ADVERTISEMENT

ಚಿಕ್ಕಬಳ್ಳಾಪುರ: ಮಧ್ಯಾಹ್ನದ ನಂತರ ಗಣತಿ ಆರಂಭ

ಚಿಕ್ಕಬಳ್ಳಾಪುರದ 18ನೇ ವಾರ್ಡ್‌ನಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 4:21 IST
Last Updated 23 ಸೆಪ್ಟೆಂಬರ್ 2025, 4:21 IST
ಚಿಕ್ಕಬಳ್ಳಾಪುರದಲ್ಲಿ ಗಣತಿಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ
ಚಿಕ್ಕಬಳ್ಳಾಪುರದಲ್ಲಿ ಗಣತಿಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸೋಮವಾರದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಚಾಲನೆ ದೊರೆಯಿತು. ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಚಿಕ್ಕಬಳ್ಳಾಪುರದ 18ನೇ ವಾರ್ಡ್‌ನ ಪೆದ್ದಲಕ್ಷ್ಮಿ ಎಂಬುವರ ಮನೆಯಿಂದ ಗಣತಿ ಆರಂಭಿಸಿದರು. ಈ ಮೂಲಕ ಜಿಲ್ಲೆಯಲ್ಲಿ ಸಮೀಕ್ಷೆಗೆ ವಿಧ್ಯುಕ್ತವಾಗಿ ಚಾಲನೆ ದೊರೆಯಿತು.

‘ಸಮೀಕ್ಷೆ ಕಾರ್ಯದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಮೀಕ್ಷೆ ಸಂಬಂಧ ಗೊಂದಲಗಳು ಇದ್ದರೆ ಮಾಹಿತಿ ಪಡೆಯಲು ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕರು ಈ ಸಹಾಯವಾಣಿಗಳ ನೆರವು ಪಡೆಯಬಹುದು ಎಂದು ಹೇಳಿದರು.

ಜಿಲ್ಲೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳ ಶಿಕ್ಷಕರು ಮತ್ತು ಇತರ ಇಲಾಖೆಯ ಸಿಬ್ಬಂದಿ ಸಮೀಕ್ಷೆ ನಡೆಸುತ್ತಿದ್ದಾರೆ. ಅವರೆಲ್ಲರಿಗೂ ಈಗಾಗಲೇ ತರಬೇತಿ ನೀಡಲಾಗಿದೆ. ಮೊಬೈಲ್‌ ಆ್ಯಪ್‌ ಮೂಲಕವೇ ಸಮೀಕ್ಷೆ ನಡೆಯುತ್ತಿರುವುದರಿಂದ, ಆ್ಯಪ್ ಬಗ್ಗೆಯೂ ಮಾಹಿತಿ ನೀಡಿ ತರಬೇತಿ ನೀಡಲಾಗಿದೆ ಎಂದರು.

ADVERTISEMENT

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 974 ಆಶಾ ಕಾರ್ಯಕರ್ತೆಯರಿಂದ ಸಮೀಕ್ಷೆಯ ನಮೂನೆ ಪ್ರತಿ ಮನೆಗೆ ತಲುಪಿಸಲಾಗಿದೆ. ಬೆಸ್ಕಾಂ ನಲ್ಲಿ ನೋಂದಣಿ ಆಗಿರುವ 3,69,000 (ಆರ್.ಆರ್ ಸಂಖ್ಯೆ ಹೊಂದಿರುವ) ಕುಟುಂಬಗಳ ಆರ್.ಆ‌ರ್ ಸಂಖ್ಯೆಗಳಿಗೆ ಜಿಯೊ ಟ್ಯಾಗ್ ಮಾಡಲಾಗಿದೆ. ಪ್ರತಿ ಗಣತಿದಾರರಿಗೆ 120 ರಿಂದ 150 ಕುಟುಂಬಗಳಂತೆ ಬ್ಲಾಕ್ ವಿಂಗಡಿಸಿ ಹಂಚಿಕೆ ಮಾಡಲಾಗಿದೆ. ಪ್ರತಿ 20 ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದರು.

ಎಲ್ಲಾ ಮೇಲ್ವಿಚಾರಕರು ಸಮೀಕ್ಷೆಯ ಪ್ರಗತಿಯ ವಿವರವನ್ನು ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾ‌ರರಿಗೆ ಪ್ರತಿ ದಿನ ವರದಿ ಮಾಡಲು ಸೂಚನೆ ನೀಡಲಾಗಿದೆ. ಸಮೀಕ್ಷೆ ಸುಗಮವಾಗಿ ನಡೆಯಲು ಗ್ರಾಮ ಪಂಚಾಯತಿವಾರು ಮತ್ತು ನಗರ ಪ್ರದೇಶವಾರು ಪ್ರತ್ಯೇಕ ತಂಡ ರಚಿಸಿ ಈ ತಂಡವು ಮೇಲುಸ್ತುವಾರಿ ಕಾರ್ಯ ನಿರ್ವಹಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಸಮೀಕ್ಷೆ ಮಾಡಲು ಮನೆಗೆ ಬರುವ ಗಣತಿದಾರರಿಗೆ ಜನರು ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕು. ಪಡಿತರ ಚೀಟಿ, ಮನೆಯಲ್ಲಿರುವ ಎಲ್ಲರ ಆಧಾರ್ ಕಾರ್ಡ್‌, ಅಂಗವಿಕಲರ ಕಾರ್ಡ್, ಚುನಾವಣಾ ಗುರುತಿನ ಚೀಟಿ ಹಾಗೂ ಇತರೆ ದಾಖಲೆಗಳನ್ನು ತೋರಿಸಬೇಕು. ಮಾಹಿತಿ ನೀಡಿದ ನಂತರ, ಎಲ್ಲ ಮಾಹಿತಿ ಖಚಿತಪಡಿಸಿಕೊಳ್ಳಬೇಕು' ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಉಪ ವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮುನಿರತ್ನಮ್ಮ, ತಹಶೀಲ್ದಾ‌ರ್ ರಶ್ಮಿ, ನಗರಸಭೆ ಪೌರಾಯುಕ್ತ ಮನ್ಸೂ‌ರ್ ಆಲಿ, ತಾಲ್ಲೂಕು ಅಧಿಕಾರಿ ಬೀರೇಗೌಡ, ನಿಲಯ ಪಾಲಕ ಡಿ.ವೈ. ಮಂಜುನಾಥ್ ಮತ್ತು ವೇಣು ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. 

ಸಹಾಯವಾಣಿ ಕೇಂದ್ರ ಸ್ಥಾಪನೆ

ಸಮೀಕ್ಷೆಯ ಸಂಬಂಧ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಹಾಯವಾಣಿ ಇದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮುನಿರತ್ನಮ್ಮ ತಿಳಿಸಿದ್ದಾರೆ. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿ ಪತ್ರಾಂಕಿತ ವ್ಯವಸ್ಥಾಪಕ ರಾಮಾನುಜಂ ಎಚ್. 9972228018 ರವಾನೆ ಸಹಾಯಕ ನರೇಂದ್ರ ಡಿ. 9980612618 ಸಂಪರ್ಕಿಸಬಹುದು. ತಾಲ್ಲೂಕು ಮಟ್ಟದ ಸಹಾಯವಾಣಿ ಕೇಂದ್ರಗಳಲ್ಲಿ ಬಾಗೇಪಲ್ಲಿ ಮತ್ತು ಚೇಳೂರು ತಾಲ್ಲೂಕು ಮಂಜುನಾಥ ಕುಮಾರ್ 9731439008 ರಾಮಚಂದ್ರಪ್ಪ 9916330633 ಚಿಕ್ಕಬಳ್ಳಾಪುರ  ವೇಣು ವಿ.ಎನ್ 9901714317 ಮಿಥುನ್ ಎಂ. 8184058689 ಚಿಂತಾಮಣಿ ತಾಲ್ಲೂಕು ತಿಮ್ಮಯ್ಯ ಎ.ಜಿ 7899306486 ವಿಜಯ ಲಕ್ಷ್ಮಿ 9900505605 ಗೌರಿಬಿದನೂರು ಮತ್ತು ಮಂಚೇನಹಳ್ಳಿ ತಾಲ್ಲೂಕು ಬಸಪ್ಪ ಗಂಜಿಹಾಳ್ 9972554954 ರಘು 7760275737 ಗುಡಿಬಂಡೆ ತಾಲ್ಲೂಕು ಚಂದ್ರಶೇಖರ್  ಆರ್. 8123490302 ಮುರಳಿ 9902039886 ಶಿಡ್ಲಘಟ್ಟ ತಾಲ್ಲೂಕು ಸುನಿಲ್ ಕುಮಾರ್ 8123294606 ಆನಂದ್-9164875743 ಸಂಪರ್ಕಿಸಬಹುದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.