ADVERTISEMENT

ರಾಜಕಾಲುವೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ

ಕಂದವಾರ ಕೆರೆಯಿಂದ ಅಮಾನಿಗೋಪಾಲಕೃಷ್ಣಕೆರೆಗೆ ನೀರು ಹರಿಯುತ್ತಿರುವ ಕಾಲುವೆ ವೀಕ್ಷಿಸಿದ ಸಿ.ಎಂ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 14:42 IST
Last Updated 21 ನವೆಂಬರ್ 2021, 14:42 IST
ವಾಹನಗಳ ನಡುವೆ ಸಿಲುಕಿರುವ ಆಂಬುಲೆನ್ಸ್
ವಾಹನಗಳ ನಡುವೆ ಸಿಲುಕಿರುವ ಆಂಬುಲೆನ್ಸ್   

ಚಿಕ್ಕಬಳ್ಳಾಪುರ:ಜಿಲ್ಲೆಯಲ್ಲಿ ಮಳೆಯಿಂದ ದೊಡ್ಡ ಮಟ್ಟದಲ್ಲಿ ಬೆಳೆಗಳಿಗೆ, ರಸ್ತೆಗಳಿಗೆ, ಕೆರೆಗಳಿಗೆ ಹಾನಿ ಆಗಿದೆ. ಪರಿಹಾರಕ್ಕೆ ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೆ ಒಳಗಾದ ಸ್ಥಳಗಳಿಗೆ ಮುಖ್ಯಮಂತ್ರಿ ಭಾನುವಾರ ಭೇಟಿ ನೀಡಿದ್ದರು. ಮೊದಲಿಗೆನಗರದ ಬಿಬಿ ರಸ್ತೆಯಲ್ಲಿ ಕಂದವಾರ ಕೆರೆಯಿಂದ ಅಮಾನಿಗೋಪಾಲಕೃಷ್ಣಕೆರೆಗೆ ನೀರು ಹರಿಯುತ್ತಿರುವ ಕಾಲುವೆಯನ್ನು ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ,ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟಕ್ಕೆ ಭೇಟಿ ನೀಡಲು ಬಂದಿದ್ದೇನೆ. ಚಿಕ್ಕಬಳ್ಳಾಪುರ ನಗರದಲ್ಲಿ ‌ಕೆರೆಗಳು ತುಂಬಿವೆ. ಕಂದವಾರ ಕೆರೆಯಿಂದ ಅಮಾನಿಗೋಪಾಲಕೃಷ್ಣ ಕೆರೆಗೆ ರಾಜಕಾಲುವೆ ನಿರ್ಮಿಸಲಾಗುವುದು. ಇದಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಗೊಳಿಸುವಂತೆ ಸೂಚಿಸಲಾಗಿದೆ. ಎಷ್ಟು ಹಣ ಅಗತ್ಯವಿದೆಯೋ ಅದನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ADVERTISEMENT

ಚಿಕ್ಕಬಳ್ಳಾಪುರ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಂಕ್ರಿಟ್ ಚರಂಡಿ ನಿರ್ಮಿಸಬೇಕಾಗಿದೆ. ಇದನ್ನೂ ಮಾಡುತ್ತೇವೆ. ಮನೆಗಳಿಗೆ ನೀರು ನುಗ್ಗಿರುವ ಕಡೆಗಳಲ್ಲಿ ₹ 10 ಸಾವಿರ ಪರಿಹಾರ ನೀಡಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಪೂರ್ಣ ಬಿದ್ದ ಮನೆಗಳ ಮಾಲೀಕರಿಗೆ ತಕ್ಷಣವೇ ₹ 85 ಸಾವಿರ ನೀಡಲಾಗುವುದು. ನಂತರ ಪೂರ್ಣ ಬಿದ್ದ ಮನೆಗಳಿಗೆ ₹ 5 ಲಕ್ಷ, ಭಾಗಶಃ ಬಿದ್ದ ಮನೆಗಳ ಮಾಲೀಕರಿಗೆ ₹ 3 ಲಕ್ಷ ಹಾಗೂ ಅಲ್ಪಪ್ರಮಾಣದಲ್ಲಿ ಹಾನಿ ಆಗಿದ್ದರೆ ₹ 50 ಸಾವಿರ ನೀಡಲಾಗುತ್ತದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಅವರ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ 24 ಮನೆಗಳು ಪೂರ್ಣವಾಗಿ ಬಿದ್ದಿವೆ. 1078 ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ.ಚಿಕ್ಕಬಳ್ಳಾಪುರ ನಗರದಲ್ಲಿ 55 ಮನೆಗಳಿಗೆ ಹಾನಿ ಆಗಿದೆ. ಇದರಲ್ಲಿ 13 ಮನೆಗಳು ಪೂರ್ಣವಾಗಿ ಬಿದ್ದಿವೆ. 42 ಮನೆಗಳಿಗೆ ಭಾಗಶಃ ಹಾನಿ ಆಗಿದೆ. ಜಿಲ್ಲೆಯಲ್ಲಿ ಐದು ದೊಡ್ಡ ದನಗಳು ಹಾಗೂ 46 ಕರುಗಳು ಮೃತಪಟ್ಟಿದ್ದು ಪರಿಹಾರ ನೀಡಲಾಗುವುದು ಎಂದರು.

ಬಿಬಿ ರಸ್ತೆಯ ಕಾಲುವೆಯನ್ನು ಪರಿಶೀಲಿಸಿದ ಮುಖ್ಯಮಂತ್ರಿ, ಅಲ್ಲಿಯೇ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮುಖ್ಯಮಂತ್ರಿ ಭೇಟಿಗೂ ಮುನ್ನ ಸ್ಥಳಕ್ಕೆ ಬಂದ ಸಚಿವ ಡಾ.ಕೆ.ಸುಧಾಕರ್ ಕಾಲುವೆ ಮತ್ತು ಆಸುಪಾಸಿನ ಸ್ಥಳಗಳನ್ನು ಪರಿಶೀಲಿಸಿದರು. ಈ ವೇಳೆ ನಾಗರಿಕರು ಸಮಸ್ಯೆಗಳನ್ನು ಹೇಳಿಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಕಂದಾಯ ಸಚಿವ ಆರ್.ಅಶೋಕ್, ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು ಇತರರು ಈ ವೇಳೆ ಹಾಜರಿದ್ದರು.

ಆಂಬುಲೆನ್ಸ್‌ಗೆ ಅಡ್ಡಿ

ಮುಖ್ಯಮಂತ್ರಿ ಭೇಟಿ ಸಂದರ್ಭದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು. ನಾಗರಿಕರ ಸಂಚಾರಕ್ಕೆ ತಡೆ ನೀಡಿದ್ದರು. ಈ ವೇಳೆ ಬೆಂಗಳೂರಿನತ್ತ ತೆರಳಲು ಬಂದ ಆಂಬುಲೆನ್ಸ್ ಜನರ ನಡುವೆ ಸಿಕ್ಕಿತು. ಇದನ್ನು ಕಂಡ ತಕ್ಷಣವೇ ಪೊಲೀಸರು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಆಂಬುಲೆನ್ಸ್ ಮುಂದಕ್ಕೆ ಸಾಗಿತು. ‌

ಕಲ್ಲು, ಮಣ್ಣು ದಿಢೀರ್ ತೆರವು

ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ ಬಿಬಿ ರಸ್ತೆಯ ಒಂದು ಬದಿ ಇದ್ದ ಕಲ್ಲುಗಳನ್ನು ನಗರಸಭೆ ಸಿಬ್ಬಂದಿ ಬೆಳಿಗ್ಗೆಯೇ ದಿಢೀರ್ ತೆರವುಗೊಳಿಸಿದರು. ಮುಖ್ಯಮಂತ್ರಿ ಬರುವ ಹಿನ್ನೆಲೆಯಲ್ಲಿ ಆ ಸ್ಥಳ ಉತ್ತಮವಾಗಿ ಕಾಣುವಂತೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.