
ಚಿಕ್ಕಬಳ್ಳಾಪುರ: ಜಿಲ್ಲೆಯ ಯಾವುದೇ ಭಾಗದಲ್ಲಿ ಜೀತ ಪದ್ಧತಿಯ ಪ್ರಸಂಗಗಳು ಕಂಡುಬಂದಲ್ಲಿ ಸಹಾಯವಾಣಿ 1552ಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ.ನವೀನ್ ಭಟ್ ಮನವಿ ಮಾಡಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜೀತ ಕಾರ್ಮಿಕ ಪದ್ಧತಿ ನಿರ್ಮೂಲನಾ ದಿನಾಚರಣೆ ಹಾಗೂ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶೇ 85 ರಷ್ಟು ಕುಟುಂಬಗಳು ಇಂದು ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತವೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಆದ್ದರಿಂದ ಯಾವುದೇ ಹಳ್ಳಿ, ನಗರದಲ್ಲಿ ಯಾರಿಗೂ ಗೊತ್ತಿಲ್ಲದ ರೀತಿ ಯಾರಿಂದಲೂ ಬಲವಂತದ ಹಾಗೂ ಬಂಧನದ ದುಡಿಮೆ ಮಾಡಿಸಲು ಸಾಧ್ಯವಿಲ್ಲ ಎಂದರು.
ಅಕ್ಕ ಪಕ್ಕದ ವಾಸಿಗಳಿಗೆ ಈ ಮಾಹಿತಿ ಗೊತ್ತಿರುತ್ತದೆ. ಅಂತಹವರು ದೊಡ್ಡ ಮನಸ್ಸು ಮಾಡಿ ಸಹಾಯವಾಣಿಗೆ ಕರೆ ಮಾಡಿದರೆ ಸಕ್ಷಮ ಪ್ರಾಧಿಕಾರಗಳು ಜೀತ ವಿಮುಕ್ತಿ ಕಾರ್ಯ ಹಾಗೂ ಪುನರ್ವಸತಿ ಕಾರ್ಯಗಳನ್ನು ಕೈಗೊಳ್ಳುವರು. ಜೀತ ಪದ್ಧತಿಗೆ ದೂಡಿದ ಹಾಗೂ ಸಹಕಾರ ನೀಡಿದ ಎಲ್ಲರನ್ನೂ ಕಾನೂನು ಕ್ರಮಕ್ಕೆ ಒಳಪಡಿಸಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ತಿಳಿಸಿದರು.
1800ರ ಕಾಲಘಟ್ಟದಲ್ಲಿ ಜಮೀನ್ದಾರಿ ಪದ್ಧತಿ, ಜಾಜ್ ಮಾನಿ ಪದ್ಧತಿಗಳಿಂದ ಜೀತ ಪದ್ಧತಿ ಆರಂಭವಾಯಿತು. ಯಾವುದೋ ಅನಿವಾರ್ಯ ಸಂದರ್ಭಗಳಲ್ಲಿ ಸಾಮಾಜಿಕ ಅಸಮಾನತೆ ಹಾಗೂ ಬಡತನದ ಕಾರಣದಿಂದ ಸಾಲ ಪಡೆದು ಸಾಲಕ್ಕೆ ಪ್ರತಿಯಾಗಿ ಬಲವಂತದ ದುಡಿಮೆಗೆ ಸಿಲುಕಿಕೊಂಡ ಪ್ರಕರಣಗಳು ಸಾಕಷ್ಟು ನಡೆದಿವೆ ಎಂದು ಹೇಳಿದರು.
ಇಂತಹ ಅನಿಷ್ಟ ಪದ್ಧತಿ ನಿರ್ಮೂಲನೆಗೆ 1975ರಲ್ಲಿ ಜೀತ ಪದ್ಧತಿ ನಿರ್ಮೂಲನಾ ಕಾಯ್ದೆ ಜಾರಿಗೆ ಬಂದಿತು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈವರೆಗೆ 2,352 ಕಾರ್ಮಿಕರನ್ನು ಜೀತ ವಿಮುಕ್ತಿಗೊಳಿಸಿ ಪುನರ್ವಸತಿ ಕಲ್ಪಿಸುವ ಕಾರ್ಯವನ್ನು ಮಾಡಲಾಗಿದೆ ಎಂದು ಹೇಳಿದರು.
ಜೀತ ವಿಮೋಚನೆಗಾಗಿ ಜಿಲ್ಲೆಯಲ್ಲಿ ಪ್ರಯತ್ನಿಸುತ್ತಿರುವ ಸಂಘಟನೆಗಳು ಜೀತ ವಿಮುಕ್ತಿ ಪ್ರಕ್ರಿಯ ಮಾರ್ಗಸೂಚಿಯಲ್ಲಿ ಹಲವು ಸುಧಾರಣೆ ತರಬೇಕು ಎಂದು ಮನವಿ ಮಾಡಿವೆ. ಈ ಬಗ್ಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ಮಾಡಿ ಕೈಗೊಂಡ ನಿರ್ಣಯಗಳನ್ನು ರಾಜ್ಯ ಮಟ್ಟಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪಾ ಅವರು ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ಜೀತ ಪದ್ಧತಿ ಇನ್ನೂ ಜೀವಂತ ಇದೆ ಎಂದರೆ ಎಲ್ಲರೂ ನಾಚಿಕೆ ಪಟ್ಟುಕೊಳ್ಳಬೇಕು. ಉಳ್ಳವರಿಂದ ಸಾಲ ಪಡೆದು, ಸಾಲ ಪಡೆದವರ ಮಕ್ಕಳು, ಮೊಮ್ಮಕ್ಕಳು ಉಳ್ಳವರ ಮನೆಯಲ್ಲಿ ಕೆಲಸ ಮಾಡುವಂತದ್ದನ್ನು ನಾವು ಕೇಳಿದ್ದೇವೆ, ಅಲ್ಲಲ್ಲಿ ಕಂಡಿದ್ದೇವೆ. ಆದರೆ ಇಂದಿನ ಕಾಲಘಟ್ಟದಲ್ಲಿ ಜೀತ ಪದ್ಧತಿಯು ಬೇರೆ ರೂಪವನ್ನು ಪಡೆಯುತ್ತಿದೆ ಎಂದರು.
ನಗರ ಪ್ರದೇಶದಲ್ಲಿ ಮನೆ, ಅಂಗಡಿಗಳಲ್ಲಿ ಕೆಲಸ ಹಾಗೂ ಮಕ್ಕಳನ್ನು ನೋಡಿಕೊಳ್ಳಲು ಬಲವಂತದ ದುಡಿಮೆ ಮಾಡಿಸುತ್ತಿರುವುದು ಇನ್ನೂ ಜೀವಂತವಾಗಿದೆ. ಅಂತಹ ಪ್ರಸಂಗಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿ ತಡೆಗಟ್ಟಬೇಕು ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ವಿ.ಅಭಿಲಾಷ್ ಮಾತನಾಡಿ, ಉಳಿಗಮಾನ್ಯ ಪದ್ಧತಿಯಿಂದ ಆರಂಭವಾದ ಜೀತಪದ್ಧತಿ ಇಂದು ಬೇರೆ ಆಯಾಮಗಳನ್ನು ಪಡೆದು ಸಮಾಜದಲ್ಲಿ ಅಲ್ಲಲ್ಲಿ ಕಂಡು ಬರುತ್ತಿದೆ. ಕಾರ್ಪೊರೇಟ್ ಜಗತ್ತಿನಲ್ಲೂ ಜೀತ ಪದ್ಧತಿ ಕಾಣಿಸಿಕೊಳ್ಳುತ್ತಿದೆ. ರೂಪಾಂತರಗೊಂಡಿರುವ ಜೀತಪದ್ಧತಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಆಡಳಿತಗಾರರು ಕಾರ್ಯೋನ್ಮುಖವಾಗಬೇಕು ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಜೀತ ವಿಮುಕ್ತಿಯ ಬಗ್ಗೆ ಅರಿವು ಪ್ರತಿಜ್ಞಾವಿಧಿ ಬೋಧಿಸಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅತಿಕ್ ಪಾಷಾ, ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ಜೀತ ವಿಮುಕ್ತಿಗೆ ಪ್ರಯತ್ನ ಮಾಡುತ್ತಿರುವ ಮುಖಂಡರಾದ ಕಿರಣ್ ಕಮಲ್ ಪ್ರಸಾದ್, ನಾರಾಯಸ್ವಾಮಿ, ರತ್ನಮ್ಮ, ಗಂಗಾಧರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ಜೀತ ವಿಮುಕ್ತರು ಪಾಲ್ಗೊಂಡಿದ್ದರು.
‘ಕಾರ್ಮಿಕರ ಮಾಹಿತಿ’
ಜಿಲ್ಲೆಯಲ್ಲಿರುವ ಇಟ್ಟಿಗೆ ಕಾರ್ಖಾನೆಗಳು ಕೋಳಿ ಫಾರಂಗಳು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರ ಮಾಹಿತಿ ಪಡೆಯಬೇಕು. ಯಾರೊಬ್ಬರು ಜೀತ ಪದ್ಧತಿಗೆ ಸಿಲುಕಿಕೊಳ್ಳದಂತೆ ಕ್ರಮವಹಿಸಲಾಗುವುದು. ಈ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಡಾ.ವೈ.ನವೀನ್ ಭಟ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.