
ಚೇಳೂರು: ತಾಲ್ಲೂಕಿನ ಚಾಕವೇಲು ಗ್ರಾಮದಿಂದ ಬಿಳ್ಳೂರಿಗೆ ಸಂಪರ್ಕಿಸುವ ಮುಖ್ಯ ರಸ್ತೆಯ ಗುಂಡಿ ಮುಚ್ಚುವ ತೇಪೆ ಕಾಮಗಾರಿ ಕಳಪೆಯಾಗಿದೆ. ಕಾಮಗಾರಿ ಮುಗಿದ ಎರಡೇ ದಿನಕ್ಕೆ ಡಾಂಬರು ಕಿತ್ತುಬರುತ್ತಿದೆ.
ಚಾಕವೇಲು ಹಾಗೂ ಬಿಳ್ಳೂರು ರಸ್ತೆ ಮಾರ್ಗದ ಸುಮಾರು 15 ರಿಂದ 20 ಕಿ.ಮೀ ವ್ಯಾಪ್ತಿಯಲ್ಲಿ ಬಿದ್ದಿದ್ದ ಗುಂಡಿಗಳನ್ನು ಮುಚ್ಚಲು ಲೋಕೋಪಯೋಗಿ ಇಲಾಖೆಯು ₹ 15 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಸಿದೆ. ಎರಡು ಮೂರು ದಿನಗಳಿಂದ ತೇಪೆ ಹಚ್ಚುವ ಕೆಲಸ ನಡೆಯುತ್ತಿದೆ.
ಆದರೆ, ರಸ್ತೆಯ ಗುಂಡಿಗಳಿಗೆ ಸರಿಯಾಗಿ ಟಾರ್ ಹಾಕಿಲ್ಲ. ಜಲ್ಲಿ ಕಲ್ಲುಗಳನ್ನು ಸುರಿದು ಅದರ ಮೇಲೆ ಡಾಂಬರು ಹಾಕಲಾಗುತ್ತಿದೆ. ಇದರಿಂದಾಗಿ ವಾಹನಗಳು ಚಲಿಸಿದ ಕೂಡಲೇ ಡಾಂಬರು ಕಿತ್ತುಬರುತ್ತಿದೆ. ಸಣ್ಣ ಜೆಲ್ಲಿ ಕಲ್ಲುಗಳು ರಸ್ತೆಯ ಮೇಲೆ ಹರಡಿವೆ.
ಇದೇ ರಸ್ತೆಯ ಗುಂಡಿಗಳಿಗೆ ವರ್ಷಕ್ಕೆ ಎರಡು ಬಾರಿ ತೇಪೆ ಹಾಕಲಾಗುತ್ತಿದೆ. ಇದು ಕೇವಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜೇಬು ತುಂಬಿಸುವ ತಂತ್ರವಾಗಿದೆ. ಸರಿಯಾದ ಗುಣಮಟ್ಟದ ಡಾಂಬರು ಮತ್ತು ಕಾಂಕ್ರಿಟ್ ಬಳಸದ ಕಾರಣ ರಸ್ತೆ ಬಿರುಕು ಬಿಡುತ್ತಿದೆ ಎಂದು ಸ್ಥಳೀಯ ಶ್ರೀನಿವಾಸಾಚಾರಿ ಆಕ್ರೋಶ ವ್ಯಕ್ತಪಡಿಸುವರು.
ಕಳಪೆ ಕಾಮಗಾರಿಯಿಂದ ರಸ್ತೆ ಮೇಲೆ ಎದ್ದು ನಿಂತಿರುವ ಜಲ್ಲಿ ಕಲ್ಲುಗಳಿಂದಾಗಿ ದ್ವಿಚಕ್ರ ವಾಹನ ಸವಾರರು ಜಾರಿ ಬೀಳುತ್ತಿದ್ದಾರೆ. ಮಳೆಗಾಲ ಮುಗಿದ ನಂತರ ತಾತ್ಕಾಲಿಕ ದುರಸ್ತಿ ನೆಪದಲ್ಲಿ ನಡೆಸುತ್ತಿರುವ ಈ ಕಾರ್ಯವು ಶಾಶ್ವತ ಪರಿಹಾರ ನೀಡುವ ಬದಲು ಸಾರ್ವಜನಿಕರ ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತಿದೆ.
ಸಾರ್ವಜನಿಕರ ತೆರಿಗೆ ಹಣವನ್ನು ಇಂತಹ ಕಳಪೆ ಕಾಮಗಾರಿಗಳ ಮೂಲಕ ವ್ಯರ್ಥ ಮಾಡುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ತಕ್ಷಣವೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.