ್ ತಾಂತ್ರಿಕ ಸಮಸ್ಯೆಯಿಂದ ಅನುಮೋದನೆ ಸಾಧ್ಯವಾಗಿಲ್ಲ. 765 ಕಡತಗಳು ಇನ್ನೂ ಬಾಕಿಯಾಗಿ ಉಳಿದಿವೆ ಎಂದರು.

ಈಗ ನೀಡಿರುವ 18 ಬೇಡಿಕೆಗಳನ್ನು ನಮ್ಮ ಹಂತದಲ್ಲಿ ನಿಯಮಾನುಸಾರ ಪರಿಹರಿಸುತ್ತೇವೆ. ಸರ್ಕಾರದ ಮಟ್ಟದಲ್ಲಿ ಬಗೆಹರಿಯಬೇಕಾದ ವಿಷಯಗಳನ್ನು ಮೇಲಧಿಕಾರಿಗಳಿಗೆ ತಿಳಿಸುತ್ತೇವೆ ಎಂದು ಭರವಸೆ ನೀಡಿದರು.

ಎನ್. ವೆಂಕಟೇಶ್, ಸಿ.ಜಿ ಗಂಗಪ್ಪ, ಎನ್.ಎ ವೆಂಕಟೇಶ್, ಪರಮೇಶ್, ಪೈಪಾಳ್ಯ ರವಿ, ಚೆಂಡೂರು ರಮಣ, ಶ್ರೀರಂಗಪ್ಪ, ಡಿ.ವಿ. ವೆಂಕಟೇಶ್, ಈಶ್ವರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.